ಸಾರಾಂಶ
ಕನ್ನಡಪ್ರಭ ವಾರ್ತೆ ಕಾರವಾರ
ಸ್ಯಾಟ್‌ಲೈಟ್ ಚಿತ್ರ ಸೇರಿದಂತೆ ಮೂರು ವಿಧದ ತಂತ್ರಜ್ಞಾನದ ಕಾರ್ಯಾಚರಣೆಯಲ್ಲೂ ಗಂಗಾವಳಿ ನದಿಯಲ್ಲಿ ಟ್ರಕ್‌ನಂತಹ ವಸ್ತು ಪತ್ತೆಯಾಗಿದೆ. ಆದರೆ ಗುರುವಾರ ಖಚಿತವಾಗಬೇಕಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.ಸ್ಯಾಟ್‌ಲೈಟ್ ಚಿತ್ರ, ಸೇನಾಪಡೆ, ನೌಕಾಪಡೆ ಈ ಮೂರೂ ವಿಧದ ಕಾರ್ಯಾಚರಣೆಯಲ್ಲೂ ಗಂಗಾವಳಿ ನದಿಯ ಒಂದು ನಿರ್ದಿಷ್ಟ ಪಾಯಿಂಟ್ ನಲ್ಲಿ ಟ್ರಕ್‌ನಂತಹ ವಸ್ತು ಇರುವುದು ಪತ್ತೆಯಾಗಿದೆ. ಆದರೆ ಈ ಪಾಯಿಂಟ್‌ನಲ್ಲಿ ನೌಕಾನೆಲೆಯ ಡೈವರ್ಸ್ ಮುಳುಗಿ ಪತ್ತೆಹಚ್ಚಲು ನೀರಿನ ವೇಗ ಅಡ್ಡಿ ಉಂಟುಮಾಡಿದೆ.
ಗುರುವಾರ ನೀರಿನ ಹರಿವು, ಹವಾಮಾನ ಉತ್ತಮವಾಗಿದ್ದಲ್ಲಿ ನೌಕಾನೆಲೆ ಡೈವರ್ಸ್ ಮುಳುಗಿ ಪತ್ತೆ ಹಚ್ಚಲಿದ್ದಾರೆ. ಜತೆಗೆ ಖಾಸಗೀ ಏಜೆನ್ಸಿ ಕೂಡ ಸ್ಯಾಟ್‌ಲೈಟ್ ಮೂಲಕ ನಿಖರವಾಗಿ ಪತ್ತೆಹಚ್ಚಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಜಗನ್ನಾಥ ಕುಟುಂಬಕ್ಕೆ ಉದ್ಯೋಗ:
ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ, ಉಪ ವಿಭಾಗಾಧಿಕಾರಿ ಅಥವಾ ತಹಸೀಲ್ದಾರ್ ಕಚೇರಿಯಲ್ಲಿ ಹೊರಗುತ್ತಿಗೆಯಲ್ಲಿ ಉದ್ಯೋಗ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.ಸಾರ್ವಜನಿಕ ಸಂಚಾರ ನಿಷೇಧ:
ಗುರುವಾರ ಶೋಧ ಕಾರ್ಯಾಚರಣೆ ನಡೆಯುವ ಪ್ರದೇಶದಲ್ಲಿ ಮೊಬೈಲ್ ಬಳಕೆಯಿಂದ ಹುಡುಕಾಟ ನಡೆಸುವ ಸಿಗ್ನಲ್‌ಗಳಿಗೆ ವ್ಯತ್ಯಯ ಆಗುವ ಸಾಧ್ಯತೆ ಇರುವುದರಿಂದ, ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಸಾರ್ವಜನಿಕ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.ಶಿರೂರು: ಕರ್ನಾಟಕದ ಕಾರ್ಯ ಶ್ಲಾಘನೀಯ: ಕೇರಳ ಶಾಸಕ
ಕನ್ನಡಪ್ರಭ ವಾರ್ತೆ ಅಂಕೋಲಾಶಿರೂರು ಗುಡ್ಡ ಕುಸಿತ ಪ್ರಕರಣವನ್ನು ಇಲ್ಲಿನ ಜಿಲ್ಲಾಡಳಿತ ಹಾಗೂ ಕರ್ನಾಟಕ ಸರ್ಕಾರವು ಉತ್ತಮವಾಗಿ ನಿಭಾಯಿಸಿದೆ ಎಂದು ಕೇರಳದ ಮಂಜೇಶ್ವರ ಶಾಸಕ ಅಶ್ರಫ್ ಶ್ಲಾಘಿಸಿದರು.ಶಿರೂರು ಘಟನೆಯಲ್ಲಿ ಕರ್ನಾಟಕದವರು, ಜಿಲ್ಲಾಡಳಿತ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವ ಉಹಾಪೋಹ ಹರಡುತ್ತಿರುವ ಹಿನ್ನೆಲೆ ಬುಧವಾರ ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದೇನೆ. ಇಲ್ಲಿನ ಜಿಲ್ಲಾಡಳಿತ ಉತ್ತಮವಾಗಿ ಕೆಲಸ ಮಾಡುತ್ತಿದೆ. ಸರ್ಕಾರ ಮತ್ತು ಕ್ಷೇತ್ರದ ಶಾಸಕರು ಶವವನ್ನು ಹೊರತೆಗೆಯಲು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದರು.ಘಟನೆಯಲ್ಲಿ ನಮ್ಮ ರಾಜ್ಯದ ಲಾರಿ ಚಾಲಕ ಅರ್ಜುನ್ ನಾಪತ್ತೆಯಾಗಿದ್ದಾನೆ. ಅವನು ಸಿಗಬೇಕು ಎಂದು ಪ್ರಾರ್ಥಿಸುತ್ತೇನೆ. ಕರ್ನಾಟಕದ ಸಂಪೂರ್ಣ ಸಹಕಾರ ದೊರೆತಿದೆ. ಈ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.