ಸುರಿದ ಮಳೆಗೆ ಸಾವಿರ ಬಾಳೆ ಗಿಡ ನಾಶ

| Published : May 20 2024, 01:43 AM IST / Updated: May 20 2024, 11:54 AM IST

ಸಾರಾಂಶ

ಹಿರಿಯೂರು ತಾಲೂಕಿನ ಹೇಮದಳದಲ್ಲಿ ಮಳೆಗೆ ಬಾಳೆ ಬೆಳೆ ಹಾನಿಯಾಗಿರುವುದು.

 ಹಿರಿಯೂರು :  ಶನಿವಾರ ರಾತ್ರಿ ಸುರಿದ ಮಳೆಗೆ ಅಲ್ಲಲ್ಲಿ ಸಣ್ಣಪುಟ್ಟ ಹಾನಿಯಾಗಿದ್ದು ಇಕ್ಕನೂರಿನಲ್ಲಿ 35.2 ಮಿಮೀ ಮಳೆಯಾಗಿದೆ. ಬಬ್ಬೂರು-24.8 ಮಿಮೀ, ಹಿರಿಯೂರು-18.2ಮಿಮೀ, ಈಶ್ವರಗೆರೆಯಲ್ಲಿ 16ಮಿಮೀ ಮಳೆಯಾದರೆ ಸೂಗೂರಿನಲ್ಲಿ ಮಳೆಯ ವರದಿಯಾಗಿಲ್ಲ.ತಾಲೂಕಿನ ಹೇಮದಳದ ತಿಮ್ಮಾರೆಡ್ಡಿ ರಂಗಪ್ಪ ಅವರ ಸ.ನಂ.160/2b 3.09 ಗುಂಟೆ ಜಮೀನಿನಲ್ಲಿ ಬೆಳೆದ ಬಾಳೆ ತೋಟ ಹಾನಿಯಾಗಿದೆ. 

ಸುಮಾರು ಒಂದು ಸಾವಿರ ಬಾಳೆ ಗಿಡಗಳು ಬಿದ್ದು ಅಂದಾಜು 50 ಸಾವಿರ ರು. ನಷ್ಟವಾಗಿದೆ. ಅಲ್ಲದೆ 4 ಮನೆಗಳಿಗೆ ಹಾನಿಯಾಗಿದೆ ಎನ್ನಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಭಾಗದಲ್ಲಿ ಕೃತಿಕಾ ಮಳೆ ಅಬ್ಬರಿಸುತ್ತಿದ್ದು ಬತ್ತಿ ಹೋಗಿದ್ದ ಹೊಸದುರ್ಗ ತಾಲೂಕಿನ ಕೆಲ್ಲೋಡು ಚೆಕ್ ಡ್ಯಾಂ ಭರ್ತಿಯಾಗಿ ಮೈದುಂಬಿ ಹರಿಯುತ್ತಿದೆ.

 ವಿವಿ ಸಾಗರದ ಜಲಾಶಯದ ಮೇಲು ಭಾಗದಲ್ಲಿ ಮಳೆಯಾಗಿರುವುದರಿಂದ ಕೆಲ್ಲೋಡು ಬ್ಯಾರೇಜ್ ತುಂಬಿದ ನೀರು ಇದೀಗ ಕಾರೇಹಳ್ಳಿ ಬ್ಯಾರೇಜ್ ತಲುಪಿ ವಿವಿ ಸಾಗರ ಜಲಾಶಯದತ್ತ ಮುಖ ಮಾಡಿದೆ. ವಿವಿ ಸಾಗರಕ್ಕೆ ಒಳಹರಿವು ನೀರು ಬರುವ ಸಾಧ್ಯತೆ ಇದೆ. ಶನಿವಾರ ಸುರಿದ ಮಳೆಯೇ ಭಾನುವಾರವೂ ಮುಂದುವರೆದರೆ ಕೆಲ್ಲೋಡು ಚೆಕ್ ಡ್ಯಾಂ ಮೂಲಕ ನೀರು ಕಾರೆಹಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ ಸೇರಿದಂತೆ ಸಣ್ಣ ಪುಟ್ಟ ಗುಂಡಿಗಳು ತುಂಬಿ ನಂತರ ಜಲಾಶಯಕ್ಕೆ ಸರಾಗವಾಗಿ ಹರಿದು ಬರಲಿದೆ.

ಎಡ,ಬಲ ನಾಲೆಗಳಿಗೆ ನೀರು ಬಂದ್‌: ತಾಲೂಕಿನಲ್ಲಿ ಶನಿವಾರ ಉತ್ತಮ ಮಳೆಯಾದ ಹಿನ್ನೆಲೆ ವಾಣಿವಿಲಾಸ ಜಲಾಶಯದಿಂದ ಎಡ ಮತ್ತು ಬಲನಾಲೆಗಳ ಮೂಲಕ ಹರಿಸಿದ್ದ ನೀರು ನಿಲ್ಲಿಸಲಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆ ಜಲಾಶಯದಿಂದ ಎರಡನೇ ಹಂತದ ನೀರನ್ನು ಎರಡು ನಾಲೆಗಳ ಮೂಲಕ ಮೇ10 ರಿಂದ ಹರಿಸಲಾಗಿತ್ತು. ಆದರೆ ಸತತವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿವಿ ಸಾಗರದ ನೀರು ನಿಲ್ಲಿಸಲಾಗಿದೆ.