ಶಿಥಲಗೊಂಡ ಕುಸಮಳಿ ಸೇತುವೆಗೆ ಜಿಲ್ಲಾ ಅಧಿಕಾರಿಗಳ ತಂಡ ಭೇಟಿ

| Published : Jul 22 2024, 01:22 AM IST

ಶಿಥಲಗೊಂಡ ಕುಸಮಳಿ ಸೇತುವೆಗೆ ಜಿಲ್ಲಾ ಅಧಿಕಾರಿಗಳ ತಂಡ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿ ಮೇಲೆ ಕುಸಮಳಿ ಗ್ರಾಮದ ಬಳಿ ಮಲಪ್ರಭಾ ನದಿಯ ಸೇತುವೆ ಶಿಥಿಲಗೊಂಡ ಹಿನ್ನೆಲೆ ಭಾನುವಾರ ಬೆಳಗಾವಿ ಡಿಸಿ ಮೊಹಮ್ಮದ್‌ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್.ಪಿ. ಡಾ.ಭೀಮಾಶಂಕರ ಗುಳೇದ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕನ್ನಡಪ್ರಭ ವಾರ್ತೆ ಖಾನಾಪುರ

ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿ ಮೇಲೆ ಕುಸಮಳಿ ಗ್ರಾಮದ ಬಳಿ ಮಲಪ್ರಭಾ ನದಿಯ ಸೇತುವೆ ಶಿಥಿಲಗೊಂಡ ಹಿನ್ನೆಲೆ ಭಾನುವಾರ ಬೆಳಗಾವಿ ಡಿಸಿ ಮೊಹಮ್ಮದ್‌ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್.ಪಿ. ಡಾ.ಭೀಮಾಶಂಕರ ಗುಳೇದ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಬೆಳಗಾವಿಯಿಂದ ಜಾಂಬೋಟಿ, ಕಣಕುಂಬಿ, ಚೋರ್ಲಾ ಮಾರ್ಗವಾಗಿ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಲಪ್ರಭಾ ನದಿ ದಾಟಲು ಇರುವ ಪ್ರಮುಖ ರಸ್ತೆಯ ಸೇತುವೆ ಶಿಥಿಲಗೊಂಡಿದ್ದರಿಂದ ಭಾರೀ ಗಾತ್ರದ ವಾಹನಗಳ ಸಂಚಾರ ನಿರ್ಬಂಧಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಜಿಲ್ಲಾಡಳಿತಕ್ಕೆ ಕೋರಿತ್ತು. ಜಿಲ್ಲಾಧಿಕಾರಿಗಳು ಶನಿವಾರದಿಂದ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಆದೇಶಿಸಿದ್ದರು. ಆದೇಶದ ಬಗ್ಗೆ ಮಾಹಿತಿ ಇಲ್ಲದ್ದರಿಂದ ಶನಿವಾರ ಮತ್ತು ಭಾನುವಾರ ಗೋವಾ ರಾಜ್ಯದಿಂದ ಅನೇಕ ಭಾರೀ ಗಾತ್ರದ ವಾಹನಗಳು ಸೇತುವೆಯ ಬಳಿ ಬಂದು ಸಾಲಾಗಿ ಗಂಟೇಗಟ್ಟಲೇ ನಿಂತಿದ್ದವು. ಪೊಲೀಸರು ಸೇತುವೆಯ ಮೂಲಕ ಸಾಗಲು ಬಂದ ವಾಹನಗಳಿಗೆ ಪರ್ಯಾಯ ಮಾರ್ಗದ ಮೂಲಕ ತೆರಳಲು ಸೂಚಿಸಿದ್ದರು. ಈ ವೇಳೆ ಉಂಟಾದ ವಾಹನ ದಟ್ಟಣೆಯಿಂದ ಬೆಳಗಾವಿ-ಪಣಜಿ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಪರದಾಡಿದರು. ಜೊತೆಗೆ ಸ್ಥಳೀಯ ನಾಗರಿಕರು, ಪೊಲೀಸರು ಮತ್ತು ವಾಹನ ಚಾಲಕರ ನಡುವೆ ವಾಗ್ವಾದ ನಡೆದು ಪರಸ್ಪರ ಮಾತಿನ ಚಕಮಕಿಯೂ ನಡೆದಿತ್ತು

ಭಾನುವಾರ ಸಂಜೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸ್ಥಳೀಯಯರು, ಅಧಿಕಾರಿಗಳಿಂದ ಸೇತುವೆಯ ಸ್ಥಿತಿಗತಿ, ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ, ಪರ್ಯಾಯ ಮಾರ್ಗದ ವ್ಯವಸ್ಥೆ ಮತ್ತಿತರ ವಿಷಯಗಳ ಕುರಿತು ಚರ್ಚಿಸಿದರು. ಬೆಳಗಾವಿ-ಪಣಜಿ ಹೆದ್ದಾರಿಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಮತ್ತು ಅಪಘಾತ ತಡೆಯಲು ಅನುಸರಿಸಬೇಕಾದ ನಿಮಯಗಳ ಬಗ್ಗೆ ಅಧಿಕಾರಿಗಳಿಗೆ ಖಾನಾಪುರ ವಕೀಲರ ಸಂಘದ ಅಧ್ಯಕ್ಷ ಈಶ್ವರ ಘಾಡಿ ಹಾಗೂ ಇತರರು ಮಾಹಿತಿ ನೀಡಿ ರಸ್ತೆ ಸುಧಾರಣೆಗೆ ಆದ್ಯತೆ ನೀಡುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಖಾನಾಪುರ ಠಾಣೆಯ ಇನ್ಸಪೆಕ್ಟರ್ ಮಂಜುನಾಥ ನಾಯ್ಕ, ಸಿಬ್ಬಂದಿ ಜಯರಾಮ್ ಹಮ್ಮಣ್ಣವರ, ಬೆಳಗಾವಿ ಹೆಚ್ಚುವರಿ ಎಸ್.ಪಿ ಶ್ರುತಿ, ಸಾಮಾಜಿಕ ಕಾರ್ಯಕರ್ತರಾದ ಮಹಾಂತೇಶ ರಾಹೂತ, ಮಹಾದೇವ ಕೋಳಿ, ಸುರೇಶ ಜಾಧವ, ವಿನಾಯಕ ಮುತಗೇಕರ, ಸುರೇಶ ದಂಡಗಲ, ಸಕ್ಕೂಬಾಯಿ ಪಾಟೀಲ, ಭೈರು ಪಾಟೀಲ ಮತ್ತಿತರರು ಇದ್ದರು.