ಸಾರಾಂಶ
ಶಿವಮೊಗ್ಗ: ಮಾಮ್ಕೋಸ್ ಚುನಾವಣೆಯಲ್ಲಿ ಅಧಿಕಾರಿ ಚುಕ್ಕಾಣಿ ಹಿಡಿಯುವ ದುರುದ್ದೇಶದಿಂದ ಎದುರಾಳಿ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಅಭ್ಯರ್ಥಿಗಳು ಹಣದ ಅಮೀಷ ಜೊತೆಗೆ ವಾಮಮಾರ್ಗದ ಹಾದಿಯ ಮೂಲಕ ಷೇರುದಾರರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದರ ನಡುವೆಯೂ ಷೇರುದಾರು ಸಹಕಾರ ಭಾರತಿ ಅಭ್ಯರ್ಥಿಗಳನ್ನು ಕೈ ಹಿಡಿದಿದ್ದಾರೆ ಎಂದು ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಮಹೇಶ್ ಎಚ್.ಎಸ್.ಹುಲ್ಕುಳಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳವಾರ ನಡೆದ ಮಾಮ್ಕೋಸ್ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಪುನಃ ಸಹಕಾರ ಭಾರತಿ ಆಡಳಿತ ಚುಕ್ಕಾಣಿ ಹಿಡಿದಿದೆ. ಆದರೆ, ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ದುರುದ್ದೇಶದಿಂದ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಅಭ್ಯರ್ಥಿಗಳು ಸಹಕಾರ ಭಾರತಿಯ ಕರ ಪತ್ರ ನೀಡಿ ಷೇರುದಾರರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರು. ಇದು ಖಂಡನೀಯ. ಈ ಸಂಬಂಧ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿಲಾಗಿದೆ ಎಂದು ತಿಳಿಸಿದರು.ಮಾಮ್ಕೋಸ್‌ನಲ್ಲಿ ಅಭಿವೃದ್ಧಿ ಕೆಲಸವನ್ನು ಮೆಚ್ಚಿ ಷೇರುದಾರರು ಈ ಬಾರಿಯೂ ಸಹಕಾರಿ ಭಾರತಿ ಕೈ ಹಿಡಿದ್ದಾರೆ. ಚುನಾವಣೆಗೂ ಮುನ್ನ ನೀಡಿದ ಎಲ್ಲ ಭರವಸೆ ನೀಡುವ ಮೂಲಕ ಷೇರುದಾರ ಕ್ಷೇಮಾಭಿವೃದ್ಧಿ ಸಾಧಿಸಲು ಬದ್ಧರಾಗಿದ್ದೇವೆ ಎಂದರು.
ಸಹಕಾರಿ ಪ್ರತಿಷ್ಠಾನ ಮಾಮ್ಕೋಸ್‌ನಲ್ಲಿನ ನಮ್ಮ ಸಾಧನೆಯನ್ನು ಸಹಿಸಲಾಗದೆ ಕಳೆದ ಎರಡು ವರ್ಷಗಳಿಂದ ಸಂಘದ ಅಭಿವೃದ್ಧಿಯ ಪ್ರತಿಯೊಂದು ಕೆಲಸಕ್ಕೂ ಹಿನ್ನಡೆ ಉಂಟುಮಾಡಲು ಶ್ರಮಿಸಿದೆ. ಆದರೆ, ಷೇರುದಾರರು ನಮ್ಮ ಆಡಳಿತವನ್ನು ಒಪ್ಪಿ ನಮ್ಮ ತಂಡದ ಗೆಲುವಿಗೆ ಸಹಕರಿಸಿದ್ದಾರೆ. ಸಂಘದ ವಾರ್ಷಿಕ ಸಭೆಗಳಲ್ಲಿ ಮತ್ತು ಷೇರುದಾರರ ಸಭೆಗಳಲ್ಲಿ ಪ್ರತಿರೋಧ ನಡೆಸುತ್ತ ಬಂದಿರುವ ಸಹಕಾರಿ ಪ್ರತಿಷ್ಠಾನಕ್ಕೆ ಷೇರುದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ಕುಟುಕಿದರು.ಅರ್ಹ ಮತದಾರರು 11,511 ಇದ್ದು, ಅನರ್ಹ ಮತದಾರರ ಪೈಕಿ 6,644 ಮತದಾರರು ಹೈ ಕೋರ್ಟ್ ಮೂಲಕ ಮತದಾನ ಹಕ್ಕು ಪಡೆದಿದ್ದರು. ಇವರನ್ನು ಸೇರಿ ಒಟ್ಟು 18,155 ಮತದಾರರು ಇದ್ದರು. ಈ ಪೈಕಿ 12,180 ಮತಗಳು (ಶೇ.67) ಚಲಾವಣೆಯಾಗಿವೆ. 5ನೇ ಬಾರಿಗೆ ಸಹಕಾರ ಭಾರತಿ ಅಧಿಕಾರ ಹಿಡಿದಿದೆ. ಫೆ.24ರವರೆಗೆ ಈಗಿನ ಆಡಳಿತ ಮಂಡಳಿಯ ಅವಧಿ ಇದೆ. ಅನರ್ಹ ಮತದಾರರ ಕುರಿತು ಕೋರ್ಟ್ ತೀರ್ಮಾನದ ಬಳಿಕ ಹೊಸ ಆಡಳಿತ ಮಂಡಳಿ ರಚನೆಯಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಸಹಕಾರ ಭಾರತೀಯ ರಾಜ್ಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಿರ್ದೇಶಕರಾದ ಶ್ರೀನಿವಾಸ್ ಕಚ್ಚೋಡಿ, ನಂದನ್ ಹಸಿರುಮನೆ, ಜಿ.ವಿರೂಪಾಕ್ಷ, ಸುರೇಶ್ಚಂದ್ರ, ಕೆ.ವಿ.ಕೃಷ್ಣಮೂರ್ತಿ, ಕೀರ್ತಿರಾಜ್, ವಿನ್ಸಂಟ್ ರೂಡ್ರಿಗಸ್, ಅಣ್ಣಪ್ಪ, ಕುಬೇಂದ್ರಪ್ಪ , ಪ್ರಸನ್ನ ಹೆಬ್ಬಾರ್, ಟಿ.ಎಲ್.ರಮೇಶ್ ಮೊದಲಾದವರಿದ್ದರು.