ಸಾರಾಂಶ
ಬದಲಾಗುತ್ತಿರುವ ತಂತ್ರಜ್ಞಾನದ ಸಂದರ್ಭದಲ್ಲಿ ಎಂಜಿನಿಯರ್ಸ್‌ಗಳು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವುದು ಅಗತ್ಯವಾಗಿದೆ. ಎಂಜಿನಿಯರ್ಸ್‌ಗಳು ನಿರಂತರ ಕಲಿಕೆಯಿಂದ ಜ್ಞಾನ ವೃದ್ಧಿಸಿಕೊಳ್ಳಬೇಕು
ಧಾರವಾಡ:
ವೃತ್ತಿ ಜೀವನ ನಿರ್ಮಿಸಲು ಮತ್ತು ಭವಿಷ್ಯ ರೂಪಿಸುವಲ್ಲಿ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಮಾರ್ಗದರ್ಶಕವಾಗಿ ಸ್ವೀಕರಿಸಲು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಡಾ. ಎಸ್. ವಿದ್ಯಾಶಂಕರ ಸಲಹೆ ನೀಡಿದರು.ಇಲ್ಲಿಯ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ 14ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ಬದಲಾಗುತ್ತಿರುವ ತಂತ್ರಜ್ಞಾನದ ಸಂದರ್ಭದಲ್ಲಿ ಎಂಜಿನಿಯರ್ಸ್‌ಗಳು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವುದು ಅಗತ್ಯವಾಗಿದೆ. ಎಂಜಿನಿಯರ್ಸ್‌ಗಳು ನಿರಂತರ ಕಲಿಕೆಯಿಂದ ಜ್ಞಾನ ವೃದ್ಧಿಸಿಕೊಳ್ಳಬೇಕು. ಈ ಕಾರ್ಯದಲ್ಲಿ ವಿಟಿಯು ಮುಂದಾಳತ್ವ ವಹಿಸಿದೆ. ಎಸ್‌ಡಿಎಂ ಕಾಲೇಜು ಈ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ಎಸ್‌ಡಿಎಂ ಸೊಸೈಟಿ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ ಮಾತನಾಡಿ, ಕಳೆದ 45 ವರ್ಷಗಳಿಂದ ಅತ್ಯುತ್ತಮ ತಾಂತ್ರಿಕ ಕುಶಾಗ್ರಮತಿ ಮತ್ತು ಉತ್ತಮ ಮೌಲ್ಯಗಳೊಂದಿಗೆ ಎಂಜಿನಿಯರ್ಸ್ ತಯಾರು ಮಾಡುವಲ್ಲಿ ಸಂಸ್ಥೆ ನಿರತವಾಗಿದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ. ರಮೇಶ ಚಕ್ರಸಾಲಿ ಮಾತನಾಡಿದರು. ಕಾಲೇಜಿನ ಉನ್ನತ ಅಂಕ ಗಳಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಲತಾ ಶ್ರೀಪಾದ ನಾಯಲ ಅವರಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಚಿನ್ನದ ಪದಕ ನೀಡಲಾಯಿತು. ಏಳು ಎಂಜಿನಿಯರಿಂಗ್ ವಿಭಾಗಗಳು ತಲಾ ಮೂರು ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ರ್‍ಯಾಂಕ್ ಮತ್ತು ಪದಕ ನೀಡಲಾಯಿತು.ಒಟ್ಟು 696 ಪದವಿ ಪೂರ್ವ ವಿದ್ಯಾರ್ಥಿಗಳು, 9 ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆದರು. ಸಂಸ್ಥೆಯ ಕಾರ್ಯದರ್ಶಿ ಜೀವಂಧರಕುಮಾರ, ಶೈಕ್ಷಣಿಕ ಮಂಡಳಿ ಸದಸ್ಯರು, ಡೀನ್ ಮತ್ತು ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಮತ್ತು ಸಿಬ್ಬಂದಿ ಇದ್ದರು. ಪ್ರೊ. ಇಂದಿರಾ ಉಮರ್ಜಿ ಪರಿಚಯಿಸಿದರು. ಪ್ರೊ. ವಿ.ಕೆ. ಪಾರ್ವತಿ ವಂದಿಸಿದರು.