ಬಿಜೆಪಿ ಹಿರಿಯ ನಾಯಕರ ಪ್ರತ್ಯೇಕ ಸಭೆ : ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಂಡಾಯದ ಕಹಳೆ

| Published : Aug 13 2024, 01:01 AM IST / Updated: Aug 13 2024, 10:27 AM IST

BY vijayendraa
ಬಿಜೆಪಿ ಹಿರಿಯ ನಾಯಕರ ಪ್ರತ್ಯೇಕ ಸಭೆ : ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಂಡಾಯದ ಕಹಳೆ
Share this Article
  • FB
  • TW
  • Linkdin
  • Email

ಸಾರಾಂಶ

ಮತ್ತೊಂದು ಪಾದಯಾತ್ರೆ ನಡೆಸುವ ನೆಪದಲ್ಲಿ ಬಿಜೆಪಿಯ ಹಲವು ಹಿರಿಯ ನಾಯಕರು ಪ್ರತ್ಯೇಕ ಸಭೆ ನಡೆಸುವ ಮೂಲಕ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದಾರೆ.

 ಬೆಂಗಳೂರು :  ಮತ್ತೊಂದು ಪಾದಯಾತ್ರೆ ನಡೆಸುವ ನೆಪದಲ್ಲಿ ಬಿಜೆಪಿಯ ಹಲವು ಹಿರಿಯ ನಾಯಕರು ಪ್ರತ್ಯೇಕ ಸಭೆ ನಡೆಸುವ ಮೂಲಕ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದಾರೆ.

ಬೆಳಗಾವಿಯ ಹೊರವಲಯದ ರೆಸಾರ್ಟ್‌ವೊಂದರಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರ ಪಟ್ಟಿ ಗಮನಿಸಿದರೆ ಇದು ಇಲ್ಲಿಗೇ ನಿಲ್ಲುವ ಸಾಧ್ಯತೆ ಇಲ್ಲ. ದೆಹಲಿವರೆಗೂ ತಲುಪಿ ಪಕ್ಷದ ವರಿಷ್ಠರು ಶೀಘ್ರ ಮಧ್ಯೆ ಪ್ರವೇಶ ಮಾಡದೇ ಇದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವುದು ನಿಶ್ಚಿತ ಎನ್ನಲಾಗಿದೆ.ವಾಸ್ತವವಾಗಿ ಮತ್ತೊಂದು ಪಾದಯಾತ್ರೆ ನಡೆಸಬೇಕು ಎಂಬುದು ಸಭೆಯ ಮುಖ್ಯ ಉದ್ದೇಶವಾಗಿರಲಿಲ್ಲ. ಶತಾಯಗತಾಯ ವಿಜಯೇಂದ್ರ ಅವರಿಗೆ ಹೇಗೆ ಕಡಿವಾಣ ಹಾಕಬೇಕು ಎಂಬುದರ ಬಗ್ಗೆಯೇ ಹೆಚ್ಚು ಚರ್ಚೆ ನಡೆದಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ನಾಯಕರು ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಇದುವರೆಗೆ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೊಬ್ಬರೇ ಬಂಡಾಯದ ಬಾವುಟ ಹಾರಿಸಿಕೊಂಡು ಬಂದಿದ್ದರು. ತೀರಾ ಇತ್ತೀಚೆಗೆ ರಮೇಶ್ ಜಾರಕಿಹೊಳಿ ಭಿನ್ನ ಧ್ವನಿ ಎತ್ತಿದ್ದರು. 

ಆ ಬಳಿಕ ಭಾನುವಾರ ನಡೆದ ಸಭೆಯಲ್ಲಿ ಇವರಿಬ್ಬರಲ್ಲದೆ ಅರವಿಂದ್ ಲಿಂಬಾವಳಿ, ಜಿ.ಎಂ.ಸಿದ್ದೇಶ್ವರ್‌, ಅಣ್ಣಾ ಸಾಹೇಬ್ ಜೊಲ್ಲೆ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ ಮತ್ತಿತರರು ಸೇರಿದಂತೆ ಒಟ್ಟು ಹನ್ನೆರಡು ಮಂದಿ ಮುಖಂಡರು ಪಾಲ್ಗೊಂಡಿರುವುದು ಪಕ್ಷದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿದೆ.ಇಷ್ಟೇ ಅಲ್ಲದೆ, ಭಾನುವಾರದ ಈ ಸಭೆಗೆ ಪಕ್ಷದ ಇನ್ನೂ ಕೆಲವು ಹಿರಿಯ ನಾಯಕರು ಸಂಪರ್ಕಿಸಿ ತೆರೆಮರೆಯಲ್ಲಿ ತಮ್ಮ ಬೆಂಬಲ ಸೂಚಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ಪಾದಯಾತ್ರೆ ನಡೆಸಿದ ಬೆನ್ನಲ್ಲೇ ಬಿಜೆಪಿಯಲ್ಲಿ ಬಂಡಾಯ ತೀವ್ರಗೊಂಡಿದೆ. ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ತಮ್ಮನ್ನು ನಿರ್ಲಕ್ಷಿಸಿದ್ದು, ಪ್ರಮುಖ ನಿರ್ಧಾರಗಳನ್ನು ತಮ್ಮ ಆಪ್ತರ ಜತೆ ಚರ್ಚಿಸಿ ಕೈಗೊಳ್ಳುತ್ತಿದ್ದಾರೆ ಎಂದು ಭಿನ್ನರು ದೂರಿದ್ದಾರೆ.

ಏಕಾಏಕಿ ವಿಜಯೇಂದ್ರ ವಿರುದ್ಧ ಸ್ವಪಕ್ಷೀಯರು ದೊಡ್ಡ ಮಟ್ಟದಲ್ಲಿ ಒಗ್ಗಟ್ಟಾಗುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಯೋಸಹಜವಾಗಿ ‘ದುರ್ಬಲ’ರಾಗುತ್ತಿರುವುದೂ ಒಂದು ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತೀಚಿನ ಪೋಕ್ಸೋ ಪ್ರಕರಣದ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಯಡಿಯೂರಪ್ಪ ವಿರುದ್ಧ ಹರಿಹಾಯುತ್ತಿರುವುದರಿಂದ ಅದನ್ನೇ ಬಳಸಿಕೊಂಡು ಬಿಜೆಪಿಯಲ್ಲಿನ ವಿರೋಧಿಗಳೂ ಇದೇ ಸರಿಯಾದ ಸಮಯ ಎಂದುಕೊಂಡು ಒಗ್ಗಟ್ಟಾಗುತ್ತಿದ್ದಾರೆ ಎನ್ನಲಾಗಿದೆ.

 ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ಅವರನ್ನು ದೂರ ಇರಿಸಿ ಮುಂದಿನ ತಿಂಗಳು ಕೂಡಲ ಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ಉದ್ದೇಶಿಸಿರುವ ಈ ಭಿನ್ನ ನಾಯಕರ ಅಭಿಪ್ರಾಯಕ್ಕೆ ವರಿಷ್ಠರು ಅಷ್ಟು ಸುಲಭವಾಗಿ ಒಪ್ಪಿಗೆ ನೀಡುವುದು ಕಷ್ಟ. ರಾಜ್ಯಾಧ್ಯಕ್ಷರನ್ನು ಹೊರಗಿಟ್ಟು ಪಕ್ಷದ ಕಾರ್ಯಕ್ರಮ ನಡೆಸಲು ವರಿಷ್ಠರು ಯಾವುದೇ ಕಾರಣಕ್ಕೂ ಸಮ್ಮತಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ, ಇದೇ ತಿಂಗಳಲ್ಲಿ ಈಗ ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿರುವ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಪಕ್ಷದ ವರಿಷ್ಠರು ಸಮಾಲೋಚನೆ ನಡೆಸಬಹುದು. ಇಲ್ಲದಿದ್ದರೆ ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರ್‌ವಾಲ್ ಅವರು ಈ ಭಿನ್ನ ನಾಯಕರೊಂದಿಗೆ ಮಾತುಕತೆ ನಡೆಸಬಹುದು ಎಂದು ತಿಳಿದು ಬಂದಿದೆ.