ಸಾರಾಂಶ
ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಯಲ್ಲಮ್ಮ ಬಸವರಾಜ ಉಮೇದುವಾರಿಕೆಯನ್ನು ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಯಾದಗಿರಿ-ರಾಯಚೂರು ಜಿಲ್ಲೆಗಳ ವ್ಯಾಪ್ತಿಯ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೇ ಶುಕ್ರವಾರ ಪೂರ್ಣಗೊಂಡಿದ್ದು, ಕೊನೆದಿನ ಒಬ್ಬ ಮಹಿಳೆ ಸೇರಿ 6 ಜನ ಅಭ್ಯರ್ಥಿಗಳು ಒಟ್ಟು 7 ನಾಮಪತ್ರ ಸಲ್ಲಿಸಿದ್ದು, ಇಲ್ಲಿಯವರೆಗೆ ಒಟ್ಟು 11 ಅಭ್ಯರ್ಥಿಗಳು 21 ನಾಮಪತ್ರ ಸಲ್ಲಿಸಿದಂತಾಗಿದೆ.ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಯಲ್ಲಮ್ಮ ಬಸವರಾಜ ಅವರು ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಭಾರತೀಯ ಜನ ಸಾಮ್ರಾಟ್ ಪಾರ್ಟಿಯಿಂದ ಶಾಮ್‌ರಾವ್ ಮೇದಾರ, ಭಾರತೀಯ ಜನತಾ ಪಾರ್ಟಿಯಿಂದ ರಾಜಾ ಅಮರೇಶ್ವರ ನಾಯಕ, ಸೋಷಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿ ರಾಮಲಿಂಗಪ್ಪ ಅವರು ಎರಡು ನಾಮಪತ್ರ ಸಲ್ಲಿಸಿದರೆ, ಕೆ.ದೇವಣ್ಣ ನಾಯಕ ಪಕ್ಷೇತರ ಅಭ್ಯರ್ಥಿಯಾಗಿ, ಬಹುಜನ ಸಮಾಜ ಪಾರ್ಟಿಯಿಂದ ನರಸಣ್ಣಗೌಡ ಹೊಸಮನಿ ನಾಮಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರೊಭೇಷನರಿ ಐಎಎಸ್ ಅಧಿಕಾರಿ ಸಾಹಿತ್ಯ ಆಲದಕಟ್ಟಿ, ಸಹಾಯಕ ಚುನಾವಣಾಧಿಕಾರಿ ಅಶೋಕ ದುಡಗುಂಟಿ, ಉಮೇದುದಾರರ ಸೂಚಕರು ಉಪಸ್ಥಿತರಿದ್ದರು.ಕಳೆದ ಎ.12 ರಿಂದ ಆರಂಭಗೊಂಡಿದ್ದ ನಾಮಪತ್ರ ಸಲ್ಲಿಕೆ ಕಾರ್ಯ ಪೂರ್ಣಗೊಂಡಿದ್ದು, ಶನಿವಾರ ನಾಮಪತ್ರಗಳ ಪರಿಶೀಲನೆ ಕಾರ್ಯವು ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳುವ ಎ.22 ಕೊನೆಯ ದಿನಾಂಕವಾಗಿದ್ದು, ಮೇ.7 ಮತದಾನ ಹಾಗೂ ಜೂ.4 ಕ್ಕೆ ಮತ ಎಣಿಕೆ ಪ್ರಕ್ರಿಯೆ ಜರುಗಲಿವೆ.