ಸಾರಾಂಶ
ಎನ್‌ಡಿಆರ್‌ಎಫ್, ರೈಲ್ವೆ ಸಿಬ್ಬಂದಿ ಕಾರ್ಯ । ಡಿಸಿಗೆ ಮಾಹಿತಿ
ಸಕಲೇಶಪುರ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ರೈಲ್ವೆ ಸಿಬ್ಬಂದಿಯಿಂದ ರೈಲು ಅಪಘಾತದ ಕಲ್ಪಿತ ಕಾರ್ಯಚರಣೆಯನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.ಶುಕ್ರವಾರವೇ ಕ್ರೇನ್ ಬಳಸಿ ಒಂದು ಬೋಗಿಯನ್ನು ಮಗುಚಿ ಹಾಕಿದ್ದರೆ ಮತ್ತೊಂದು ಭೋಗಿಯನ್ನು ಹಳಿಯಿಂದ ಬೇರ್ಪಡಿಸಲಾಗಿತ್ತು. ಶನಿವಾರ ಬೆಳಿಗ್ಗೆ ಇನ್ನೂರಕ್ಕೂ ಅಧಿಕ ಸಿಬ್ಬಂದಿ ಕಲ್ಪಿತ ಕಾರ್ಯಚರಣೆಗೆ ಇಳಿದಿದ್ದು ರೈಲು ಅಪಘಾತದ ವೇಳೆ ನಡೆಸುವ ಮುಂಜಾಗ್ರತೆ ಕ್ರಮದ ಬಗ್ಗೆ ಮೊದಲಿಗೆ ಜಿಲ್ಲಾಧಿಕಾರಿಗೆ ಸಿಬ್ಬಂದಿ ರೈಲು ಅಪಘಾತವಾದ ಮಾಹಿತಿ ನೀಡಿದರು. ಸ್ಥಳಕ್ಕೆ ಸಾರ್ವಜನಿಕ ಪ್ರವೇಶ ನಿಷೇದಿಸಿ, ರೈಲ್ವೆ ನಿಲ್ದಾಣದಲ್ಲಿ ಸೈರನ್ ಮೊಳಗಿಸುವ ಮೂಲಕ ಕಾರ್ಯಚರಣೆಗೆ ಇಳಿಯಲಾಯಿತು. ಮೊದಲಿಗೆ ರೈಲು ಬೋಗಿ ಕಿಟಿಕಿ ಹಾಗೂ ಮೇಲ್ಛಾವಣಿಯನ್ನು ತುಂಡರಿಸುವ ಮೂಲಕ ಒಳಗಿದ್ದ ಸಿಬ್ಬಂದಿಯನ್ನು ಹೊರತಂದು ಸ್ಥಳದಲ್ಲೆ ನಿರ್ಮಾಣ ಮಾಡಿದ್ದ ಟೆಂಟ್‌ನಲ್ಲಿ ತುರ್ತು ಚಿಕಿತ್ಸೆಗೆ ದಾಖಲಿಸಲಾಯಿತು.
ಪ್ರಯಾಣಿಕರ ರಕ್ಷಣೆಯ ನಂತರ ಕ್ರೇನ್ ಹಾಗೂ ಇತರೆ ಯಂತ್ರಗಳನ್ನು ಬಳಸಿ ನೆಲಕ್ಕುರುಳಿದ್ದ ಬೋಗಿಗಳನ್ನು ಮೇಲೆತ್ತುವ ಮೂಲಕ ಕಾರ್ಯಾಚರಣೆಯನ್ನು ಅಂತ್ಯಗೊಳಿಸಲಾಯಿತು. ಶನಿವಾರ ನಡೆದ ಕಲ್ಪಿತ ಕಾರ್ಯಾಚರಣೆಯ ನೋಡಲ್ ಅಧಿಕಾರಿಯನ್ನಾಗಿ ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ.ಎಂ.ಕೆ. ಶೃತಿ ಅವರನ್ನು ಜಿಲ್ಲಾಧಿಕಾರಿ ನೇಮಿಸಿದ್ದರು. ಶನಿವಾರ ಕಾರ್ಯಾಚರಣೆಗೂ ಮುನ್ನ ರೈಲ್ವೆ ಅಧಿಕಾರಿ, ಜಿಲ್ಲಾಧಿಕಾರಿಗೆ ಕರೆಮಾಡಿ ಸಕಲೇಶಪುರ ತಾಲೂಕಿನ ದೋಣಿಗಾಲ್ ಗ್ರಾಮ ಸಮೀಪ ರೈಲು ಅಪಘಾತವಾಗಿ ಎರಡು ಭೋಗಿಗಳು ನೆಲಕ್ಕುರುಳಿದ್ದು 10 ಜನರು ಮೃತಪಟ್ಟಿದ್ದಾರೆಂಬ ಮಾಹಿತಿ ನೀಡಿದ್ದರು. ಜಿಲ್ಲಾಧಿಕಾರಿ ಸ್ಥಳಕ್ಕೆ ದೌಡಾಯಿಸುವಂತೆ ಸಕಲೇಶಪುರ ಉಪ ವಿಭಾಗಾಧಿಕಾರಿ, ತಹಸೀಲ್ದರ್, ಡಿವೈಎಸ್‌ಪಿ ಗೆ ಸೂಚನೆ ನೀಡಿದ್ದು, ಜಿಲ್ಲೆಯಿಂದ ಹೆಚ್ಚಿನ ಆ್ಯಂಬುಲೆನ್ಸ್‌ಗಳು ತೆರಳುವಂತೆ ನಿರ್ದೇಶನ ನೀಡಿದ್ದರು.ಜಿಲ್ಲಾಧಿಕಾರಿಯ ನಿರ್ದೇಶನದ ಮೇರೆಗೆ ಸ್ಥಳಕ್ಕೆ ತಾರತುರಿಯಲ್ಲಿ ಆಗಮಿಸಿದ್ದ ತಾಲೂಕಿನ ಹಿರಿಯ ಮೂವರು ಅಧಿಕಾರಿಗಳು ಇದು ಕಲ್ಪಿತ ಕಾರ್ಯಾಚರಣೆ ಎಂಬುದನ್ನು ಖಾತ್ರಿಪಡಿಸಿಕೊಂಡರು. ಹಾಸನದಿಂದ ಹೊರಟ್ಟಿದ್ದ ಸಾಕಷ್ಟು ಆ್ಯಂಬುಲೆನ್ಸ್‌ಗಳು ವಿಚಾರ ತಿಳಿದು ಅರ್ಧ ದಾರಿಯಲ್ಲೇ ವಾಪಸ್ಸಾದವು.
;Resize=(128,128))
;Resize=(128,128))