ರಾಣಿಬೆನ್ನೂರಿಗೆ ಬಂತು ಪಾಕ್‌ ವಿರುದ್ಧದ ಯುದ್ಧದಲ್ಲಿ ಬಳಸಿದ್ದ ಟ್ಯಾಂಕರ್‌!

| Published : Aug 12 2025, 12:30 AM IST

ರಾಣಿಬೆನ್ನೂರಿಗೆ ಬಂತು ಪಾಕ್‌ ವಿರುದ್ಧದ ಯುದ್ಧದಲ್ಲಿ ಬಳಸಿದ್ದ ಟ್ಯಾಂಕರ್‌!
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಪ್ರಕಾಶ ಕೋಳಿವಾಡ ಅವರ ಆಸಕ್ತಿಯಿಂದಾಗಿ ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆಗೆ ತಾಲೂಕು ಆಡಳಿತದ ವತಿಯಿಂದ ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಬಸವರಾಜ ಸರೂರ

ರಾಣಿಬೆನ್ನೂರು: ನಮ್ಮ ಸೈನ್ಯ, ಯುದ್ಧದ ಸಲಕರಣೆಗಳ ಬಗ್ಗೆ ಭವಿಷ್ಯದ ಪೀಳಿಗೆಗೆ ತಿಳಿಸುವ ಉದ್ದೇಶದಿಂದ 1971ರ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಕಾರ್ಯ ನಿರ್ವಹಿಸಿದ ಯುದ್ಧ ಟ್ಯಾಂಕರ್‌ನ್ನು ಇದೇ ಆ. 15ರಂದು ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಶಾಸಕ ಪ್ರಕಾಶ ಕೋಳಿವಾಡ ಅವರ ಆಸಕ್ತಿಯಿಂದಾಗಿ ಯುದ್ಧ ಟ್ಯಾಂಕರ್ ಪ್ರತಿಷ್ಠಾಪನೆಗೆ ತಾಲೂಕು ಆಡಳಿತದ ವತಿಯಿಂದ ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಟ್ಯಾಂಕರ್ ಇರಿಸಲು ಸಿಮೆಂಟ್ ಕಾಂಕ್ರೀಟ್‌ನ ಕಟ್ಟೆಯ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಭವ್ಯ ಮೆರವಣಿಗೆ: ಆ. 15ರಂದು ನಗರದ ಅಶೋಕ ಸರ್ಕಲ್ ಬಳಿಯಿಂದ ಭವ್ಯ ಮೆರವಣಿಗೆ ಮೂಲಕ ಯುದ್ಧ ಟ್ಯಾಂಕರ್‌ನ್ನು ಮಿನಿ ವಿಧಾನಸೌಧದವರೆಗೆ ತಂದು ನಂತರ ಅದನ್ನು ಅಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ರೋಮಾಂಚನ: ನಗರಕ್ಕೆ ಆ. 15ರಂದು ಯುದ್ಧದ ಟ್ಯಾಂಕರ್ ಸ್ಥಾಪಿಸುತ್ತಿರುವುದು ಅತ್ಯಂತ ರೋಮಾಂಚನ ಮತ್ತು ಹೆಮ್ಮೆಯ ವಿಷಯವಾಗಿದೆ. ನೂರಾರು ವರ್ಷಗಳ ಹಿಂದೆ ಯುದ್ಧಕ್ಕೆ ರಾಜರು ಕುದುರೆಗಳ ಮೇಲೆ ಯುದ್ಧ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಅದರ ಬದಲಾಗಿ ಯುದ್ಧದ ಟ್ಯಾಂಕರ್‌ ಬಳಸಲು ಪ್ರಾರಂಭಿಸಲಾಯಿತು. ಯುದ್ಧದಲ್ಲಿ ಬಳಕೆಯಾದ ಟ್ಯಾಂಕರ್ ಸ್ಥಾಪಿಸುವುದರಿಂದ ರಾಣಿಬೆನ್ನೂರಿನ ಜನರಲ್ಲಿ ದೇಶಾಭಿಮಾನ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ ಎಂದು ನಿವೃತ್ತ ಸೈನಿಕರಾದ ಕ್ಯಾ. ಬಿ.ಜಿ. ಹಿರೇಮಠ ತಿಳಿಸಿದರು.