ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಆಯೋಜಿಸಲಾದ ವಿದ್ಯಾರ್ಥಿ ವೇದಿಕೆಯ ಎಸ್ಪಿ ಕುಶಲ್ ಚೌಕ್ಸೆ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪ್ರಸ್ತುತ ದೇಶದಲ್ಲಿ ಜಾರಿಗೆ ಬಂದಿರುವ ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಕಾನೂನು ವಿದ್ಯಾರ್ಥಿಗಳು ಆಳವಾದ ಅಧ್ಯಯನ ನಡೆಸಿ ಸ್ಪಷ್ಟ ಅರಿವು ಬೆಳೆಸಿಕೊಳ್ಳಬೇಕು ಎಂದು ಎಸ್ಪಿ ಕುಶಲ್ ಚೌಕ್ಸೆ ಹೇಳಿದರು.

ಸರಸ್ವತಿ ಕಾನೂನು ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2026-27ನೇ ಸಾಲಿನ ವಿದ್ಯಾರ್ಥಿ ಕಾನೂನು ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ , ಮಾನವ ಹಕ್ಕುಗಳ ವೇದಿಕೆ, ರೆಡ್‌ಕ್ರಾಸ್ ಘಟಕ, ಇಕೋ ಕ್ಲಬ್ ಹಾಗೂ ಕ್ರೀಡಾ ಚಟುವಟಿಕೆಗಳ ಸಂಯುಕ್ತ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಸದಾ ಕಾನೂನಿನ ಚೌಕಟ್ಟಿನಲ್ಲಿ ನಿಂತು ನ್ಯಾಯ ಎತ್ತಿಹಿಡಿಯುವುದು ಕರ್ತವ್ಯ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾಲೇಜಿಗೆ ದ್ವಿಚಕ್ರ ವಾಹನಗಳಲ್ಲಿ ಬರುವ ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಧರಿಸುವುದನ್ನು ಕಾಲೇಜು ಆಡಳಿತ ಮಂಡಳಿಯು ಕಡ್ಡಾಯಗೊಳಿಸಬೇಕು ಎಂದು ಸಲಹೆ ನೀಡಿದರು.

ಪೊಲೀಸ್ ಇಲಾಖೆ ಹಾಗೂ ವಕೀಲರು ಇಬ್ಬರೂ ಸಂತ್ರಸ್ತರ ಮತ್ತು ನೊಂದವರ ಪರ ಕೆಲಸ ಮಾಡಿದರೆ ಮಾತ್ರ ಸಮಾಜದಲ್ಲಿ ನೈಜ ನ್ಯಾಯ ದೊರೆಯಲು ಸಾಧ್ಯ. ಪೊಲೀಸ್ ಇಲಾಖೆಯ ಮೇಲೆ ಜನರಲ್ಲಿ ವಿಶ್ವಾಸ ಹೆಚ್ಚಿಸಲು ಮತ್ತು ಜನಸ್ನೇಹಿ ವಾತಾವರಣ ನಿರ್ಮಿಸಲು ಇಲಾಖೆಯಿಂದ ಪ್ರತಿ ಶುಕ್ರವಾರ ತೆರೆದ ಮನೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಕಾನೂನು ವಿದ್ಯಾರ್ಥಿಗಳು ಯಶಸ್ವಿ ವಕೀಲರಾಗಲು ಧೈರ್ಯ, ಸಾಮರ್ಥ್ಯ ಹಾಗೂ ಚಾರಿತ್ರ್ಯ ಎಂಬ ಮೂರು ಅಂಶಗಳ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಹಕ್ಕುಗಳಿಗಾಗಿ ಹೋರಾಡುವಾಗ ಕಾನೂನಿನಲ್ಲಿರುವ ವಿನಾಯಿತಿ ಮತ್ತು ಮಿತಿಗಳ ಕಡೆಯೂ ಗಮನ ಹರಿಸಬೇಕು. ಅಲ್ಲದೆ ಸಮಾಜದಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮ ಹೆಚ್ಚಾಗಿ ನಡೆಸಬೇಕು ಎಂದು ಮನವಿ ಮಾಡಿದರು.

ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷ ಹಾಗೂ ಹಿರಿಯ ವಕೀಲ ಫಾತ್ಯರಾಜನ್ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಕಾರ್ಯದರ್ಶಿ ಡಿ.ಕೆ. ಶೀಲಾ, ಸದಸ್ಯ ರಾಮು, ಪ್ರಾಚಾರ್ಯ ಎಂ.ಎಸ್ ಸುಧಾದೇವಿ, ಸಹಾಯಕ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿ ಕಾನೂನು ವೇದಿಕೆಯ ಗೌರವಾಧ್ಯಕ್ಷ ಡಾ.ಕರಿಯಣ್ಣಕೆ.ಎಸ್, ಕಾನೂನು ವೇದಿಕೆಯ ಪದಾಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.