ರಣಬಿಸಿಲಿಗೆ ಒಣಗಿದ ಬೆಳೆಗಳ ಸಮೀಕ್ಷೆ ನಡೆಸಬೇಕು

| Published : May 17 2024, 12:35 AM IST

ಸಾರಾಂಶ

ಬಿಸಿಲಿನ ಧಗೆಯಿಂದ ಒಣಗಿ ನಾಶವಾದ ತೆಂಗು, ಅಡಕೆ, ಬಾಳೆ, ಕಬ್ಬು ಸೇರಿದಂತೆ ವಿವಿಧ ಬೆಳೆಗಳ ಸಮೀಕ್ಷೆ ಕೈಗೊಳ್ಳುವಂತೆ ಜಿಲ್ಲಾ ರೈತರ ಒಕ್ಕೂಟ ಹಾಗೂ ಕುಕ್ಕವಾಡ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಸಂಘ ನೇತೃತ್ವದಲ್ಲಿ ರೈತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

- ಬರದಿಂದಾಗಿ ರೈತರು, ಜಾನುವಾರುಗಳ ಬದುಕು ತತ್ತರ: ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಬೆಳೆಗಾರರ ಅಳಲು - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಬಿಸಿಲಿನ ಧಗೆಯಿಂದ ಒಣಗಿ ನಾಶವಾದ ತೆಂಗು, ಅಡಕೆ, ಬಾಳೆ, ಕಬ್ಬು ಸೇರಿದಂತೆ ವಿವಿಧ ಬೆಳೆಗಳ ಸಮೀಕ್ಷೆ ಕೈಗೊಳ್ಳುವಂತೆ ಜಿಲ್ಲಾ ರೈತರ ಒಕ್ಕೂಟ ಹಾಗೂ ಕುಕ್ಕವಾಡ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಸಂಘ ನೇತೃತ್ವದಲ್ಲಿ ರೈತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಉಭಯ ಸಂಘಟನೆಗಳ ಮುಖಂಡರಾದ ಬಿ.ಎಂ.ಸತೀಶ ಕೊಳೇನಹಳ್ಳಿ, ತೇಜಸ್ವಿ ವಿ.ಪಟೇಲ್, ರವಿಕುಮಾರ ಬಲ್ಲೂರು ಸೇರಿದಂತೆ ಇತರರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಬೆಳೆ ನಾಶದ ಸಮೀಕ್ಷೆ ತಕ್ಷಣದಿಂದ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

ರೈತ ಮುಖಂಡರು ಮಾತನಾಡಿ, ಬಿರುಬಿಸಿಲಿನ ಝಳಕ್ಕೆ ತಾಲೂಕಿನ ಕುಕ್ಕವಾಡದ ದಾವಣಗೆರೆ ಶುಗರ್‌ ಕಂಪನಿ ವ್ಯಾಪ್ತಿಯಲ್ಲಿ ರೈತರು ಬೆಳೆದ ಕಬ್ಬು ಮತ್ತು ಜಿಲ್ಲಾದ್ಯಂತ 10-12 ವರ್ಷದಿಂದ ಬೆಳೆದ ಅಡಕೆ, ತೆಂಗಿನ ತೋಟಗಳು ಸಂಪೂರ್ಣ ಒಣಗಿ ನಾಶವಾಗಿವೆ. ಇದರಿಂದ ರೈತರು ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ ಎಂದರು.

ರಣಬಿಸಿಲಿನಿಂದಾಗಿ ಜಾನುವಾರುಗಳಿಗೆ ಮೇವು, ನೀರು ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಭದ್ರಾ ಕಾಡಾ ಸಮಿತಿಯ ಕೈಗೊಂಡ ಅವೈಜ್ಞಾನಿಕ ವೇಳಾಪಟ್ಟಿಯಿಂದ ಭದ್ರಾ ನೀರು ಸಹ ಇಲ್ಲದೇ, ಮಳೆಯೂ ಆಗದೇ, ಕೊಳವೆಬಾವಿಗಳು ನೀರಿಲ್ಲದೇ ಬತ್ತಿಹೋಗಿ, ಬೆಳೆಗಳು ನಷ್ಟವಾಗಿವೆ. ಅಧಿಕಾರಿಗಳು ಭದ್ರಾ ನೀರಿಲ್ಲದೇ ನಾಶವಾದ ಬೆಳೆಗಳ ನಷ್ಟದ ಅಂದಾಜನ್ನು ರೈತರ ಹೊಲಗಳಿಗೆ ಭೇಟಿ ನೀಡಿ, ಸಮೀಕ್ಷೆ ಮಾಡಬೇಕು. ಸಮೀಕ್ಷೆಯಲ್ಲಿ ರೈತರು ಸಾಲ ಮಾಡಿ, ಖರೀದಿಸಿ, ಬಿತ್ತಿದ ಬೀಜ, ಗೊಬ್ಬರ, ಕ್ರಿಮಿನಾಶಕಗಳ ವೆಚ್ಚ ಸೇರಿದಂತೆ ಜಮೀನು ಉಳುಮೆ, ರೈತನ ಕುಟುಂಬದ ಶ್ರಮ, ಕೂಲಿ ವೆಚ್ಚವೂ ಸೇರಿಸಬೇಕು. ಅಂತರ್ಜಲಮಟ್ಟ ಕುಸಿದು, ಬತ್ತಿದ ಕೊಳವೆಬಾವಿಗಳ ಸಮೀಕ್ಷೆ ಸಹ ಮಾಡಬೇಕು. ಅಂತರ್ಜಲ ಮರುಪೂರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದನ-ಕರು, ಕುರಿ-ಮೇಕೆಗಳು ಬಿಸಿಲಿನ ಝಳದಿಂದ ನರಳುತ್ತಿದ್ದು, ಮೇವಿಲ್ಲದೆ, ಕುಡಿಯಲು ನೀರಿಲ್ಲದೆ ಬಡಕಲಾಗಿವೆ. ಈಗಾಗಲೇ ಕೆಲ ಜಾನುವಾರು ಸತ್ತಿವೆ. ಕೆಲವನ್ನು ರೈತರು ಸಾಕಾಲಾಗದೇ ಅಸಹಾಯಕ ಸ್ಥಿತಿಯಲ್ಲಿ ಕೈಗೆ ಸಿಕ್ಕ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ನಷ್ಟದ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ನೀಡಬೇಕು. ನಷ್ಟದ ಸಮೀಕ್ಷೆ ನಡೆಸಲು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ನೀರಾವರಿ ನಿಗಮ, ಗ್ರಾಮೀಣ ನೀರು ಪೂರೈಕೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಮನವಿ ಮಾಡಿದರು.

ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಅಧಿಕಾರಿಗಳ ಸಮಿತಿ ರಚಿಸಬೇಕು. ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು, ಚುನಾವಣೆ ಮುಗಿಸಿದ ರಿಲ್ಯಾಕ್ಸ್ ಮೂಡಿನಿಂದ ಹೊರಬಂದು ರಾಜ್ಯ ಸರ್ಕಾರ, ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ, ಒಣಗಿರುವ ಬೆಳೆ ಹಾನಿ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರದಿಂದ ಆದೇಶ ಬರಬೇಕು. ನಿಮ್ಮ ಮನವಿಯನ್ನು ಸರ್ಕಾರಕ್ಕೆಕಳಿಸಲಾಗುವುದು. ಸರ್ಕಾರದಿಂದ ಸೂಚನೆ ಬಂದ ಮೇಲೆ ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿದರು.

ರೈತ ಮುಖಂಡರಾದ ರಾಘವೇಂದ್ರ ನಾಯ್ಕ, ಹದಡಿ ಜಿ.ಸಿ. ನಿಂಗಪ್ಪ, ಕುಕ್ಕುವಾಡ ರುದ್ರೆಗೌಡ, ಡಿ.ಬಿ.ಶಂಕರ, ಕೆ.ಸಿ.ಶಿವಕುಮಾರ, ಕೆ.ಜಿ.ರವಿಕುಮಾರ, ಬಲ್ಲೂರು ಬಸವರಾಜ, ಮುದಹದಡಿ ದಿಳ್ಯಪ್ಪ, ಶಂಭುಲಿಂಗನ ಗೌಡ, ನಾಗರಸನಹಳ್ಳಿ ಚನ್ನಪ್ಪ, ಕೊಳೇನಹಳ್ಳಿ ಕೆ.ಶರಣಪ್ಪ, ಗುತ್ನಾಳ್ ಮಂಜುನಾಥ, ತುರ್ಚಘಟ್ಟ ಶ್ರೀನಿವಾಸ ಇತರರು ಇದ್ದರು.

- - - -16ಕೆಡಿವಿಜಿ7, 8:

ದಾವಣಗೆರೆ ಜಿಲ್ಲೆಯಲ್ಲಿ ಬಿಸಿಲಿನ ಝಳ, ಉಷ್ಣ ಗಾಳಿಯಿಂದ ಬೆಳೆ, ತೋಟಮದ ಬೆಳೆ ಒಣಗಿರುವುದನ್ನು ಸಮೀಕ್ಷೆ ಕೈಗೊಳ್ಳುವಂತೆ ಜಿಲ್ಲಾ ರೈತರ ಒಕ್ಕೂಟ, ದಾವಣಗೆರೆ ಶುಗರ್ಸ್‌ ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌ ಅವರಿಗೆ ಮನವಿ ಅರ್ಪಿಸಲಾಯಿತು.