ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಚಿಂತನೆ: ಕೊಡಗು ಮೈಸೂರು ಲೋಕಸಭಾ ಸದಸ್ಯ ಯದುವೀರ್‌ ಒಡೆಯರ್‌

| N/A | Published : Feb 27 2025, 12:36 AM IST / Updated: Feb 27 2025, 04:44 AM IST

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಚಿಂತನೆ: ಕೊಡಗು ಮೈಸೂರು ಲೋಕಸಭಾ ಸದಸ್ಯ ಯದುವೀರ್‌ ಒಡೆಯರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ವೇಟರ್‌ ವಿತರಣಾ ಕಾರ್ಯಕ್ರಮ ನಡೆಯಿತು. ಲೋಕಸಭಾ ಸದಸ್ಯ ಯದುವೀರ್‌ ಒಡೆಯರ್‌ ಭಾಗವಹಿಸಿದ್ದರು.

 ಕುಶಾಲನಗರ : ಕುಶಾಲನಗರ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದಂತೆ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಸಂಸದರ ಅನುದಾನ ನೀಡುವ ಮೂಲಕ ಆದ್ಯತೆ ಮೇಲೆ ಅಭಿವೃದ್ಧಿ ಗೊಳಿಸುವ ಬಗ್ಗೆ ಚಿಂತನೆ ಹರಿಸಲಾಗುವುದು ಎಂದು ಕೊಡಗು ಮೈಸೂರು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಅವರು ಕುಶಾಲನಗರ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ವೇಟರ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಮೂಲಕ ಶಾಲೆಗಳಿಗೆ ಮತ್ತು ಮಕ್ಕಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ನೀಡುವ ಕೆಲಸ ನಿರಂತರವಾಗಬೇಕು.

ವಿಕಸಿತ ಭಾರತದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ. ಉತ್ತಮ ಶಿಕ್ಷಣ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದ ಒಡೆಯರ್, ಸರ್ಕಾರಿ ಶಾಲೆಗೆ ಭೇಟಿ ನೀಡುವ ಅವಕಾಶ ದೊರಕಿರುವುದು ತುಂಬಾ ಸಂತಸದ ವಿಷಯ ಎಂದರು.

ಈ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಹಣಕಾಸಿನ ಮುಗ್ಗಟ್ಟು ಮುಂದಿಟ್ಟುಕೊಂಡು ಶಿಕ್ಷಣ ಸಂಸ್ಥೆ ರದ್ದುಗೊಳಿಸುವ ಸರ್ಕಾರದ ಚಿಂತನೆಯನ್ನು ಖಂಡಿಸಿದರು.

ಈ ಬಗ್ಗೆ ತಾನು ಪಾರ್ಲಿಮೆಂಟ್ ನಲ್ಲಿ ಕೂಡ ಪ್ರಸ್ತಾಪ ಮಾಡಿದ್ದೇನೆ. ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ನೀಡುವುದು ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ ಎಂದ ಅವರು ಕೊಡಗು ವಿವಿ ಉಳಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಆಗ್ರಹ ಮಾಡಲಾಗುತ್ತಿದೆ ಎಂದರು.

ರಾಜ್ಯ ಸರ್ಕಾರದಲ್ಲಿ ಭದ್ರತೆಯ ಕೊರತೆ ಸೃಷ್ಟಿಯಾಗುತ್ತಿದೆ ಎಂದು ಹೇಳಿದ ಒಡೆಯರ್ , ಪೊಲೀಸರ ಮೇಲೆ ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಸಮಾಜಘಾತಕ ಶಕ್ತಿಗಳಿಂದ ಹಲ್ಲೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮೈಸೂರು ಮತ್ತು ಗೋಣಿಕೊಪ್ಪ ಘಟನೆಯನ್ನು ಪ್ರಸ್ತಾಪಿಸಿದ ಸಂಸದರು ಸರ್ಕಾರ ಈ ನಿಟ್ಟಿನಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಎಂ ಪಿ ಅಪ್ಪಚ್ಚು ರಂಜನ್, ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ 30 ಸಾವಿರ ಸಂಖ್ಯೆಯ ಸ್ವೆಟರ್ ಗಳನ್ನು ವಿತರಣೆ ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ವಿರಾಜಪೇಟೆ ತಾಲೂಕಿಗೆ 9 ಸಾವಿರ ಮಡಿಕೇರಿ ತಾಲೂಕಿನ ಮಕ್ಕಳಿಗೆ 8 ಸಾವಿರ ಉಳಿದಂತೆ ಸೋಮವಾರಪೇಟೆ ಮತ್ತು ಕುಶಾಲನಗರ ಭಾಗದ ಮಕ್ಕಳಿಗೆ 13 ಸಾವಿರ ಸ್ವೆಟರ್ ಗಳ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಪಕ್ಷದ ಪ್ರಮುಖರು, ಶಾಲಾ ಶಿಕ್ಷಕರು ಎಸ್ ಡಿ ಎಂ ಸಿ ಅಧ್ಯಕ್ಷರು, ಪದಾಧಿಕಾರಿಗಳು, ಅಧಿಕಾರಿಗಳು ಇದ್ದರು.