ಜೀವಪರ ನಿಲುವುಗಳ ಹುಡುಕಿದ ವಿಚಾರ ಸಂಕಿರಣ: ಲೇಖಕ ಮೀರಾಸಾಬಿಹಳ್ಳಿ ಶಿವಣ್ಣ

| Published : Feb 08 2024, 01:30 AM IST

ಜೀವಪರ ನಿಲುವುಗಳ ಹುಡುಕಿದ ವಿಚಾರ ಸಂಕಿರಣ: ಲೇಖಕ ಮೀರಾಸಾಬಿಹಳ್ಳಿ ಶಿವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿರೋಧಕ ದನಿಗಳು ದಮನವಾಗುತ್ತಿರುವಾಗ ಹೊಸ ಜನಾಂಗವನ್ನು ಎಚ್ಚರಿಸುವ ಇಂತಹ ವಿಚಾರ ಸಂಕಿರಣಗಳು ಮತ್ತೆ ಮತ್ತೆ ಬೇಕು.

ಕನ್ನಡಪ್ರಭ ವಾರ್ತೆ ಹಾವೇರಿ

ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಮಕಾಲೀನ ಸಾಹಿತ್ಯದಲ್ಲಿ ಜೀವಪರ ನಿಲುವುಗಳ ಎಂಬ ವಿಚಾರ ಸಂಕಿರಣ ಇಲ್ಲಿಯ ಪದವಿಪೂರ್ವ ಕಾಲೇಜುಗಳ ನೌಕರರ ಭವನದಲ್ಲಿ ಮುಕ್ತಾಯಗೊಂಡಿತು.

ಸಮಾರೋಪ ಸಮಾರಂಭದಲ್ಲಿ ನುಡಿಗಳನ್ನಾಡಿದ ಹಿರಿಯ ಲೇಖಕ ಮೀರಾಸಾಬಿಹಳ್ಳಿ ಶಿವಣ್ಣ, ಪ್ರತಿರೋಧಕ ದನಿಗಳು ದಮನವಾಗುತ್ತಿರುವಾಗ ಹೊಸ ಜನಾಂಗವನ್ನು ಎಚ್ಚರಿಸುವ ಇಂತಹ ವಿಚಾರ ಸಂಕಿರಣಗಳು ಮತ್ತೆ ಮತ್ತೆ ಬೇಕು ಎಂದರು.

ಮೊದಲ ಗೋಷ್ಠಿಯ ವರ್ಣ ವರ್ಗಗಳ ಮೀರುವ ಬಗೆ ಎಂಬ ವಿಷಯ ಕುರಿತು ವಿಚಾರಗಳ ಮಂಡಿಸಿದ ಕವಿ ವಿಜಯಕಾಂತ ಪಾಟೀಲ, ಸಂವಿಧಾನವೇ ನಮ್ಮ ಧರ್ಮ ಗ್ರಂಥ ಎಂದು ಒಪ್ಪಿಕೊಂಡರೆ ವರ್ಣ ವರ್ಗಗಳ ತಾರತಮ್ಯಗಳನ್ನು ಸುಲಭವಾಗಿ ಮೀರಬಹುದು. ಅತಿಯಾದ ಮೌನ ಮತ್ತು ಮಾತು ಲೇಖಕರಿಗೆ ಬೇಡ. ಈ ಸಮಾಜದಲ್ಲಿ ಇನ್ನೂ ಅಂತಃಕರಣಗಳ ಸೆಲೆಗಳು ಬತ್ತಿಲ್ಲ. ಅವುಗಳನ್ನು ಹುಡುಕ ಬೇಕಷ್ಟೆ ಎಂದರು.

ಶಿವಮೊಗ್ಗ ಸೈಹ್ಯಾದ್ರಿ ಕಾಲೇಜಿನ ಡಾ. ಶೋಭಾ ಮರವಂತೆ ಮಾತನಾಡಿ, ಧರ್ಮ ಮತ್ತು ಅಧಿಕಾರದ ಮಾತುಗಳು ಬಂದಾಗ ನಾನು ಹೆಣ್ಣಾಗಿ ಹೆದರುತ್ತೇನೆ, ಗರ್ಭದಲ್ಲಿಯೇ ಕಟ್ಟಲ್ಪಟ್ಟ ಹೆಣ್ಣಿನ ಅವಮಾನ ಮತ್ತು ಅನುಮಾನಗಳು ಸದಾ ಚಾಲ್ತಿಯಲ್ಲಿರುತ್ತವೆ. ದೇವರಿಲ್ಲದ ಜಗತ್ತಿನಲ್ಲಿ ಪಾಪಿಗಳಿಲ್ಲ ಎಂಬ ಮಾತು ನನ್ನನ್ನು ಕಾಡಿದೆ ಎಂದರು.

ಗೋಷ್ಠಿಗೆ ಸ್ಪಂದನೆಯ ಮಾತುಗಳಾಡಿದ ಅಕ್ಷತಾ ಕೆ. ಸಿ., ಜ್ಞಾನದ ಹಸಿವು ಅನ್ನದ ಹಸಿವಿಗಿಂತ ಹೆಚ್ಚು ಎಂದರು. ಗೋಷ್ಠಿಯನ್ನು ಶಿವಾನಂದ ಕ್ಯಾಲಕೊಂಡ ನಡೆಸಿದರು. ಎರಡನೇ ಗೋಷ್ಠಿಯಲ್ಲಿ ಜಾಗತೀಕರಣದ ಸಾಮಾಜಿಕ ಪರಿಣಾಮಗಳ ವಿಷಯ ಕುರಿತು ಆನಂದ ಕುಂಚೂರ, ಸಾಪ್ಟವೇರ್ ಜಗತ್ತಿನಲ್ಲೂ ಭಾಷೆ ಜಾತಿ ಪ್ರಾದೇಶಿಕ ತಾರತಮ್ಯಗಳ ಮೇಲಾಟಗಳಿವೆ. ಜಾಗತೀಕರಣ ನಮ್ಮಂತಹ ಟೆಕ್ಕಿಗಳಿಗೆ ಅನ್ನ ನೀಡಿದರೂ ಸಣ್ಣತನಗಳನ್ನು ಮೀರಲಾಗುತ್ತಿಲ್ಲ. ಭ್ರಮಾತ್ಮಕವಾದ ಜೀವಪರತೆ ಬೇಡ ಎಂದರು.

ಪರಿಸರ ಕುರಿತಾದ ಸಂಗತಿಗಳು ಎಂಬ ವಿಷಯ ಕುರಿತು ಮಾತನಾಡಿದ ಡಾ. ಮಲ್ಲಿಕಾರ್ಜುನಗೌಡ ತೂಲಹಳ್ಳಿ, ತೇಜಸ್ವಿ ಮತ್ತು ಕುವೆಂಪು ಕನ್ನಡ ಸಾಹಿತ್ಯದಲ್ಲಿ ಬಿತ್ತಿದ ಪರಿಸರ ಚಿತ್ರಗಳು ಅತ್ಯಂತ ಮಾನವೀಯ ಚಿತ್ರಗಳು. ಪರಿಸರ ಅಂದರೆ ಬರಿ ಕಾಡು ನದಿಗಳಲ್ಲ, ಎಲ್ಲ ಭೌತಿಕ ವಾಸ್ತವಗಳೂ ಕೂಡಿರುತ್ತವೆ ಎಂದರು. ಗೋಷ್ಠಿಗೆ ಸ್ಪಂದನೆ ನೀಡಿದ ಕವಿ ರಂಜಾನ ಕಿಲ್ಲೇದಾರ, ಕಾವ್ಯ ಮುಖೇನ ಮಾತ್ರ ಜೀವಪರ ಚಿಂತನೆ ನೀಡಬಹುದು ಎಂದರು. ಗೋಷ್ಠಿಯನ್ನು ಪೃಥ್ವಿರಾಜ ಬೆಟಗೇರಿ ನಡೆಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಕವಿ ಸತೀಶ ಕುಲಕರ್ಣಿ ವಹಿಸಿದ್ದರು. ಪ್ರಾಚಾರ್ಯ ಮಂಜುನಾಥ ವಡ್ಡರ, ಈರಣ್ಣ ಬೆಳವಡಿ, ಗಂಗಯ್ಯ ಕುಲಕರ್ಣಿ, ಲಿಂಗಯ್ಯ ಹಿರೇಮಠ, ವಿರೇಶ, ಬೇಬಿ ಲಮಾಣಿ ಇದ್ದರು. ಅಕಾಡೆಮಿಯ ಸದಸ್ಯ ಚೆನ್ನಪ್ಪ ಅಂಗಡಿ ವಂದಿಸಿದರು.