ವ್ಯವಸ್ಥಿತ, ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆ

| Published : Jan 18 2024, 02:02 AM IST

ಸಾರಾಂಶ

ಜ.26ರಂದು ನಡೆಯುವ ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು.

ಚಿತ್ರದುರ್ಗ: ಜ.26ರಂದು ನಡೆಯುವ ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಕೇಂದ್ರದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಆಚರಿಸುವ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ದೇಶಪ್ರೇಮ, ದೇಶಭಕ್ತಿ ಹಾಗೂ ಭಾರತ ಸಂವಿಧಾನ ಆಚರಣೆಯ ಪ್ರತೀಕವಾಗಿದ್ದು, ವಿವಿಧ ಇಲಾಖೆಗಳು ಸಮನ್ವಯತೆಯಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಗಣರಾಜ್ಯೋತ್ಸವ ಆಚರಿಸಬೇಕು. ಇಲಾಖೆಯ ಅಧಿಕಾರಿಗಳಿಗೆ ನೀಡಿರುವ ಜವಾಬ್ದಾರಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.

26ರಂದು ಬೆಳಗ್ಗೆ 9ಕ್ಕೆ ನಗರದ ಸರ್ಕಾರಿ ವಿಜ್ಞಾನ ಕಾಲೇಜು (ಮುರುಘರಾಜೇಂದ್ರ ಕ್ರೀಡಾಂಗಣ) ಮೈದಾನದಲ್ಲಿ ಆಚರಿಸಲಾಗುವುದು. ಶಿಷ್ಟಾಚಾರದ ನಿಯಮಗಳಂತೆ ಸಮಾರಂಭದ ಆಹ್ವಾನ ಪತ್ರಿಕೆ ಮುದ್ರಿಸಿ, ಆಹ್ವಾನ ಪತ್ರಿಕೆಗಳನ್ನು ಜನಪ್ರತಿನಿಧಿಗಳಿಗೆ, ಗಣ್ಯರಿಗೆ ವಿತರಿಸಲು ಕ್ರಮವಹಿಸಬೇಕು ಎಂದರು.

ಗಣರಾಜ್ಯೋತ್ಸವ ಅಂಗವಾಗಿ ಅಂದು ಬೆಳಗ್ಗೆ ಕ್ರೀಡಾಂಗಣದಲ್ಲಿ ದೇಶಭಕ್ತಿ, ಸಂವಿಧಾನದ ಮಹತ್ವ ಜನರ ಮನ ಮುಟ್ಟುವ ರೀತಿಯಲ್ಲಿ ಉತ್ತಮವಾದ ಆಯ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು ಗುರುತಿಸಿ ಸನ್ಮಾನಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ರಾಷ್ಟ್ರ ಧ್ವಜಾರೋಹಣದ ನಂತರ ಶಾಲಾ ಮಕ್ಕಳಿಂದ ಮೂರು ಆಯ್ದ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಜೆ ನಗರದ ತರಾಸು ರಂಗಮಂದಿರದಲ್ಲಿ ಆಯ್ದ ಉತ್ತಮ 15 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನಾಕರ್ಷಣಿಯವಾಗಿ ಆಯೋಜಿಸಬೇಕು. ದೇಶಭಕ್ತಿ ಬಿಂಬಿಸುವ ಕನ್ನಡ ಹಾಡುಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಅವರಿಗೆ ಸೂಚಿಸಿದರು.

ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ, ಪ್ಯಾರಾ ಒಲಂಪಿಕ್‍ನಲ್ಲಿ ಸಾಧನೆ ಮಾಡಿದ ಸಾಧಕರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿಜವಾದ ಸಾಧಕರನ್ನು ಗುರುತಿಸಿ, ಸನ್ಮಾನ ಮಾಡಬೇಕು. ಈ ನಿಟ್ಟಿನಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ವಿವಿಧ ಕ್ಷೇತ್ರಗಳನ್ನು ಗುರುತಿಸಿ ಪಟ್ಟಿ ತಯಾರಿಸಬೇಕು ಎಂದು ಸೂಚನೆ ನೀಡಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಗಣರಾಜ್ಯೋತ್ಸವ ಆಚರಣೆಗೆ ಸಂಬಂಧಪಟ್ಟಂತೆ ಸ್ವಾಗತ, ಶಿಷ್ಟಾಚಾರ, ಆಹ್ವಾನ ಪತ್ರಿಕೆ ಹಾಗೂ ವೇದಿಕೆ ಸಮಿತಿ, ಪೆರೇಡ್ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಸಮಿತಿಯಲ್ಲಿರುವ ಅಧಿಕಾರಿಗಳು ತಮಗೆವಹಿಸಿದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದರು.

ಗಣರಾಜ್ಯೋತ್ಸವ ಪೆರೇಡ್ ವ್ಯವಸ್ಥೆ ಏರ್ಪಡಿಸಲು ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಅವರು, ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್, ಅರಣ್ಯ ಇಲಾಖೆ, ಅಬಕಾರಿ, ಎನ್‍ಸಿಸಿ ಹಾಗೂ ಪ್ರೌಢ ಶಾಲಾ ಮಕ್ಕಳು ಒಳಗೊಂಡಂತೆ ಸೇರಿದಂತೆ ವಿವಿಧ ತುಕಡಿಗಳು ಪಥ ಸಂಚಲನಕ್ಕೆ ಸಜ್ಜುಗೊಳಿಸಬೇಕು. ಅತ್ಯುತ್ತಮ ಪ್ರದರ್ಶನ ನೀಡಿದ 3 ಪೆರೇಡ್ ತಂಡಗಳನ್ನು ಆಯ್ಕೆ ಮಾಡಲು ಸಮಿತಿ ರಚಿಸಬೇಕು. ಆಯ್ಕೆಯಾದ ತಂಡಗಳಿಗೆ ಗಣರಾಜ್ಯೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ, ನೆನಪಿನ ಕಾಣಕೆ ನೀಡಿ ಗೌರವಿಸಲಾಗುವುದು ಎಂದರು.

ಗಣರಾಜ್ಯೋತ್ಸವದ ಅಂಗವಾಗಿ ಸಂವಿಧಾನ ಮತ್ತು ದೇಶದ ಸಮಗ್ರತೆ ಸಾರುವ ವಿಶೇಷ ಜಾಗೃತಿ ಕಾರ್ಯಕ್ರಮ 26ರಿಂದ ಫೆ.23ರವರೆಗೆ ಜಿಲ್ಲೆಯಾದ್ಯಂತ ಎಲ್ಲ ಗ್ರಾಮ ಪಂಚಾಯತಿ ಹಾಗೂ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಕೇಂದ್ರ ಸ್ಥಾನದಲ್ಲಿ ಹಮ್ಮಿಕೊಳ್ಳುವಂತೆ ಸರ್ಕಾರ ನಿರ್ದೇಶನ ನೀಡಿದೆ. ಇದರನ್ವಯ ಈ ವಿಶೇಷ ಅಭಿಯಾನಕ್ಕೆ ಜ.26ರಂದು ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವರು. ವಿಶೇಷ ಜಾಗೃತಿ ಅಭಿಯಾನದಲ್ಲಿ ಸಂವಿಧಾನ ಮತ್ತು ದೇಶದ ಸಮಗ್ರತೆ ಬಿಂಬಿಸುವ ಎಲ್‍ಇಡಿ ಪರದೆಯಲ್ಲಿ ಸಂದೇಶ ಸಾರುವ ಸ್ತಬ್ಧಚಿತ್ರ, ಕಲಾತಂಡಗಳು ಭಾಗವಹಿಸಲಿವೆ. ಜಾಗೃತಿ ಜಾಥಾವು ಜಿಲ್ಲೆಯ ಎಲ್ಲ 189 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ 7 ನಗರ ಸ್ಥಳೀಯ ಸಂಸ್ಥೆಗಳಲಿ ಸಂಚರಿಸಲಿದೆ. ಈ ಅಭಿಯಾನ ಜಿಲ್ಲೆಯಲ್ಲಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಇದ್ದರು.