ಶಕ್ತಿ ಆರಾಧನೆಯ ಪ್ರಮುಖ ಕೇಂದ್ರವಾಗಿರುವ ಶಿರಸಿ ಮಾರಿಕಾಂಬೆಗೆ ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ ಹಾಗೂ ದೇವಿಯ ಅಲಂಕಾರಕ್ಕೆ ಆದ್ಯತೆ ನೀಡಲಾಗುತ್ತದೆ.

ಕಾರವಾರ: ದೇವಾಲಯಗಳ ಗಂಟಾನಾದ, ಭಕ್ತರ ಜಯಘೋಷದ ನಡುವೆ ಜಿಲ್ಲೆಯಲ್ಲಿ ಶರನ್ನವರಾತ್ರಿಯ ಸಂಭ್ರಮ ಮನೆಮಾಡಿದೆ.

ಶಕ್ತಿ ಆರಾಧನೆಗೆ ವಿಶೇಷ ಮಹತ್ವವಿರುವ ಜಿಲ್ಲೆಯಲ್ಲಿ ದೇವಿಯ ವಿವಿಧ ರೂಪಗಳ ಪೂಜೆ, ವಿಶೇಷ ಅಲಂಕಾರ, ಚಂಡಿ ಹವನ, ದುರ್ಗಾ ಪಾರಾಯಣ, ಭಜನೆ, ಸಂಗೀತ, ಯಕ್ಷಗಾನ ಸೇರಿದಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬಕ್ಕೆ ಕಳೆ ತುಂಬುತ್ತವೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಲೆಸಿರುವ ದೇವಿ ದೇವಸ್ಥಾನಗಳು ನವರಾತ್ರಿ ಸಂದರ್ಭದಲ್ಲಿ ಭಕ್ತರ ಆಕರ್ಷಣೆಯ ಕೇಂದ್ರಗಳಾಗುತ್ತವೆ. ಮನೆಗಳಲ್ಲಿ ಘಟಸ್ಥಾಪನೆ, ದೀಪಾರಾಧನೆ, ದೇವಿಗೆ ಹೂವಿನ ಅಲಂಕಾರ, ನೈವೇದ್ಯ ಸಮರ್ಪಣೆ ನಡೆದರೆ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಸಾದ ವಿತರಣೆ ಮತ್ತು ಭಕ್ತರಿಗೆ ದೇವಿ ದರ್ಶನದ ವ್ಯವಸ್ಥೆ ಮಾಡಲಾಗುತ್ತದೆ.

ಶಕ್ತಿ ಆರಾಧನೆಯ ಪ್ರಮುಖ ಕೇಂದ್ರವಾಗಿರುವ ಶಿರಸಿ ಮಾರಿಕಾಂಬೆಗೆ ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ ಹಾಗೂ ದೇವಿಯ ಅಲಂಕಾರಕ್ಕೆ ಆದ್ಯತೆ ನೀಡಲಾಗುತ್ತದೆ. ಈ ಬಾರಿಯ ನವರಾತ್ರಿ ಉತ್ಸವ ಅ. 11ರಿಂದ 20ರವರೆಗೆ ನಡೆಯಲಿದ್ದು, ಅ. 11ರಿಂದ 19ರ ವರೆಗೆ ದೇವಸ್ಥಾನದ ಸಭಾಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಕಾರವಾರ ತಾಲೂಕಿನ ಸದಾಶಿವಗಡ ದುರ್ಗಾದೇವಿ, ಸಂತೋಷಿಮಾತಾ, ಸಮಾದೇವಿ, ಅಂಕೋಲಾದ ಆರ್ಯಾದುರ್ಗಾ, ಕುಮಟಾ ಬಾಡ ಕಾಂಚಿಕಾಂಬಾ, ಹೊನ್ನಾವರದ ಕರಿಕಾನ ಪರಮೇಶ್ವರಿ, ಭಟ್ಕಳದ ದುರ್ಗಾಪರಮೇಶ್ವರಿ, ಸಿದ್ದಾಪುರದ ಭುವನೇಶ್ವರಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ದಿನಕ್ಕೊಂದು ಅಲಂಕಾರದಲ್ಲಿ ಕಂಗೊಳಿಸುವ ದೇವಿ ಭಕ್ತರ ಆಕರ್ಷಣೆಯಾಗಿದೆ.

ವಿವಿಧ ದೇವಿ ದೇವಸ್ಥಾನಗಳು ಹಾಗೂ ಗ್ರಾಮ ದೇವತೆಗಳ ಸನ್ನಿಧಿಯಲ್ಲಿ ನವರಾತ್ರಿ ಆಚರಣೆ ನಡೆಯುತ್ತದೆ. ಗ್ರಾಮೀಣ ಭಾಗಗಳಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವುದು, ಹೂವಿನ ಅಲಂಕಾರ ಮಾಡುವುದು, ಭಜನೆ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಸುವುದು ಹಬ್ಬದ ಪ್ರಮುಖ ಭಾಗಗಳಾಗಿವೆ. ಸಂಭ್ರಮದ ನವರಾತ್ರಿ ಆರಂಭಗೊಂಡಿದ್ದು, ವಿಜಯದಶಮಿಯ ತರುವಾಯ ತೆರೆ ಬೀಳಲಿದೆ.

ದಾಂಡಿಯಾ ಪ್ರಮುಖ ಆಕರ್ಷಣೆ

ಉತ್ತರ ಕನ್ನಡದ ನವರಾತ್ರಿ ಸಂಭ್ರಮ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ಹಲವೆಡೆ ದಾಂಡಿಯಾ ಪ್ರಮುಖ ಆಕರ್ಷಣೆಯಾದರೆ, ಜಿಲ್ಲೆಯ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗಗಳಾದ ಭಜನೆ, ಭಕ್ತಿಗೀತೆ, ಶಾಸ್ತ್ರೀಯ ಸಂಗೀತ, ನೃತ್ಯ, ಹರಿಕಥೆ, ಧಾರ್ಮಿಕ ಪ್ರವಚನ ಮತ್ತು ಯಕ್ಷಗಾನಕ್ಕೂ ಈ ಅವಧಿಯಲ್ಲಿ ಮಹತ್ವ ದೊರೆಯುತ್ತದೆ.

ದೇವಸ್ಥಾನಗಳ ಸಭಾಮಂಟಪಗಳು ಹಾಗೂ ಸ್ಥಳೀಯ ಸಾಂಸ್ಕೃತಿಕ ವೇದಿಕೆಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತವೆ.