ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ, ಸಂಶೋಧನಾ ಪ್ರವೃತ್ತಿ ಹಾಗೂ ನಾವೀನ್ಯತೆಯನ್ನು ಬೆಳೆಸುವಲ್ಲಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ.

ಗದಗದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ

ಯುವ ಪ್ರತಿಭೆಗಳ ಸಂಶೋಧನಾ ಚಿಂತನೆ ಅನಾವರಣ

ಕನ್ನಡಪ್ರಭ ವಾರ್ತೆ ಗದಗ

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ, ಸಂಶೋಧನಾ ಪ್ರವೃತ್ತಿ ಹಾಗೂ ನಾವೀನ್ಯತೆಯನ್ನು ಬೆಳೆಸುವಲ್ಲಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಇಂತಹ ವೇದಿಕೆಗಳು ಅತ್ಯಗತ್ಯ ಎಂದು ಡಯಟ್‌ನ ಹಿರಿಯ ಉಪನ್ಯಾಸಕ ಬಿ.ಎಫ್. ಅರವಟಗಿ ಹೇಳಿದರು.

ಗದಗ ​ನಗರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಜಿಪಂ ಗದಗ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಜ್ಞಾನ ಶಿಕ್ಷಕ ಹಾಗೂ ಉಪನಿರ್ದೇಶಕರ ಕಚೇರಿಯ ತಾಂತ್ರಿಕ ಸಹಾಯಕ ಎಂ.ಎಚ್. ಸವದತ್ತಿ, 1993ರಲ್ಲಿ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ಆಶ್ರಯದಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮವು 10ರಿಂದ 17 ವರ್ಷದೊಳಗಿನ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವ ಉತ್ತಮ ವೇದಿಕೆಯಾಗಿದೆ ಎಂದರು.

ಡಯಟ್ ಉಪನ್ಯಾಸಕ ಜಿ.ಡಿ. ದಾಸರ ಮಾತನಾಡಿ, ವಿವಿಧ ಸಸ್ಯಗಳ ಉಪಯೋಗಗಳು ಹಾಗೂ ಅವು ಹೊರಸೂಸುವ ಅನಿಲಗಳ ಕುರಿತು ವೈಜ್ಞಾನಿಕ ಮಾಹಿತಿ ನೀಡಿದರು.

​ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಯೋಜನೆಗಳನ್ನು ಮಂಡಿಸಿ, ಸಂಶೋಧನಾ ಚಿಂತನೆಯನ್ನು ಅನಾವರಣಗೊಳಿಸಿದರು. ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಮುಲ್ಕಿ ಗೌಡ್ರ ಹಾಗೂ ಮುರಾರ್ಜಿ ದೇಸಾಯಿ ವಸತಿ ಪದವಿಪೂರ್ವ ಮಹಾವಿದ್ಯಾಲಯದ ಮುಬಶಿರಿನ್ ಡಂಬಳ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

​ಕಾರ್ಯಕ್ರಮದಲ್ಲಿ ಮಂಜುನಾಥ, ಬಸವರಾಜ, ವಿವಿಧ ಶಾಲೆಗಳ ಮಾರ್ಗದರ್ಶಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಲಾವತಿ ಹೂಲಗೇರಿ ಪ್ರಾರ್ಥಿಸಿದರು. ಎಂ.ಎಚ್. ಸವದತ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.​ಫಲಿತಾಂಶ

​ಪ್ರಥಮ ಸ್ಥಾನ: ನಿಧಿ ಎ. ಹಾಗೂ ಹರ್ಷಿತ ವಿ. ಜಾನ್ಮನಿ (ಸಿಡಿಒ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗದಗ). ​ದ್ವಿತೀಯ ಸ್ಥಾನ: ಮಾಲತೇಶ್ ಬಸವರಾಜ ಮಲ್ಲೂರ ಹಾಗೂ ಮಹಾಂತಗೌಡ ಸಂಗನಗೌಡ ಪಾಟೀಲ (ಬ್ರೈಟ್ ಹಾರಿಜನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕಳಸಾಪುರ, ಗದಗ ಗ್ರಾಮೀಣ).ಸ್ಥಳೀಯ ಸಮಸ್ಯೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಗುರುತಿಸಿ, ಪ್ರಯೋಗಗಳ ಮೂಲಕ ಕಲಿಯುವುದು ಮತ್ತು ಸುಸ್ಥಿರ ಅಭಿವೃದ್ಧಿಯ ಅರಿವು ಮೂಡಿಸುವುದು ಈ ಸಮಾವೇಶದ ಪ್ರಮುಖ ಆಶಯವಾಗಿದೆ.

ಎಂ. ಎಚ್. ಸವದತ್ತಿ, ತಾಂತ್ರಿಕ ಸಹಾಯಕರು (ಡಿಡಿಪಿಐ ಕಚೇರಿ)