ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಆರೋಗ್ಯ ಇಲಾಖೆಯ ಸೇವೆಗಳನ್ನು ಗ್ರಾಮೀಣರಿಗೆ ತಲುಪಿಸಲು ಕಲಾ ತಂಡಗಳ ಬಳಕೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ ಅಭಿನವ ಹೇಳಿದರು.ನಗರದ ವೆಂಕಟೇಶ್ವರ ಬಡಾವಣೆಯ ಕೊಳಚೆ ಪ್ರದೇಶದಲ್ಲಿ ಮಂಗಳವಾರ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಜಾನಪದ ಕಲಾ ಪ್ರಕಾರಗಳ ಕಿರು ನಾಟಕಗಳ ಮೂಲಕ ಆರೋಗ್ಯ ಇಲಾಖೆ ಸೇವೆಗಳನ್ನು ಬಲಪಡಿಸುವ ಕಾರ್ಯಕ್ರಮಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕಲಾಪ್ರಕಾರಣಗಳ ಬಳಕೆ ಪರಿಣಾಮಕಾರಿ ಎಂದರು.
ತಾಯಿ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಹು ಪ್ರಮುಖ ಮಾನದಂಡಗಳಾದ ತಾಯಿ ಮರಣ, ಶಿಶುಮರಣ ನಿಯಂತ್ರಣ, ಬಾಲ್ಯ ವಿವಾಹ ತಡೆಗಟ್ಟುವಿಕೆ, ಭ್ರೂಣ ಲಿಂಗ ಪತ್ತೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜನರ ವರ್ತನೆಗಳು ನಡವಳಿಕೆಗಳು ಬದಲಾವಣೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜಾನಪದ ಕಲಾ ಪ್ರಕಾರಗಳ ಕಿರು ನಾಟಕಗಳ ಮೂಲಕ ಪ್ರದರ್ಶನವ ನೀಡಲಾಗುತ್ತಿದೆ. ಕುಟುಂಬಗಳಲ್ಲಿ ಜರುಗುವ ಪರಿಸ್ಥಿತಿಯನ್ನು ನಾಟಕಗಳ ಮೂಲಕ ಪ್ರತಿಫಲಿಸಿ ಘಟನೆಗಳನ್ನು ನೆನಪು ಮಾಡುತ್ತಾ ಪರಿವರ್ತನೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಸೇವೆಗಳ ಮಾಹಿತಿಯನ್ನು ಜಾನಪದದೊಂದಿಗೆ ಮಿಳಿತಗೊಳಿಸಿ ಕಿರು ನಾಟಕಗಳನ್ನು ಪ್ರದರ್ಶಿಸಿ ಆರೋಗ್ಯ ಸೇವೆಗಳನ್ನು ಬಲಪಡಿಸುವುದಾಗಿದೆ ಎಂದು ಹೇಳಿದರು.ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯಕ್ ಮಾತನಾಡಿ, ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯ ಪ್ರತಿ ತಾಲೂಕಿಗೆ ಐದರಂತೆ ಒಟ್ಟು 30 ನಾಟಕ ಪ್ರದರ್ಶನಗಳು ಏರ್ಪಾಡು ಮಾಡಲಾಗಿದೆ. ಎಲ್ಲೆಲ್ಲಿ ತಾಯಿ ಮರಣ, ಶಿಶುಮರಣ ಹೆಚ್ಚು ಸಂಭವಿಸುತ್ತಿದೆಯೋ ಅಂತಹ ಗ್ರಾಮಗಳನ್ನು ಆಯ್ದು ನಡೆಸಲಾಗುತ್ತದೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ತಾಯಿ ಮರಣ, ಶಿಶುಮರಣ ನಿಯಂತ್ರಿಸುವಲ್ಲಿ ಜನರಿಗೆ ಜಾಗೃತಿ ಬೇಕಾಗಿರುತ್ತದೆ. ನಾಟಕಗಳು ಪರಿವರ್ತನೆ ತರಬಲ್ಲವೂ ಎಂದರು.ಈ ವೇಳೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಜಿಲ್ಲಾ ಪೋಷಣ್ ಅಭಿಯಾನದ ವ್ಯವಸ್ಥಾಪಕ ಕರಕಪ್ಪ ಮೇಟಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಜಾನಕಿ, ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀನಿವಾಸ್, ಗುರುಮೂರ್ತಿ, ಪ್ರವೀಣ್, ಆರೋಗ್ಯ ಸುರಕ್ಷತಾ ಅಧಿಕಾರಿ ವತ್ಸಲಮ್ಮ ಇದ್ದರು.