ದೊಡ್ಡ ಉಳ್ಳಾರ್ತಿ ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ

| Published : Oct 25 2024, 01:06 AM IST

ದೊಡ್ಡ ಉಳ್ಳಾರ್ತಿ ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿಯ ದೊಡ್ಡ ಉಳ್ಳಾರ್ತಿ ಸರ್ಕಾರಿ ಉನ್ನತ್ತೀಕರಿಸಿದ ಪ್ರಾಥಮಿಕ ಶಾಲೆಯ ಕೊಠಡಿಗಳು ಮಳೆ ನೀರಿನಿಂದ ಸೋರುತ್ತಿರುವ ಜೊತೆಗೆ, ಶಾಲಾ ಆವರಣದಲ್ಲಿ ಮಳೆಯ ನೀರು ನಿಂತು ವಿದ್ಯಾರ್ಥಿಗಳು ತರಗತಿಗೆ ಪ್ರವೇಶಿಸಲು ಉಂಟಾದ ಸಮಸ್ಯೆ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಹಿಂದೆಯೇ ಕ್ಷೇತ್ರದ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮತ್ತು ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಶಾಲಾ ಕೊಠಡಿಗಳ ದುಸ್ಥಿತಿಯನ್ನು ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಗ್ರಾಮೀಣ ಭಾಗದ ಶಾಲೆಗಳ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತಿದೆ. ನಗರ ಪ್ರದೇಶದಲ್ಲಿ ಸಹ ಶಾಲಾ ಕೊಠಡಿಗಳ ದುರಸ್ಥಿತಿ ಕಾರ್ಯ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಮನವಿಮಾಡಿಕೊಳ್ಳಲಾಗಿದೆ. ಪ್ರಸ್ತುತ ಗ್ರಾಮದ ಶಾಲೆಯ ಕೊಠಡಿ ಸೋರಿಕೆ ಹಾಗೂ ನೀರು ನಿಂತ ಬಗ್ಗೆ ಎಸ್‌ಡಿಎಂಸಿ ಅಧ್ಯಕ್ಷ ಆಗ್ರಹಿಸಿದ ಮನವಿಯನ್ನು ಪರಿಗಣಿಸಿ ಡಿಡಿಪಿಐಗೆ ಮಾಹಿತಿ ನೀಡಲಾಗಿದೆ. ಈಗಾಗಲೇ ಇಂಜಿನಿಯರ್‌ಗಳ ತಂಡ ಭೇಟಿ ನೀಡಿ ಶೀಘ್ರದಲ್ಲೇ ತುರ್ತು ರಿಪೇರಿಕಾರ್ಯವನ್ನು ಕೈಗೊಳ್ಳಲಿದೆ ಎಂದು ಹೇಳಿದರು.

ಪ್ರಸ್ತುತ ಈ ಶಾಲೆಯಲ್ಲಿ ೫ ಆರ್‌ಸಿಸಿ, ೬ ಸಿಮೆಂಟ್‌ಶೀಟ್ ಹೊಂದಿದ ಕೊಠಡಿಗಳಿವೆ. ನಿರೀಕ್ಷೆಗೂ ಮೀರಿ ಈ ಬಾರಿ ಹೆಚ್ಚು ಮಳೆಯಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಮನವಿ ಮಾಡಿ ಶಾಲಾ ಆವರಣದಲ್ಲಿ ನಿಂತಿರುವ ನೀರನ್ನು ಬೇರೆಡೆ ಸಾಗಿಸುವ ಬಗ್ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಪೆದ್ದಯ್ಯ ಮಾಹಿತಿ ನೀಡಿ, ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಗಮನಹರಿಸುವಂತೆ ಪತ್ರಿಕೆ ಮೂಲಕ ಮನವಿ ಮಾಡಿದ್ದೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೆ. ಕೊಠಡಿಗಳ ಸೋರಿಕೆಯಿಂದ ವಿದ್ಯಾರ್ಥಿಗಳು ಕುಳಿತು ಪಾಠ ಆಲಿಸಲು ಸಾಧ್ಯವಿಲ್ಲ. ತುರ್ತು ರಿಪೇರಿ ಅಗತ್ಯವಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರಿಯಮ್ಮ, ಪಿಡಿಒ ಸುರೇಶ್, ತಾಲ್ಲೂಕು ಪಂಚಾಯಿತಿ ಇಂಜಿನಿಯರ್ ಗುರುರಾಜ್, ಸಿಇಒ ಮಾರುತಿಭಂಡಾರಿ, ಸಿಆರ್‌ಪಿ ವಿಷ್ಣು, ಮುಖ್ಯ ಶಿಕ್ಷಕ ಮಂಜುನಾಥ, ಶಿಕ್ಷಕ ಪ್ರಭು ಮುಂತಾದವರು ಉಪಸ್ಥಿತರಿದ್ದರು.

ಅಕ್ಟೋಬರ್ ತಿಂಗಳ ಮೊದಲ ವಾರದಲ್ಲೇ ಕಾರ್ಯಪಾಲಕ ಅಭಿಯಂತರರು ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗಕ್ಕೆ ನಾಲ್ಕು ಶಾಲೆಗಳ ನವೀಕರಣಕ್ಕೆ ಸುಮಾರು ೪೫.೫೮ ಲಕ್ಷ ಹಣ ಬಿಡುಗಡೆಗೆ ಮನವಿ ಮಾಡಿದೆ. ದೊಡ್ಡ ಉಳ್ಳಾರ್ತಿ-೧೨, ಕ್ಯಾದಿಗುಂಟೆ-೦೮, ಚೌಳೂರು-೧೬, ದೊಡ್ಡಚೆಲ್ಲೂರು-೯.೫೮ ಲಕ್ಷ ರು. ಹಣ ಬಿಡುಗಡೆಗೆ ಪ್ರಸ್ತಾವನೆ ಕಳಿಸಿದೆ.

- ಮಂಜುನಾಥ, ಡಿಡಿಪಿಐ.