ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಬಡತನ ನಿರ್ಮೂಲನಾ ಸಮಿತಿಯ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ನೂರುನ್ನೀಸಾ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗಿಂದು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ತುಮಕೂರಿನ ಎನ್.ಆರ್.ಕಾಲೋನಿ, ವಡ್ಡರಹಳ್ಳಿ, ಬೆಳಗುಂಬ, ಬೆಳಗುಂಬ ಲಂಬಾಣಿ ತಾಂಡ್ಯ ಮೊದಲಾದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ, ಅವಧಿ, ತೂಕ, ದಾಸ್ತಾನನ್ನು ಪರಿಶೀಲಿಸಿದರು. ಕಟ್ಟಡಗಳ ದುರಸ್ತಿ, ಅಂಗನವಾಡಿ ಕೇಂದ್ರಗಳ ಹೊರಾಂಗಣ ಹಾಗೂ ಒಳಾಂಗಣದ ಸ್ವಚ್ಛತೆ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿ ಅಗತ್ಯ ನಿರ್ದೇಶನಗಳನ್ನು ನೀಡಿದರು. ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮರಳಿ ಬರುವ ಮಾರ್ಗ ಮಧ್ಯೆ ಬೆಳಗುಂಬ ರಸ್ತೆ ಮಾರ್ಗದ ಬದಿಯಲ್ಲಿ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಹಗ್ಗದ ಮೇಲೆ ನಡೆಯುತ್ತಾ ದೊಂಬರಾಟ ಆಡುತ್ತಿದ್ದು, ಅವರ ಪೋಷಕರು ಅವರಿಂದ ಭಿಕ್ಷಾಟನೆ ಮಾಡಿಸುತ್ತಿರುವುದನ್ನು ಗಮನಿಸಿದ ಅವರು ತಕ್ಷಣ ಮಕ್ಕಳು ಹಾಗೂ ಪೋಷಕರನ್ನು ವಿಚಾರಿಸಿದಾಗ ಪೋಷಕರು ಮಾತನಾಡುತ್ತಾ ನಾವು ಚಂಡೀಘಡ ಮೂಲದವರಾಗಿದ್ದು, ಇಡೀ ಕುಟುಂಬ ಸಮೇತ ಇಲ್ಲಿಗೆ ಬಂದು ಮಕ್ಕಳಿಂದ ದೊಂಬರಾಟ ಆಡಿಸುತ್ತಿರುವುದಾಗಿ ತಿಳಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್ ಅವರನ್ನು ಸ್ಥಳಕ್ಕೆ ಕರೆಸಿದ ನ್ಯಾ.ನೂರುನ್ನೀಸ ಅವರು, ಮಕ್ಕಳ ಶಿಕ್ಷಣ ಹಾಗೂ ಮುಂದಿನ ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಿ ಮಕ್ಕಳ ಸಹಿತ ಕುಟುಂಬವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಿದರು. ಈ ಸಂದರ್ಭದಲ್ಲಿ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.