೭೫ ಗಂಟೆಯಲ್ಲಿ ಸಾವಿರ ಕಿ.ಮಿ. ಸೈಕಲ್ ಸವಾರಿ ಮಾಡಿ ತಿಮ್ಮೇಶಕುಮಾರ ದಾಖಲೆ

| Published : Oct 24 2024, 12:43 AM IST

೭೫ ಗಂಟೆಯಲ್ಲಿ ಸಾವಿರ ಕಿ.ಮಿ. ಸೈಕಲ್ ಸವಾರಿ ಮಾಡಿ ತಿಮ್ಮೇಶಕುಮಾರ ದಾಖಲೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ನಿರ್ದೇಶಕರಾಗಿರುವ ತಿಮ್ಮೇಶಕುಮಾರ ಸಂಪಲ್ಲಿ ಕೇವಲ ೭೫ ಗಂಟೆಯಲ್ಲಿ ಹುಬ್ಬಳ್ಳಿಯಿಂದ ಮೈಸೂರು ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ವಾಪಸ್‌ ಹುಬ್ಬಳ್ಳಿಗೆ ತಲುಪಿ ೧,೦೦೦ ಕಿಮೀ ಸೈಕಲ್ ಸವಾರಿ ಮುಗಿಸಿ ವಿಶೇಷ ದಾಖಲೆಮಾಡಿದ್ದಾರೆ.

ಹಾವೇರಿ: ಇಲ್ಲಿಯ ನಿರ್ಮಿತಿ ಕೇಂದ್ರದಲ್ಲಿ ಯೋಜನಾ ನಿರ್ದೇಶಕರಾಗಿರುವ ತಿಮ್ಮೇಶಕುಮಾರ ಸಂಪಲ್ಲಿ ಕೇವಲ ೭೫ ಗಂಟೆಯಲ್ಲಿ ಹುಬ್ಬಳ್ಳಿಯಿಂದ ಮೈಸೂರು ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ವಾಪಸ್‌ ಹುಬ್ಬಳ್ಳಿಗೆ ತಲುಪಿ ೧,೦೦೦ ಕಿಮೀ ಸೈಕಲ್ ಸವಾರಿ ಮುಗಿಸಿ ವಿಶೇಷ ದಾಖಲೆಮಾಡಿದ್ದಾರೆ ಎಂದು ಹಾವೇರಿ ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ಡಾ.ಎಂ.ಆರ್.ಎಂ. ರಾವ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಮ್ಮೇಶಕುಮಾರ ಅವರು ನಿರ್ಮಿತಿ ಕೇಂದ್ರದಲ್ಲಿ ಪ್ರಾಜೆಕ್ಟ್‌ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಹುಬ್ಬಳ್ಳಿಯಲ್ಲಿ ಸೈಕ್ಲಿಂಗ್ ಕ್ಲಬ್ ಆಯೋಜಿಸಿದ್ದ ಗಿನ್ನಿಸ್ ಬುಕ್ ವರ್ಲ್ಡ್ ರೆಕಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರೇರಣೆಗೊಂಡಿದ್ದರು. ಅಲ್ಲಿಂದ ತಮ್ಮ ಉದ್ಯೋಗದ ಜತೆಗೆ ಸೈಕ್ಲಿಂಗ್‌ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ತಿಮ್ಮೇಶಕುಮಾರ ಕಳೆದ ಏಪ್ರೀಲ್‌ನಲ್ಲಿ ದಿಲ್ಲಿಯಿಂದ ಕಾಶ್ಮೀರ ವರೆಗೆ ೮೪೦ ಕಿಮೀ ಸೈಕ್ಲಿಂಗ್ ಮಾಡಿದ್ದಾರೆ. ಅಲ್ಲದೇ ಅಡಾಕ್ಸ್ ಎನ್ನುವ ಇಂಟರ್‌ನ್ಯಾಷನಲ್ ಕ್ಲಬ್‌ನವರು ನಿರ್ವಹಿಸುವ ಸೂಪರ್ ರಾಂಡನರ್ ರೈಡುಗಳಲ್ಲಿ ೨೦೦ ಕಿಮೀ., ೩೦೦ ಕಿಮೀ, ೬೦೦ ಕಿಮೀ ರೈಡುಗಳನ್ನು ನಿಗದಿತ ವೇಳೆಗಿಂತ ಮುಂಚೆಯೇ ತಲುಪಿದ್ದಾರೆ. ಅಲ್ಲದೇ ಮುಂಬರುವ ೨೦೨೫ರ ಆಗಸ್ಟ್ ತಿಂಗಳಲ್ಲಿ ೧೬೦೦ ಕಿಮೀ ಸೈಕ್ಲಿಂಗ್ ಲಂಡನ್‌ನಿಂದ ಈಡನ್‌ಬರ್ಗ್ ಮತ್ತೆ ಲಂಡನ್‌ಗೆ ವಾಪಸ್ ಬರುವ ಗುರಿಯನ್ನು ಹಾಕಿಕೊಂಡಿದ್ದಾರೆ. ಈ ರೀತಿ ಸಾಧನೆ ಮಾಡಿದ್ದಕ್ಕೆ ಹೆಚ್ಚು ಸಂತಸವಾಗುತ್ತದೆ ಎಂದರು.

ನ.೧೦ರಂದು ಹಾವೇರಿ ಸೈಕ್ಲಿಂಗ್ ಕ್ಲಬ್ ವತಿಯಿಂದ ಸೈಕ್ಲೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್‌ನಲ್ಲಿ ಹಾವೇರಿಯಿಂದ ಆಗುಂಬೆ ವರೆಗೆ ಸುಮಾರು ೨೦೦ ಕಿಮೀ ಸೈಕಲ್ ರೈಡ್‌ನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸೈಕ್ಲಿಂಗ್ ಪಟು ತಿಮ್ಮೇಶಕುಮಾರ ಮಾತನಾಡಿ, ಪ್ರತಿಯೊಂದು ಸಾಧನೆಯಲ್ಲಿ ನಾವು ಪಡೆಯುವ ಸಂತೋಷ ಬೆಲೆಕಟ್ಟಲಾಗದು. ಸೈಕ್ಲಿಂಗ್‌ನಿಂದ ಉತ್ತಮ ಆರೋಗ್ಯ ಕಂಡುಕೊಳ್ಳಬಹುದು. ವಿವಿಧ ಸ್ಥಳಗಳನ್ನು ಹಾಗೂ ಸಂಸ್ಕೃತಿಯ ಹಲವಾರು ಜನರನ್ನು ಹಾಗೂ ಸ್ನೇಹಿತರನ್ನು ಭೇಟಿಯಾಗಬಹುದು ಎಂದರು.

ಇನ್ನೋರ್ವ ಸೈಕ್ಲಿಂಗ್ ಪಟು ಡಾ. ಶ್ರವಣ ಪಂಡಿತ್ ಮಾತನಾಡಿ, ಸೈಕ್ಲಿಂಗ್ ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗುತ್ತೇವೆ. ರಕ್ತದೊತ್ತಡ ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಬಿಪಿ, ಶುಗರ್ ನಿಯಂತ್ರಣದಲ್ಲಿ ಇರುತ್ತದೆ. ಸಾರ್ವಜನಿಕರು ಹೆಚ್ಚು ಸೈಕ್ಲಿಂಗ್ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

ದಯಾನಂದ ಸೂರಗುಂಡ ಮಾತನಾಡಿದರು. ಅರವಿಂದ ಮೂಲಿಮನಿ, ಸಚಿನ್‌ ದಾನಪ್ಪನವರ, ಡಾ. ಗುಹೇಶ್ವರ ಪಾಟೀಲ, ರಜತ್ ಹಳ್ಳಪ್ಪನವರ ಇದ್ದರು.