ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕುಸಿತದ ಅಪಾಯದಲ್ಲಿರುವ ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಕೆತ್ತಿಕಲ್ ಪ್ರದೇಶಕ್ಕೆ ಕೇಂದ್ರ ಭೂಗರ್ಭ ಶಾಸ್ತ್ರ ಅಧ್ಯಯನ ತಂಡದ ವಿಜ್ಞಾನಿಗಳು ಮಂಗಳವಾರ ಭೇಟಿ ನೀಡಿದ್ದಾರೆ.ಹಿರಿಯ ವಿಜ್ಞಾನಿ ಡಾ. ಸೆಂಥಿಲ್ ನೇತೃತ್ವದ ಈ ತಂಡ ಮಂಗಳೂರು ಹೊರವಲಯದ ಕೆತ್ತಿಕಲ್ ಪ್ರದೇಶಕ್ಕೆ ತೆರಳಿ ಕುಸಿಯುವ ಹಂತದಲ್ಲಿರುವ ಗುಡ್ಡದ ಪರಿಶೀಲನೆ ನಡೆಸಿತು. ದಶಕಗಳ ಹಿಂದೆ ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತ ಉಂಟಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವಾರಗಳ ಕಾಲ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಕೆತ್ತಿಕಲ್ ಗುಡ್ಡ ಕುಸಿತದ ಅಪಾಯದಲ್ಲಿದೆ. ಈಗಾಗಲೇ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಸಹಿತ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಅವ್ಯಾಹತ ಮಳೆ ಸುರಿದರೆ ಗುಡ್ಡ ಕುಸಿತಗೊಂಡು ಅನಾಹುತ ಉಂಟಾಗುವುದನ್ನು ತಳ್ಳಿಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿ ಎನ್‌ಐಟಿಕೆ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಂತ್ರಜ್ಞರಿಂದ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಈ ನಡುವೆ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡ ಮೇರೆಗೆ ಕೇಂದ್ರದಿಂದ ಅಧ್ಯಯನ ತಂಡ ಕಳುಹಿಸುವಂತೆ ಸರ್ಕಾರವೂ ಪ್ರಸ್ತಾವನೆ ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಲು ಮಂಗಳೂರಿಗೆ ಆಗಮಿಸಿದೆ.
ಘಾಟ್ ಪ್ರದೇಶಗಳಿಗೂ ಭೇಟಿ:ಪ್ರಥಮವಾಗಿ ಕುಸಿತದ ಭೀತಿಗೆ ಒಳಗಾಗಿರುವ ಕೆತ್ತಿಕಲ್‌ನಲ್ಲಿ ಎರಡು ದಿನಗಳ ಕಾಲ ಅಧ್ಯಯನ ನಡೆಸಲಿರುವ ಈ ತಂಡ ಬಳಿಕ ಶಿರಾಡಿ, ಚಾರ್ಮಾಡಿ ಹಾಗೂ ಸಂಪಾಜೆ ಘಾಟ್‌ಗಳಿಗೆ ತೆರಳಿ ಪರಿಶೀಲನೆ ನಡೆಸಲಿದೆ. ಪ್ರತಿ ವರ್ಷ ಭಾರಿ ಮಳೆಗೆ ಈ ಘಾಟ್‌ಗಳಲ್ಲಿ ಕುಸಿತ ಉಂಟಾಗಿ ವಾಹನ ಸಂಚಾರವೇ ಬಂದ್ ಆಗುತ್ತಿದೆ. ಹೀಗಾಗಿ ಪದೇ ಪದೇ ಕುಸಿತಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಅಧ್ಯಯನ ತಂಡ ಕಾರಣ ಕಂಡುಕೊಳ್ಳುವ ಪ್ರಯತ್ನ ನಡೆಸಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.