ಸಾರಾಂಶ
ಮಾರುತಿ ಶಿಡ್ಲಾಪೂರಕನ್ನಡಪ್ರ ವಾರ್ತೆ ಹಾನಗಲ್ಲ ಚಿಣ್ಣರು, ಯುವಕರ ಈಜುವ ಕನಸಿಗೆ ತಣ್ಣೀರೆರೆದ ಹಾನಗಲ್ಲಿನ ಈಜುಗೊಳ ಈಗ ಕಸದ ತೊಟ್ಟಿಯಾಗಿ, ಈಜು ಪಟುಗಳ ಕೂಗು ಅಧಿಕಾರಿಗಳಿಗೆ ಕೇಳದಂತಾಗಿ, ನಾಲ್ಕು ವರ್ಷಗಳಿಂದ ಇದ್ದೂ ಇಲ್ಲದಂತಹ ಸ್ಥಿತಿ ತಲುಪಿದೆ.ಹಾನಗಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಮಾಜಿ ಸಚಿವರಾದ ದಿ.ಸಿ.ಎಂ. ಉದಾಸಿ ಹಾಗೂ ಮನೋಹರ ತಹಶೀಲ್ದಾರ ಅವರು ಈ ಭಾಗದ ಈಜುವ ಕನಸಿನ ಯುವಕರು, ಚಿಣ್ಣರಿಗಾಗಿ ಕೋಟ್ಯಂತರ ಹಣ ಸುರಿದು ತಾಲೂಕು ಕ್ರೀಡಾಂಗಣದಲ್ಲಿ ಈಜುಗೊಳ ನಿರ್ಮಿಸಿದರು. ಕೆರೆ, ಹಳ್ಳ, ಹೊಳೆ, ಬಾವಿಗಳಿಗೆ ಈಜಿಗಾಗಿ ಹೋಗುವ ಈಜು ಪ್ರಿಯರಿಗೆ ಈಗ ಆ ಸ್ಥಳಗಳಲ್ಲಿ ನೀರಿಲ್ಲ. ಆ ಕಾರಣಕ್ಕಾಗಿಯೇ ನಿರ್ಮಾಣವಾದ ಹಾನಗಲ್ಲಿನ ಈಜುಗೊಳ ಮಾತ್ರ ಲೆಕ್ಕಕ್ಕುಂಟು, ಈಜಾಟಕ್ಕಿಲ್ಲ ಎನ್ನುವಂತಾಗಿದೆ.ಊರ ಪಕ್ಕದಲ್ಲಿರುವ ಆನಿ ಕೆರೆಯ ನೀರನ್ನು ಪಟ್ಟಣದ ಕುಡಿಯುವ ನೀರಿಗಾಗಿ ಬಳಸುತ್ತಿರುವುದರಿಂದ ಇಲ್ಲಿ ಈಜು, ಬಟ್ಟೆ ತೊಳೆಯಲು ನಿರ್ಬಂಧಿಸಲಾಗಿದೆ. ಇಂತೆಲ್ಲ ಕಾರಣಕ್ಕಾಗಿಯೇ ೨೦೧೩ರಲ್ಲಿಯೇ ಈ ಈಜುಗೊಳದ ಕಾಮಗಾರಿ ಆರಂಭಿಸಲಾಯಿತು. ಕಾಮಗಾರಿ ಅರ್ಧಕ್ಕೆ ನಿಂತಾಗ ಸಚಿವರಾದ ಮನೋಹರ ತಹಶೀಲ್ದಾರ ಮತ್ತೆ ೭೦ ಲಕ್ಷ ರು. ಅನುದಾನ ಮಂಜೂರು ಮಾಡಿಸಿ, ಅಂದಾಜು ೨ ಕೋಟಿಯಷ್ಟು ಹಣವನ್ನು ಈ ಈಜುಗೊಳಕ್ಕೆ ಖರ್ಚು ಮಾಡಲಾಗಿದೆ ಎನ್ನಲಾಗಿದೆ.ಈ ಈಜುಗೊಳದಲ್ಲಿ ಚಿಕ್ಕಮಕ್ಕಳಿಗಾಗಿಯೇ ಒಂದು ಪ್ರತ್ಯೇಕ ಈಜುಗೊಳ, ಇನ್ನೊಂದು ಹಿರಿಯರಿಗಾಗಿ ಈಜುಗೊಳ, ಮಹಿಳೆಯರಿಗೆ ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯ, ಲಾಕರ್ ಸೌಲಭ್ಯ, ಲೈಫ್ ಗಾರ್ಡ ರೂಂ, ಜಿಮ್ ರೂಮ್, ಟಿಕೇಟ್ ಕೌಂಟರ್, ಶೌಚಗೃಹ ಹಾಗೂ ಸ್ನಾನ ಗೃಹ, ಜೀವ ರಕ್ಷಕರ ಕೊಠಡಿ, ಅತಿಥಿ ಕೊಠಡಿ, ಆಡಳಿತ ಕಚೇರಿ, ನೀರಿನ ತೊಟ್ಟಿ, ನೀರು ಶುದ್ಧೀಕರಣ ಘಟಕ ಹಾಗೂ ಮತ್ತಿತರ ಸೌಲಭ್ಯವನ್ನು ಒಳಗೊಂಡಿದ್ದು ೧೬೦೨.೧೭ ಚದುರ ಅಡಿಯ ವಿಸ್ತೀರ್ಣದ ಜಾಗೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಈ ಈಜುಗೊಳ ನಿರ್ಮಾಣಗೊಂಡಿದೆ.ಈಗ ಈ ಈಜುಗೊಳದಲ್ಲಿ ನೀರಿಲ್ಲ, ಎಲ್ಲ ಕೊಠಡಿಗಳು ಕಸ ತೊಟ್ಟಿಯಂತಾಗಿವೆ. ಇದನ್ನು ಬಳಸದೇ ವರುಷಗಳೇ ಕಳೆದು ಹೋಗಿವೆ. ಇದರ ಸ್ವಚ್ಛತೆಗೆ ಯಾರು ಜವಾಬ್ದಾರರು, ಕ್ರೀಡಾ ಇಲಾಖೆ ಇದನ್ನು ಗಮನಿಸಲಿಲ್ಲವೆ? ಇದಕ್ಕಾಗಿ ನಿರ್ವಹಣಾ ವೆಚ್ಚವನ್ನು ಬಳಸುತ್ತಿಲ್ಲವೆ? ಇಷ್ಟಾದರೂ ಅಧಿಕಾರಿಗಳು ಈ ಈಜುಗೊಳದ ನಿರ್ವಹಣೆಗೆ ನಿರ್ಲಕ್ಷ್ಯ ತೋರಿದ ಕಾರಣಗಳೇನು ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಗಳೇ ಇಲ್ಲದಂತಾಗಿದೆ.ಜಿಲ್ಲಾ ಕ್ರೀಡಾಧಿಕಾರಿಗಳು ಈಗಷ್ಟೇ ಹಾನಗಲ್ಲಿನ ಈಜುಗೊಳಕ್ಕೆ ಭೇಟಿ ನೀಡಿ ಇದರ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ, ಕಣ್ಣಾರೆ ಕಂಡಿದ್ದಾರೆ. ಸರಕಾರ ಅನುದಾನ ಬಿಡುಗಡೆ ಮಾಡಿದರೆ ಮಾತ್ರ ದುರಸ್ತಿ ಸಾಧ್ಯ. ಇದಕ್ಕಾಗಿ ದೊಡ್ಡ ಮೊತ್ತ ಬೇಕು. ಶೌಚಾಲಯ, ಬಾತ್‌ರೂಮ, ವಿದ್ಯುತ್ ವ್ಯವಸ್ಥೆ, ಹೈಮಾಸ್ಕ ಲೈಟ್, ಸುಣ್ಣ, ಬಣ್ಣ ಸೇರಿದಂತೆ ಬಹಳಷ್ಟು ದುರಸ್ತಿ ನಡೆಯಬೇಕಾಗಿದೆ. ಅದಕ್ಕಾಗಿ ಬಹಳಷ್ಟು ಪ್ರಯತ್ನದಲ್ಲಿದ್ದೇವೆ ಎನ್ನುತ್ತಾರೆ. ಈ ಈಜುಗೊಳದ ವಾಚಮನ್ ಕೇವಲ ಬಂದು ಈ ಈಜುಗೊಳ ನೋಡಿ ಹೋಗುವುದಾಗಿದೆಯೇ ಹೊರತು, ಇಲ್ಲಿ ಯಾವುದೇ ಕೆಲಸ ವಾಚ್‌ಮನ್‌ನಿಗೂ ಇಲ್ಲ. ಕೊರೋನಾ ನಂತರ ಹಾನಗಲ್ಲಿನ ಈಜುಗೊಳ ಬಂದಾಗಿದೆ. ಇದರ ದುರಸ್ತಿಗೆ ಅನುದಾನಕ್ಕಾಗಿ ಮೇಲಧಿಕಾರಿಗಳಿಗೆ ಬರೆಯಲಾಗಿದೆ. ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಒಂದು ಕೋಟಿ ರು.ಗಳಷ್ಟು ಹಣ ಬೇಕು. ಶೀಘ್ರ ದರುಸ್ತಿಗೆ ಕ್ರಮ ಜರುಗಿಸಲಾಗುವುದು. ವಿಳಂಬವಾಗಿದೆ. ಪ್ರಯತ್ನಿಸುತ್ತೇವೆ ಎಂದು ಯುವ ಸಬಲೀಕರಣ ಹಾಗೂ ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಚ್. ಲತಾ ಹೇಳುತ್ತಾರೆ.
ಪಟ್ಟಣದ ಈಜುಗಾರರಿಗೆ ಖುಷಿಯಾಗಿತ್ತು. ಇದು ಬಂದಾಗಿ ಬೇಸರವಾಗಿದೆ. ಕೋಟ್ಯಂತರ ರು. ಚೆಲ್ಲಿ ಕಸದ ತೊಟ್ಟಿ ಮಾಡಿರುವುದು ಬೇಸರದ ಸಂಗತಿ. ನಮ್ಮ ನಿರೀಕ್ಷೆ ಹುಸಿಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ. ಈಗಲಾದರೂ ಅಧಿಕಾಗಳು ಕಣ್ಣು ತೆರೆದು ಈ ಈಜುಗೊಳ ಈಜುಗಾರರಿಗೆ ಲಭಿಸುವಂತಾಗಲಿ ಈಜು ಪಟು ರಾಜು ಪೇಟಕರ ಹೇಳುತ್ತಾರೆ.