ಸಾರಾಂಶ
ತ್ವರಿತ ತೀರುವಳಿಗೆ ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ತಾಕೀತುಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನರೇಗಾ ಕಾಮಗಾರಿ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸೋಷಿಯಲ್ ಆಡಿಟ್ ಆಕ್ಷೇಪಣೆಯ 46,000 ಕಂಡಿಕೆಗಳು ಬಾಕಿ ಇದ್ದು, ತ್ವರಿತ ತಿರುವಳಿ ಮಾಡಿ ಮುಕ್ತಾಯಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಸೂಚಿಸಿದರು.ಚಿತ್ರದುರ್ಗದ ತಾಪಂ ಸಭಾಂಗಣದಲ್ಲಿ ಹಿರಿಯೂರು ಮತ್ತು ಚಿತ್ರದುರ್ಗ ತಾಲೂಕಿನ ನರೇಗಾ ಸಿಬ್ಬಂದಿಗಳಿಗೆ ಸೋಮವಾರ ನಡೆದ ನರೇಗಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಯಮಾವಳಿ ಉಲ್ಲಂಘಿಸಿದರೆ ಶಿಸ್ತು ಕ್ರಮ ಅನಿವಾರ್ಯವೆಂದು ಎಚ್ಚರಿಸಿದರು.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಹಾಜರಾತಿಯನ್ನು ಕಡ್ಡಾಯವಾಗಿ ಎರಡು ಬಾರಿ ಎನ್ಎಂಎಂಎಸ್ ಆ್ಯಪ್ ಮೂಲಕ ನಮೂದಿಸಬೇಕು. ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಹಾಜರಾತಿ ಪಡೆಯುವಲ್ಲಿ ನಿರ್ಲಕ್ಷ್ಯ ವಹಿಸುವ ಗ್ರಾಮ ಕಾಯಕ ಮಿತ್ರ ಮತ್ತು ಬಿಎಫ್‌ಟಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಕಾರ್ಮಿಕ ಹಾಜರಾತಿ ತೆಗೆದುಕೊಳ್ಳುವಾಗ ನಿಯಮ ಮೀರಿ ನಮೂದಿಸುವಂತೆ ಯಾವುದಾದರು ಅಥವಾ ಯಾರಿಂದಲಾದರೂ ಒತ್ತಡ ಬಂದಲ್ಲಿ, ನೇರವಾಗಿ ಸಂಬಂಧಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.ನರೇಗಾ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಹಾಜರಾತಿಯನ್ನು ಕಡ್ಡಾಯವಾಗಿ ಎರಡು ಬಾರಿ ಆ್ಯಪ್ ಮೂಲಕ ದೃಢೀಕರಿಸಬೇಕು. ಸೃಜಿತ ಎನ್ಎಂಆರ್ ನಂತೆ ಮಹಿಳೆಯರು ಕೆಲಸದಲ್ಲಿ ಭಾಗವಹಿಸಿರುವದನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ಯಾವುದೇ ಕಾರಣಕ್ಕೂ ಕೆಲಸಕ್ಕೆ ಗೈರಾದವರ ಹಾಜರಾತಿ ನೀಡದಂತೆ ನೋಡಿಕೊಳ್ಳಬೇಕು. ನರೇಗಾ ನಿಯಮ ಮೀರಿ ಹಾಜರಾತಿಯಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಅಂತಹ ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಲಾಗುವುದು ಎಂದು ತಿಮ್ಮಪ್ಪ ಎಚ್ಚರಿಸಿದರು.
ಹಿರಿಯೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಕುಮಾರ್ ಮಾತನಾಡಿ, ನರೇಗಾ ಅನುಷ್ಠಾನದ ಪಾರದರ್ಶಕತೆಗೆ ಮುಂದುವರೆದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ, ಹಾಗಾಗಿ ಉತ್ತಮ ಹಾಗೂ ಗುಣಮಟ್ಟದ ಅನುಷ್ಠಾನಕ್ಕೆ ಹೆಚ್ಚಿನ ಗಮಹರಿಸಬೇಕಿದೆ. ಕಾಮಗಾರಿ ಅನುಷ್ಠಾನದಲ್ಲಿ ತಳಹಂತದಲ್ಲಿ ಸಂಬಂಧಿಸಿದ ಸಿಬ್ಬಂದಿ, ಕಾರ್ಮಿಕ ಗುಂಪು ರಚಿಸುವಲ್ಲಿ ಮತ್ತು ಕೆಲಸದ ಹಾಜರಾತಿ ತೆಗೆದುಕೊಳ್ಳುವಲ್ಲಿ ಪ್ರಮುಖರಾಗಿರುತ್ತಾರೆ, ತದನಂತರ ತಾಂತ್ರಿಕ ಸಹಾಯಕರು, ಇನ್ನೂ ಮುಂದುವರೆದು ಮೇಲುಸ್ತುವಾರಿಗೆ ಪಿಡಿಒ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಗಮನಹರಿಸುತ್ತಾರೆ ಎಂದರು.ಚಿತ್ರದುರ್ಗ ತಾಪಂ ಇಒ ರವಿಕುಮಾರ್ ಮಾತನಾಡಿ, ತಾಂತ್ರಿಕ ಸಹಾಯಕರು ತಮ್ಮ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಆಕ್ಷೇಪಣೆ ಇರುವ ಕಾಮಗಾರಿಗಳ ಪೂರಕ ಮಾಹಿತಿ ಕ್ರೋಢೀಕರಿಸಿ ಸಮಿತಿ ಸಭೆಗೆ ಸಲ್ಲಿಸಿ, ತಿರುವಳಿ ಮಾಡಿಸಿಕೊಳ್ಲಬೇಕು. ಪ್ರಕರಣ, ಕಂಡಿಕೆಗಳನ್ನು ಮುಕ್ತಾಯಗೊಳಿಸಬೇಕು. ಸರ್ಕಾರದಿಂದ ನರೇಗಾಕ್ಕೆ ಸಂಬಂಧಿಸಿದಂತೆ 2 ತಿಂಗಳಿಗೆ ಒಮ್ಮೆ ಸಾಮಗ್ರಿ ಹಣ ಪಾವತಿ ಆಗುತ್ತಿದ್ದು, ಕಾಮಗಾರಿಗಳ ಮುಕ್ತಾಯದ ಪ್ರಗತಿ ನೂರು ಪ್ರತಿಶತ ಸಾಧನೆಯಾಗಬೇಕು. ಇನ್ನೂ ಜಿಯೋ ಟ್ಯಾಗ್‍ನ ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಸಂಬಂಧಿಸಿದವರ ಸಹಾಯ ಪಡೆದು ತ್ವರಿತ ಕ್ಲಿಯರೆನ್ಸ್ ಮಾಡುವಂತೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಕಚೇರಿಯ ಮೋಹನ್, ಸಹಾಯಕ ನಿರ್ದೇಶಕರಾದ ಎಚ್.ಎರ್ರಿಸ್ವಾಮಿ ಮತ್ತು ಶಿವಮೂರ್ತಿ ಕೆ, ತಾಂತ್ರಿಕ ಸಂಯೋಜಕರು, ಎಂಐಎಸ್ ಸಂಯೋಜಕರು, ತಾಲೂಕು ಐಇಸಿ ಸಂಯೋಜಕರು, ಎರಡೂ ತಾಲೂಕಿನ ತಾಂತ್ರಿಕ ಸಹಾಯಕರು ಭಾಗವಹಿಸಿದ್ದರು.