ಗೋಪನಹಳ್ಳಿಯಲ್ಲಿ ದಿಢೀರ್‌ ಉಲ್ಬಣಗೊಂಡ ಕಾಲರಾ; ವೈದ್ಯರ ತಂಡ ಮೊಕ್ಕಾಂ

| Published : Jun 02 2024, 01:46 AM IST

ಗೋಪನಹಳ್ಳಿಯಲ್ಲಿ ದಿಢೀರ್‌ ಉಲ್ಬಣಗೊಂಡ ಕಾಲರಾ; ವೈದ್ಯರ ತಂಡ ಮೊಕ್ಕಾಂ
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ದಿಢೀರನೇ ವಾಂತಿ ಬೇಧಿ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮದ ಮನೆ, ಮನೆಗೂ ತೆರಳಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ ವೈದ್ಯೆ ಬಿಂದುಶ್ರೀ ಹಾಗೂ ತಂಡ ಗ್ರಾಮದಲ್ಲೇ ಮೊಕ್ಕಾಂ ಹೂಡಿದೆ.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮದ ೨೦ಕ್ಕೂ ಹೆಚ್ಚು ಜನರು ವಾಂತಿ, ಬೇಧಿಯಿಂದ ದಿಢೀರ್ ಅಸ್ವಸ್ಥಗೊಂಡು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದು, ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿಂದುಶ್ರೀ ತಿಳಿಸಿದ್ದಾರೆ.

ಗ್ರಾಮದ ಕುಡಿಯುವ ನೀರಿನ ಪೈಪ್‌ ಮೂಲಕ ಬರುತ್ತಿರುವ ನೀರು ಸೇವಿಸಿದ ಗ್ರಾಮಸ್ಥರಿಗೆ ವಾಂತಿ, ಬೇಧಿ ಆರಂಭವಾಗಿದ್ದು, ಕೂಡಲೇ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕಳೆದ ಮೇ ೨೯, ೩೦, ೩೧ ಮೂರು ದಿನಗಳ ಕಾಲವೂ ಗ್ರಾಮದ ಜನರು ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡು ಗಾಬರಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೂನ್ ೧ರಂದು ಸಮೀಪದ ರೆಡ್ಡಿಹಳ್ಳಿ ಗ್ರಾಮದಲ್ಲೂ ಸಹ ಗೌರಮ್ಮ (೫೨), ಸಿದ್ದೇಶ್ (೩೦), ಮಧು(೧೭) ಇವರು ಸಹ ವಾಂತಿಬೇಧಿ ಯಿಂದ ಆಸ್ವಸ್ಥರಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದಲ್ಲಿ ಹೀಗೆ ದಿಢೀರನೇ ವಾಂತಿ ಬೇಧಿ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಗ್ಯಾಧಿಕಾರಿಗಳ ತಂಡ ಗ್ರಾಮದಲ್ಲಿ ಮೊಕ್ಕಾಂ ಹೂಡಿದೆ.

ವಾಂತಿ, ಬೇದಿಯಿಂದ ಜನರು ಗಾಬರಿಗೊಂಡ ಹಿನ್ನೆಲೆಯಲ್ಲಿ ವೈದ್ಯೆ ಡಾ.ಬಿಂದುಶ್ರೀ ಆಸ್ಪತ್ರೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. ವೈದ್ಯರ ತಂಡ ಮನೆ, ಮನೆಗೂ ಭೇಟಿ ನೀಡಿ ಗ್ರಾಮಸ್ಥರಿಗೆ ಕಾಯಿಸಿ ಆರಿಸಿದ ನೀರನ್ನು ಸೇವಿಸುವಂತೆ ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಯಾರೂ ಸಹ ವಾಂತಿ, ಬೇಧಿ ಕಾಣಿಸಿಕೊಂಡಲ್ಲಿ ತಡಮಾಡದೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ. ಈಗಾಗಲೇ ಆಶಾ ಕಾರ್ಯಕರ್ತೆಯರ ಸಹಕಾರದಿಂದ ಗ್ರಾಮದ ಮನೆ, ಮನೆಗೂ ತೆರಳಿ ಗ್ರಾಮಸ್ಥರಿಗೆ ಸೂಕ್ತ ಸಲಹೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗವೂ ಸ್ಥಳದಲ್ಲೇ ಇದ್ದು ಜನರ ಆರೋಗ್ಯ ಬಗ್ಗೆ ಗಮನಹರಿಸುತ್ತಿದೆ.

ವೈದ್ಯಾಧಿಕಾರಿ ಡಾ.ಬಿಂದುಶ್ರೀ ಮಾತನಾಡಿ, ಗ್ರಾಮದಲ್ಲಿ ದಿಢೀರನೇ ವಾಂತಿಬೇಧಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರು ಕೂಡಲೇ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಪತ್ರ ಮುಖೇನ ಮಾಹಿತಿ ನೀಡಿದ್ದು, ಗ್ರಾಮದ ನೀರಿನ ತೊಟ್ಟಿ, ಚಂರಡಿ ಸ್ವಚ್ಛಗೊಳಿಸಿ, ಪೈಪ್‌ಗಳನ್ನು ಸರಿಪಡಿಸಬೇಕೆಂದು ಸೂಚನೆ ನೀಡಿದ್ದಾರೆ. ನೀರಿನ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಿ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.