ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಲಯ ಸೇರಿದಂತೆ ಅಧೀನ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಒಟ್ಟು 331 ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಿದ ನ್ಯಾಯಾಧೀಶರು ಕಕ್ಷಿದಾರರಿಗೆ 96.54 ಕೋಟಿ ರು. ಪರಿಹಾರಕ್ಕೆ ಆದೇಶ ನೀಡಿದರು.ರಾಷ್ಟ್ರೀಯ, ರಾಜ್ಯ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 26, ಪ್ರಧಾನ ಅಪರ ನ್ಯಾಯಾಲಯದಲ್ಲಿ 38, ಪ್ರಧಾನ ನ್ಯಾಯಾಲಯದಲ್ಲಿ 78, ಒಂದನೇ ಅಪರ ನ್ಯಾಯಾಲಯದಲ್ಲಿ 93, ಎರಡನೇ ಅಪರ ನ್ಯಾಯಾಲಯದಲ್ಲಿ 39, ಮೂರನೇ ಅಪರ ನ್ಯಾಯಾಲಯದಲ್ಲಿ 37 ಹಾಗೂ ನಾಲ್ಕನೇ ಅಪರ ನ್ಯಾಯಾಲಯದಲ್ಲಿ 20 ಪ್ರಕರಣಗಳು ಸೇರಿದಂತೆ ಒಟ್ಟು 331 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು.
ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್. ಹರಿಣಿ, ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎನ್. ಬಿ. ಮೋಹನ್ ಕುಮಾರಿ ಹಾಗೂ ಎರಡನೇ ಅಪರ ನ್ಯಾಯಾಧೀಶರಾದ ಎನ್. ವಿ.ಕೋನಪ್ಪ ಅವರುಗಳು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಿ 9,65,45, 590 ರು. ಗಳನ್ನು ನೊಂದ ಕಕ್ಷಿದಾರರಿಗೆ ಪರಿಹಾರ ರೂಪದಲ್ಲಿ ನೀಡಲು ಆದೇಶ ಹೊರಡಿಸಿದರು. ಅದಾಲತ್ ನಲ್ಲಿ 112 ಐಪಿಸಿ, 82 ಚೆಕ್ ಬೌನ್ಸ್, 46 ರಸ್ತೆ ಅಪಘಾತ ಹಾಗೂ 91 ಸಿವಿಲ್ ಪ್ರಕರಣ ಒಳಗೊಂಡಂತೆ ಒಟ್ಟು 331 ಪ್ರಕರಣ ಇತ್ಯರ್ಥ ಗೊಂಡಿತು.ಅದಾಲತ್ ನಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೀತಂ ಡೇವಿಡ್, ಕಪನಿ ನಂಜೇಶ್ವರ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಉಪಾಧ್ಯಕ್ಷ ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಎಂ.ಜೆ.ಸುಮಂತ್, ವಕೀಲರಾದ ಸ್ವಾಮಿ, ಶೋಭಾ, ಚೈತ್ರ, ಕುಮಾರ್, ದೇವರಾಜು ಶ್ರೀನಿವಾಸ, ಸುನಿಲ್ ಕುಮಾರ್ ಮತ್ತಿತರು ತಮ್ಮ ಪರ ಕಕ್ಷಿದಾರರೊಂದಿಗೆ ಭಾಗವಹಿಸಿದ್ದರು.
ಮಾನವೀಯತೆ ಮೆರೆದ ನ್ಯಾಯಾಧೀಶರುಮದ್ದೂರು:
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ನೆನೆಗುದಿಗೆ ಬಿದ್ದಿದ್ದ ಹಿರಿಯ ನಾಗರೀಕರ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥ ಪಡಿಸುವ ಮೂಲಕ ನ್ಯಾಯಾಧೀಶರು ಮಾನವೀಯತೆ ಮೆರೆದ ಪ್ರಸಂಗ ಪಟ್ಟಣದ ನ್ಯಾಯಾಲಯದಲ್ಲಿ ಜರುಗಿತು.ತಂದೆ ಮತ್ತು 25 ಜನರ ಕುಟುಂಬಗಳ ನಡುವಿನ ಆಸ್ತಿ ವಿವಾದ ಕಳೆದ ಎರಡು ವರ್ಷಗಳಿಂದ ನ್ಯಾಯಾಲಯದಲ್ಲಿ ನೆನಗುದಿಗೆ ಬಿದ್ದಿತ್ತು. ಪ್ರಕರಣ ಇತ್ಯರ್ಥಕ್ಕಾಗಿ ಹಿರಿಯ ನಾಗರಿಕರೊಬ್ಬರು ನ್ಯಾಯಾಲಯದ ವಿಚಾರಣೆಗೆ ಅಲೆದು ನಿತ್ರಾಣಗೊಂಡಿದ್ದರು. ಇದನ್ನು ಗಮನಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್.ಹರಿಣಿ ವಾದಿ ಮತ್ತು ಪ್ರತಿವಾದಿಗಳ ಪರ ವಕೀಲರ ಸಮ್ಮುಖದಲ್ಲಿ ಹಿರಿಯ ನಾಗರಿಕರು ಮತ್ತು ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು. ಹಿರಿಯ ನಾಗರೀಕರೆಂಬ ಅನುಕಂಪದ ಆಧಾರದ ಮೇಲಾದರೂ ರಾಜಿ ಸಂಧಾನ ಮಾಡಿಕೊಳ್ಳುವಂತೆ ಕುಟುಂಬದವರ ಮನವೊಲಿಸಿ ಪ್ರಕರಣವನ್ನು ಇತ್ಯರ್ಥ ಪಡಿಸುವ ಮೂಲಕ ನ್ಯಾಯಾಧೀಶರಾದ ಹರಿಣಿ ಮಾನವೀಯತೆ ಮೆರೆದರು.