ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮ ನಡೆಯುತ್ತಿದ್ದರೆ, ಇತ್ತ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರುವ ಹಂಪಿ ಪ್ರದೇಶದಲ್ಲಿ ರಾಮಾಯಣದ ಕುರುಹುಗಳು ಕಾಣಸಿಗುತ್ತಿದ್ದು, ಹಂಪಿ ಪ್ರದೇಶದಲ್ಲಿ ಶ್ರೀರಾಮ, ಲಕ್ಷ್ಮಣ ನಡೆದಾಡಿದ್ದರು ಎಂಬ ಪ್ರತೀತಿಯೂ ಇದೆ.ಹಂಪಿಯ ಮಾಲ್ಯವಂತ ರಘುನಾಥ ದೇವಾಲಯದ ಪ್ರದೇಶದಲ್ಲಿ ಶ್ರೀರಾಮಚಂದ್ರರು ಚಾತುರ್ಮಾಸ್ಯ ಆಚರಣೆ ಮಾಡಿದ್ದರು ಎಂಬ ಪ್ರತೀತಿ ಇದೆ. ಹಾಗಾಗಿ ಈ ದೇವಾಲಯದಲ್ಲಿರುವ ಶ್ರೀರಾಮ, ಲಕ್ಷ್ಮಣ, ಸೀತೆ, ಹನುಮನ ವಿಗ್ರಹಗಳು ಧ್ಯಾನಸ್ಥವಾಗಿದ್ದು, ರಾಮ, ಲಕ್ಷ್ಮಣರ ಬಳಿ ಬಿಲ್ಲು, ಬಾಣಗಳಿಲ್ಲ. ಈ ಭಾಗದಲ್ಲೇ ಶ್ರೀರಾಮ ನೆಲೆಸಿದ್ದರು ಎಂದು ಭಕ್ತರು ಹೇಳುತ್ತಾರೆ. ಮಾಲ್ಯವಂತ ರಘುನಾಥ ದೇವಾಲಯ ಹಂಪಿಯ ಪೌರಾಣಿಕ ಹಿನ್ನೆಲೆ ಹೊಂದಿರುವ ದೇವಾಲಯ ಎಂದು ಭಕ್ತರು ನಂಬುತ್ತಾರೆ.
ವಾಲಿ- ಸುಗ್ರೀವ ಗುಹೆ: ಹಂಪಿಯಲ್ಲಿ ರಾಮಾಯಣದ ಕುರುಹುಗಳು ಸಿಗುತ್ತಿದ್ದು, ವಾಲಿ- ಸುಗ್ರೀವ ಗುಹೆಗಳು ಹಂಪಿಯಲ್ಲಿದೆ. ವಾಲಿ-ಸುಗ್ರೀವರ ಕದನ ನಡೆದಿದ್ದು, ಹಂಪಿ ಪ್ರದೇಶದಲ್ಲೇ ಎಂಬ ಪ್ರತೀತಿಯೂ ಇದೆ. ಈ ಗುಹೆ ಬಳಿಯೇ ಸೀತೆ ಸೆರಗು ಇದೆ. ಸ್ವಲ್ಪದೂರದಲ್ಲೇ ಶಬರಿ ಗುಹೆ ಇದೆ. ರಾಮನಿಗೆ ಸಂಬಂಧಿಸಿದ ಸ್ಥಳಗಳು ಹಂಪಿಯಲ್ಲಿ ಕಾಣಸಿಗುತ್ತವೆ.ಹಂಪಿಯಲ್ಲಿ ಕೋದಂಡರಾಮ ದೇವಾಲಯ, ಪಟ್ಟಾಭಿರಾಮ ದೇವಾಲಯ, ಯಂತ್ರೋದ್ಧಾರಕ ಆಂಜನೇಯಸ್ವಾಮಿ ದೇವಾಲಯ ಕೂಡ ಇದೆ. ಈ ದೇವಾಲಯಗಳಿಗೆ ಉತ್ತರ ಭಾರತದಿಂದ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿ ಭಕ್ತರು ಪೂಜೆ ಸಲ್ಲಿಸುತ್ತಾರೆ. ಶ್ರೀರಾಮ ವಾನರ ಸೈನ್ಯವನ್ನು ಈ ಪ್ರದೇಶದಲ್ಲಿ ಭೇಟಿಯಾಗಿದ್ದು ಎಂಬ ಪ್ರತೀತಿಯೂ ಇದೆ.
ಅಂಜನಾದ್ರಿ ಆಂಜನೇಯ ಜನ್ಮಸ್ಥಾನ: ಅಂಜನಾದ್ರಿ ಹನುಮನ ಜನ್ಮಸ್ಥಾನವಾಗಿದ್ದು, ಈ ಪ್ರದೇಶ ಈಗ ಪ್ರಸಿದ್ಧಿ ಪಡೆದಿದೆ. ಉತ್ತರ ಭಾರತದಿಂದಲೂ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ರಾಮನ ಭಕ್ತ ಹನುಮನ ಪ್ರದೇಶ ಕೂಡ ಹಂಪಿ ಪ್ರದೇಶದಲ್ಲೇ ಬರುವುದರಿಂದ ಹಂಪಿ ಪ್ರದೇಶ ರಾಮಾಯಣದ ಭಾಗವಾಗಿದೆ. ಅಂಜನಾದ್ರಿ, ಕಿಷ್ಕಿಂದೆ, ಹಂಪಿ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ನೆಲೆಯಾಗಿದ್ದು, ಶ್ರೀರಾಮಚಂದ್ರರ ನೆಲೆಯಾಗಿತ್ತು.ತುಂಗಭದ್ರಾ ನದಿಯೇ ಪಂಪಾ ಸರೋವರವಾಗಿದ್ದು, ಚಕ್ರತೀರ್ಥ ಕೂಡ ಹಂಪಿ ಪ್ರದೇಶದಲ್ಲಿದೆ. ಹಂಪಿ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ನೆಲವಾಗಿದ್ದು, ಈ ನೆಲದ ವೀಕ್ಷಣೆಗೆ ಪ್ರವಾಸಿಗರಷ್ಟೇ ಯಾತ್ರಿಕರು ಕೂಡ ಆಗಮಿಸುತ್ತಾರೆ. ಈ ಪ್ರದೇಶಕ್ಕೆ ಉತ್ತರಭಾರತದಿಂದ ಸಾಧು, ಸಂತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕುಟುಂಬದ ಸದಸ್ಯರು ಆರಾಧಿಸುವ ದೈವ ಅಂಜನಾದ್ರಿಯ ಹನುಮನಾಗಿದ್ದು, ಈಗಲೂ ಅವರ ಕುಟುಂಬದ ಸದಸ್ಯರು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ ಹನುಮನ ದರ್ಶನ ಪಡೆಯುತ್ತಾರೆ.
ಹಂಪಿಯ ಬರೀ ಐತಿಹಾಸಿಕ ನೆಲೆಯಾಗಿರದೇ ಪೌರಾಣಿಕ ಹಿನ್ನೆಲೆ ಹೊಂದಿರುವ ಪ್ರದೇಶವಾಗಿದ್ದು, ಮಾಲ್ಯವಂತ ರಘುನಾಥ ದೇವಾಲಯ, ಕೋದಂಡರಾಮ ದೇವಾಲಯ, ಪಟ್ಟಾಭಿರಾಮ ದೇವಾಲಯ, ಯಂತ್ರೋದ್ಧಾರಕ ಆಂಜನೇಯಸ್ವಾಮಿ ದೇವಾಲಯದ ಜತೆಗೆ ಸೀತೆ ಸೆರಗು, ವಾಲಿ, ಸುಗ್ರೀವ ಗುಹೆ, ಶಬರಿ ಗುಹೆ ಕೂಡ ಹಂಪಿ ಪ್ರದೇಶದಲ್ಲಿದೆ. ಪಂಪಾ ಸರೋವರ(ತುಂಗಭದ್ರಾ ನದಿ) ಕೂಡ ಹಂಪಿ ಪ್ರದೇಶದಲ್ಲಿದೆ. ಶ್ರೀರಾಮ ನಡೆದಾಡಿದ ನೆಲ ಹಂಪಿಯಲ್ಲಿಯೂ ರಾಮಾಯಣದ ಕುರುಹು ಇರುವುದರಿಂದ ಉತ್ತರ ಭಾರತದಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಾಮಾಯಣದ ಕುರುಹು ಇರುವ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇನ್ನೂ ಹಂಪಿ ಪ್ರಾಧಿಕಾರ "ಹಂಪಿ ಬೈ ನೈಟ್ " ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ವಾಲಿ, ಸುಗ್ರೀವ ಕಥನವನ್ನು ಅಳವಡಿಸಿಕೊಂಡಿದ್ದು, ಈ ಪ್ರದೇಶದಲ್ಲೇ ವಾಲಿ- ಸುಗ್ರೀವರ ಕದನ ನಡೆದಿರುವುದನ್ನು ಈ ಕಥನ ಪುಷ್ಟಿ ನೀಡುತ್ತದೆ.ಪೌರಾಣಿಕ ಹಿನ್ನೆಲೆ: ಹಂಪಿಯಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಕುರುಹುಗಳಿವೆ. ಮಾಲ್ಯವಂತ ರಘುನಾಥ ದೇವಾಲಯ ಪ್ರದೇಶದಲ್ಲೇ ಶ್ರೀರಾಮ ಚಾತುರ್ಮಾಸ್ಯ ಆಚರಣೆ ಮಾಡಿದ ಪ್ರತೀತಿಯೂ ಇದೆ. ಸೀತೆ ಸೆರಗು, ವಾಲಿ, ಸುಗ್ರೀವ ಗುಹೆ, ಶಬರಿ ಗುಹೆ ಕೂಡ ಹಂಪಿ ಪ್ರದೇಶದಲ್ಲಿದೆ. ಪಂಪಾ ಸರೋವರ(ತುಂಗಭದ್ರ ನದಿ) ಕೂಡ ಹಂಪಿ ಪ್ರದೇಶದಲ್ಲಿದೆ. ಹಂಪಿ ಐತಿಹಾಸಿಕ ನೆಲದೊಂದಿಗೆ ಪೌರಾಣಿಕ ಹಿನ್ನೆಲೆ ಹೊಂದಿದೆ ಎಂದು ಹಂಪಿ ವಿವಿಯ ಪ್ರಾಧ್ಯಾಪಕರಾದ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ತಿಳಿಸಿದರು.