ಬದುಕುವ ದಾರಿ ತೋರಿಸುವವ ಶಿಕ್ಷಕ

| Published : Sep 07 2024, 01:31 AM IST

ಸಾರಾಂಶ

ತಂದೆ-ತಾಯಿಗಳು ಮಕ್ಕಳಿಗೆ ಜೀವನವನ್ನು ನೀಡಿದರೇ ಶಿಕ್ಷಕರು ಜೀವನ ವಿಧಾನವನ್ನು ತಿಳಿಸಿಕೊಟ್ಟು ಬದುಕುವ ದಾರಿ ತೋರಿಸುತ್ತಾರೆ ಎಂದು ಶಿಕ್ಷಣತಜ್ಞ ಡಾ.ಗುರುರಾಜ ಕರಜಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ತಂದೆ-ತಾಯಿಗಳು ಮಕ್ಕಳಿಗೆ ಜೀವನವನ್ನು ನೀಡಿದರೇ ಶಿಕ್ಷಕರು ಜೀವನ ವಿಧಾನವನ್ನು ತಿಳಿಸಿಕೊಟ್ಟು ಬದುಕುವ ದಾರಿ ತೋರಿಸುತ್ತಾರೆ ಎಂದು ಶಿಕ್ಷಣತಜ್ಞ ಡಾ.ಗುರುರಾಜ ಕರಜಗಿ ಹೇಳಿದರು.

ನಗರದ ವಿದ್ಯಾ ಪ್ರಸಾರಕ ಮಂಡಳವು ಸರಳಾಬಾಯಿ ಭಾಗವತ ಸಭಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯ ಜತೆಗೆ ಜೀವನದ ಮೌಲ್ಯಗಳನ್ನು ತಿಳಿಸಿ ಕೊಡಬೇಕು. ವಿದ್ಯಾರ್ಥಿಗಳಿಗೆ ಮಾದರಿ ಆಗುವ ರೀತಿಯಲ್ಲಿ ಶಿಕ್ಷಕರು ಬದುಕಬೇಕು ಎಂದರು.

ಬದುಕಿನಲ್ಲಿ ತೋರಿಕೆ ಒಂದು, ನಡುವಳಿಕೆ ಒಂದು ಆಗಬಾರದು. ಯಾವಾಗ ನಡೆ-ನುಡಿ ಒಂದಾಗುತ್ತದೆಯೋ ಅಂದು ಗುರು ಹಂತಕ್ಕೆ ಹೋಗಲು ಸಾಧ್ಯವಾಗುವುದು. ಜೀವನ ಭಗವಂತ ನೀಡಿದ ಪ್ರಸಾದ. ಸಂತೋಷ ಮತ್ತು ಕೃತಜ್ಞತೆಯಿಂದ ಬದುಕಬೇಕು ಎಂದು ತಿಳಿಸುವವರು ಶಿಕ್ಷಕರು. ತಮ್ಮ ವ್ಯಕ್ತಿತ್ವದಿಂದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಶಿಕ್ಷಕರಿಗಿದೆ ಎಂದರು.

ತರಗತಿಗಳಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ರೀತಿಯಲ್ಲಿ ಬೋಧನೆ ಮಾಡಬೇಕು. ವಿದ್ಯಾರ್ಥಿಗಳ ಬಗ್ಗೆ ನಕಾರಾತ್ಮಕ ಭಾವನೆ ಹೊಂದದೇ ಅವರವರ ಆಸಕ್ತಿ ವಿಷಯದಲ್ಲಿ ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷ ವಿ.ವೈ.ಕವಠೇಕರ ಅಧ್ಯಕ್ಷತೆ ವಹಿಸಿದ್ದರು. ಜಂಟಿ-ಕಾರ್ಯದರ್ಶಿ ಡಾ.ಸುರೇಶ ಪರ್ವತೀಕರ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಡಾ.ಗಿರೀಶ ಮಸೂರಕರ ಸ್ವಾಗತಿಸಿದರು. ಪ್ರಾಚಾರ್ಯ ಶ್ರೀನಿವಾಸ ನರಗುಂದ ಪರಿಚಯಿಸಿದರು. ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ್ ವಂದಿಸಿದರು. ಉಪನ್ಯಾಸಕ ಡಾ.ಉಮೇಶ ತಿಮ್ಮಾಪೂರ ನಿರೂಪಿಸಿದರು.

ಸದಸ್ಯರಾದ ಎಸ್.ಕೆ.ಕುಲಕರ್ಣಿ, ಗುರುರಾಜ ದೇಶಪಾಂಡೆ, ಡಾ.ಜೆ.ಎಸ್.ದೇಶಪಾಂಡೆ, ವಿಜಯಾನಂದ ಬುರ್ಲಿ, ಡಾ.ಸಂದೀಪ ಹುಯಿಲಗೋಳ, ಡಾ. ಎಂ.ಜಿ ದೀಕ್ಷಿತ್, ಸುಧೀರ ದೇವದಾಸ ಮತ್ತಿತರರು ಪಾಲ್ಗೊಂಡರು.