ಸಾರಾಂಶ
ನಮ್ಮ ಪ್ರವಾಸದಲ್ಲಿ ಒಟ್ಟು ಎಂಟು ಜ್ಯೋತಿರ್ಲಿಂಗಗಳು, ಅನೇಕ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳಿದ್ದವು. ಎಲ್ಲವನ್ನೂ ಅತ್ಯಂತ ಸಮಾಧಾನದಿಂದ ನೋಡಿಕೊಂಡು ಬಂದೆವು
ನರೇಗಲ್ಲ: ನಮ್ಮ ಹಿರಿಯರು ಕೋಶ ಓದು ದೇಶ ಸುತ್ತು ಎಂದು ಹೇಳಿರುವುದರಲ್ಲಿ ಅರ್ಥವಿದೆ. ನಾವು ಲೋಕ ಜ್ಞಾನವನ್ನು ಪಡೆಯಬೇಕೆಂದರೆ ಪ್ರವಾಸ ಅವಶ್ಯಕವಾಗಿದೆ ಎಂದು ನರೇಗಲ್ಲ ನಿವೃತ್ತ ನೌಕರರ ಸಂಘದ ಅಧ್ಯಕ್ಷ, ನಿವೃತ್ತ ಪ್ರಾಚಾರ್ಯ ಡಿ.ಎ. ಅರವಟಗಿಮಠ ಹೇಳಿದರು.
ಅವರು ಸ್ಥಳೀಯ ಹಿರೇಮಠದ ಸಭಾಭವನದಲ್ಲಿ ಗುರುವಾರ ಸಂಜೆ ಜರುಗಿದ ಬೀಚಿ ಬಳಗದ ಮಾಸಿಕ ಸಭೆಯಲ್ಲಿ ಅವರು ತಮ್ಮ ಪ್ರವಾಸ ಕಥನ ಕುರಿತು ಉಪನ್ಯಾಸ ನೀಡಿದರು. ನಮ್ಮ ಪ್ರವಾಸದಲ್ಲಿ ಒಟ್ಟು ಎಂಟು ಜ್ಯೋತಿರ್ಲಿಂಗಗಳು, ಅನೇಕ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳಿದ್ದವು. ಎಲ್ಲವನ್ನೂ ಅತ್ಯಂತ ಸಮಾಧಾನದಿಂದ ನೋಡಿಕೊಂಡು ಬಂದೆವು. ಹದಿನೈದು ದಿನಗಳ ಈ ಪ್ರವಾಸ ನಮ್ಮ ಜೀವನದ ಅವಿಸ್ಮರಣೀಯ ಘಟನೆಗಳಲ್ಲಿ ಒಂದು ಎಂದು ಅರವಟಗಿಮಠ ಹೇಳಿದರು.ಪಂಢರಪುರದಿಂದ ಪ್ರಾರಂಭವಾದ ನಮ್ಮ ಯಾತ್ರೆಯು ಜ್ಯೋತಿರ್ಲಿಂಗಗಳ ದರುಶನ, ಕಾಶಿ ವಿಶ್ವೇಶ್ವರನ ದರುಶನ, ಆಗ್ರಾದ ತಾಜ್‌ಮಹಲ್, ರಾಷ್ಟ್ರದ ರಾಜಧಾನಿ ದೆಹಲಿ ಹೀಗೆ ಅನೇಕ ವೈವಿಧ್ಯಮಯ ಸ್ಥಳಗಳನ್ನು ಒಳಗೊಂಡಿತ್ತು. ನಾವು ಸೇವೆಯಲ್ಲಿದ್ದಾಗ ಕುಟುಂಬದವರೊಂದಿಗೆ ಪ್ರವಾಸ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಒಟ್ಟು 35 ಜನರು ಕುಟುಂಬ ಸಹಿತವಾಗಿ ಈ ಪ್ರವಾಸವನ್ನು ಮಾಡಿದ್ದು, ಒಂದು ರೋಚಕ ಅನುಭವವನ್ನೇ ನೀಡಿತು. ಇದರಿಂದ ಬಹಳಷ್ಟು ಜ್ಞಾನ ಸಂಪಾದನೆಗೂ ಅನುಕೂಲವಾಯಿತೆಂದು ಅರವಟಗಿಮಠ ಹೇಳಿದರು.ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಮಾತನಾಡಿ, ಪ್ರವಾಸದ ಅನುಭವಗಳು ಒಂದೆರಡಲ್ಲ. ಅದನ್ನು ಅನುಭವಿಸಿದವರಿಗೆ ಅದರ ಸವಿ ಏನೆಂಬುದು ಗೊತ್ತು. ನಮ್ಮ ಬೀಚಿ ಬಳಗದ ಮೂಲ ಉದ್ದೇಶದ ಪ್ರಕಾರ ಸದಸ್ಯರು ಪುಸ್ತಕವನ್ನೋದಿ ಅದರ ಬಗ್ಗೆ ಮಾತನಾಡುವ ಕಾರ್ಯ ಮತ್ತೆ ಮುಂದುವರಿಯಬೇಕು ಎಂದರು.ಡಾ. ಆರ್.ಕೆ. ಗಚ್ಚಿನಮಠ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೆ.ಎಸ್. ಕಳಕಣ್ಣವರ ಮಾತನಾಡಿ, ಮುಂದಿನ ಸಭೆಯೊಳಗೆ ದಶಮಾನೋತ್ಸವದ ಸ್ಮರಣ ಸಂಚಿಕೆಗಳನ್ನು ಸದಸ್ಯರೆಲ್ಲರಿಗೂ ತಲುಪಿಸುವ ಕಾರ್ಯವನ್ನು ಮಾಡುತ್ತೇವೆ ಎಂದರು. ಶಿಕ್ಷಕರ ಕ್ರೀಡಾಕೂಟದಲ್ಲಿ 57ನೇ ವಯಸ್ಸಿನಲ್ಲಿಯೂ ಸಾಧನೆ ಮಾಡಿ, ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿ.ಎ. ಕುಂಬಾರ ಅವರನ್ನು ಸಮಸ್ತ ಬೀಚಿಬಳಗದ ವತಿಯಿಂದ ಅಭಿನಂದಿಸಲಾಯಿತು.
ಸಾಹಿತಿ ಗುರುಲಿಂಗ ಕಾಪಸೆ ಅವರಿಗೆ ಬೀಚಿ ಬಳಗದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕೋಶಾಧ್ಯಕ್ಷ ಶಿವಯೋಗಿ ಜಕ್ಕಲಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ ಸ್ವಾಗತಿಸಿದರು. ನಿವೃತ್ತ ಸೈನಿಕ ಶಿವಪುತ್ರಪ್ಪ ಸಂಗನಾಳ, ಎಂ.ಕೆ. ಬೇವಿನಕಟ್ಟಿ, ಸಿ.ಕೆ. ಕೇಸರಿ, ಜೆ.ಎ. ಪಾಟೀಲ ಮುಂತಾದವರಿದ್ದರು. ಶಿಕ್ಷಕ ಬಿ.ಟಿ. ತಾಳಿ ಪ್ರಾರ್ಥಿಸಿದರು. ಎಚ್.ವಿ. ಈಟಿ ವಂದಿಸಿದರು.