ಸಾರಾಂಶ
ಕುರುಗೋಡು: ಕಳೆದ ಎರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಪಟ್ಟಣದ ಹರಿಕೃಪಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ನೀರು ಹರಿದು ಅಡಿಪಾಯ ಕುಸಿದಿತ್ತು.
ಮಳೆಯ ಹಾನಿಗೆ ೪ ಕೊಠಡಿಗಳು ಒಳಗಾಗಿದ್ದು, ಸಾಮಗ್ರಿಗಳು, ಪರಿಕರಗಳು ನೀರು ಪಲಾಗಿವೆ. ಎಲ್ಲೆಂದರಲ್ಲಿ ಕರೆಬಂಡೆ ಕಿತ್ತು ಹೋಗಿ ಕೊಠಡಿಗಳ ಅಡಿಪಾಯ ಕುಸಿದು ಹೋಗಿವೆ. ಯಾವ ಸಂದರ್ಭದಲ್ಲಿ ಆದರೂ ಕಟ್ಟಡಗಳು ಕುಸಿಯುವ ಹಂತದಲ್ಲಿವೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಆತಂಕಕ್ಕೆ ಒಳಗಾಗಿದ್ದು, ಸದ್ಯ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಬಾಲಕರ ಪಿಯು ಕಾಲೇಜನಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಹಾನಿಗೆ ಒಳಗಾದ ಶಾಲೆಯ ಕೊಠಡಿಗಳಿಗೆ ಶಾಸಕ ಜೆ.ಎನ್. ಗಣೇಶ್, ತಹಸೀಲ್ದಾರ್ ನರಸಪ್ಪ, ಎಂಜಿನಿಯರಿಂಗ್ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಶೀಘ್ರದಲ್ಲಿ ಹಾನಿಗೆ ಒಳಗಾದ ಕೊಠಡಿಗಳನ್ನು ಪುನರ್ ನಿರ್ಮಾಣ ಮಾಡಿಕೊಡಲಾಗುವುದುಎಂದು ಶಾಸಕ ಗಣೇಶ್ ಮತ್ತು ತಹಸೀಲ್ದಾರ್ ನರಸಪ್ಪ ಭರವಸೆ ನೀಡಿದ್ದಾರೆ.
ಮಳೆಯ ನೀರಿನಿಂದ ಶಾಲೆಯ ಕೊಠಡಿಗಳ ಒಳಗೆ ವಿವಿಧರೀತಿಯ ವಸ್ತುಗಳು, ಮಣ್ಣು ಸೇರಿದಂತೆ ಇತರೆ ಸಂಗ್ರಹಣೆಗೊಂಡು ಅವ್ಯವಸ್ಥೆಯ ತಾಣವಾಗಿದೆ.ಶಾಲೆಯೂ ವಿವಿಧ ಅಲಂಕಾರದಿಂದ ಕೂಡಿದ್ದು, ಗ್ರಂಥಾಲಯ ಸೇರಿದಂತೆ ವಿವಿಧ ಸೌಲಭ್ಯಗಳಿಂದ ಮಕ್ಕಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಮುಂದಾಗಿದ್ದು, ಮಳೆಯ ಅವಾಂತರದಿಂದ ಮಕ್ಕಳ ಕನಸು ಕಸಿದುಕೊಂಡಂತಾಗಿದೆ.
ಈ ಕುರಿತು ಸರ್ಕಾರದಿಂದ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ ಎಂಜಿನಿಯರಿಂಗ್ ಗಳಿಂದ ಪರಿಶೀಲಿಸಿ ಕೊಠಡಿಗಳ ಪುನರ್ ನಿರ್ಮಾಣಕ್ಕೆ ವರದಿ ಸಲ್ಲಿಸುವಂತೆ ನೋಟಿಸ್ ನೀಡಲಾಗಿದ್ದು. ಅಧಿಕಾರಿಗಳ ಕಾರ್ಯ ಚುರುಕುಗೊಂಡಿದೆ.ಶಾಲೆಯಲ್ಲಿ ೧ರಿಂದ ೫ನೇ ತರಗತಿವರೆಗೆ ೧೦೪ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕೊಠಡಿಗಳು ಮಳೆಗೆ ಹಾನಿಗೆ ಒಳಗಾದ ಪರಿಣಾಮ ಬಾಲಕರ ಪಿಯು ಕಾಲೇಜು ಕೊಠಡಿಗೆ ಸ್ಥಳಾಂತರಗೊಂಡಿದ್ದಾರೆ. ಅದರಲ್ಲಿ ಕೂಡ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು, ಸಮಸ್ಯೆಗಳ ಮಧ್ಯೆ ಕಲಿಕೆ ಕಲಿಯಬೇಕಾಗಿದೆ. ಸರ್ಕಾರ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಶೀಘ್ರವೇ ಕೊಠಡಿಗಳ ದುರಸ್ತಿಗೆ ಮುಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.
ಕುರುಗೋಡು ಪಟ್ಟಣದ ಹರಿಕೃಪಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಳೆಗೆ ಹಾನಿಗೆ ಒಳಗಾದ ಕಾರಣ ಸ್ಥಳಕ್ಕೆ ಎಂಜಿನಿಯರಿಂಗ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.