ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನಗರದ ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿದ್ದ 13 ವರ್ಷದ ಮಗುವಿಗೆ ಅಪರೂಪದ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ತೀವ್ರ ಯಕೃತ್ತಿನ ವೈಫಲ್ಯದಿಂದ ಬಳಲುತ್ತಿದ್ದ ಮಗುವನ್ನು ನಗರದ ಜೆಎಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರೋಗಿಯ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿಲ್ಲ. ನಂತರ ಜೆಎಸ್ಎಸ್ ಆಸ್ಪತ್ರೆ ಮತ್ತು ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ತಜ್ಞರ ತಂಡವು ರೋಗಿಯನ್ನು ಮೌಲ್ಯಮಾಪನ ಮಾಡಿ, ಈ ರೋಗಿಯ ಬದುಕುಳಿಯುವ ಏಕೈಕ ಭರವಸೆಯೆಂದರೆ ಯಕೃತ್ತು ಕಸಿ ಎಂದು ತಿಳಿಸಿದರು.ಮಗುವಿನ ವೈದ್ಯಕೀಯ ಇತಿಹಾಸವನ್ನು ಅವರ ತಾಯಿಗೆ ತಿಳಿಸಿದಾಗ, ಮಗನಿಗೆ ತಾಯಿಯೇ ಲಿವರ್ ದಾನ ಮಾಡಲು ಇಚ್ಛಿಸಿದರು. ಯಕೃತ್ ಕಸಿ ತಂಡವು 48 ಗಂಟೆಯೊಳಗೆ ಎಲ್ಲಾ ವ್ಯವಸ್ಥೆಯನ್ನು ತ್ವರಿತವಾಗಿ ಮಾಡಿಕೊಂಡು, ಜೀವಂತ ದಾನಿ ಮತ್ತು ಮಗುವಿನ ವೈದ್ಯಕೀಯ ಸಮಗ್ರ ಮೌಲ್ಯಮಾಪನ ಮತ್ತು ಸಮಾಲೋಚಿಸಿ ನ. 2 ರಂದು ತಾಯಿಯಿಂದ ಮಗನಿಗೆ ಯಶಸ್ವಿಯಾಗಿ ಯಕೃತ್ ಕಸಿ ಮಾಡಲಾಯಿತು.5 ದಿನದ ನಂತರ ತಾಯಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಲಾಯಿತು. 14 ದಿನಗಳ ಮಗುವನ್ನು ಕೂಡ ಡಿಸ್ಚಾರ್ಜ್ ಮಾಡಲಾಯಿತು. ದಾನಿ ಮತ್ತು ಮಗು ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಸಂತಸ ವ್ಯಕ್ತಪಡಿಸಿದ್ದಾರೆ.ಈ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಯ ಯಶಸ್ಸು ನಮ್ಮ ಕಸಿ ಶಸ್ತ್ರಚಿಕಿತ್ಸಾ ತಂಡದ ಸಮರ್ಪಣೆ ಮತ್ತು ಕೌಶಲ್ಯವನ್ನು ತೋರಿಸುತ್ತದೆ. ಜೊತೆಗೆ ಜೀವಂತ ದಾನಿಯ ಸಹಾನುಭೂತಿ, ದಾನಿಯು ತಡಮಾಡದೆ ಕೂಡಲೇ ಯಕೃತ್ ಕಸಿಗೆ ಒಪ್ಪಿಗೆ ನೀಡಿದ್ದು ಮಗುವಿಗೆ ಉತ್ತಮ ಫಲಿತಾಂಶ ನೀಡಿದೆ ಎಂದು ವೈದ್ಯರು ಶ್ಲಾಘಿಸಿದ್ದಾರೆ.ಇದು ಜೆಎಸ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಕ್ಕಳ ತೀವ್ರ ಯಕೃತ್ತಿನ ವೈಫಲ್ಯದ ಚಿಕಿತ್ಸೆಗೆ ಜೀವಂತ ದಾನಿಯ ಯಕೃತ್ತಿನ ಕಸಿ ಮಾಡಿರುವ ಕರ್ನಾಟಕದ ಮೊದಲನೇ ಹಾಗೂ ಸತತ ಮೂರನೇ ಜೀವಂತ ದಾನಿಯ ಯಕೃತ್ ಕಸಿ ಮಾಡಿದ ಏಕೈಕ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಾಗಿದೆ ಎಂದು ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.