ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ವರ್ಗಾವಣೆಗೆ ತಡೆ ತಂದಿದ್ದರೂ ನೂತನ ಮುಖ್ಯಾಧಿಕಾರಿ ಎಸ್.ಶರವಣ ಕರ್ತವ್ಯಕ್ಕೆ ಅವಕಾಶ ಕೊಡದೆ ಇರುವುದು ನ್ಯಾಯಾಂಗ ನಿಂದನೆಯಾಗುತ್ತಾ? ಎಂಬ ಚರ್ಚೆ ಹುಟ್ಟುಕೊಂಡಿದೆ.ಇಲ್ಲಿನ ಪುರಸಭೆಯು ಮುಖ್ಯಾಧಿಕಾರಿ ಕೆ.ಪಿ.ವಸಂತ ಕುಮಾರಿಯವರನ್ನು ಡಿ.೩ರಂದು ವರ್ಗಾವಣೆಗೊಳಿಸಿ, ಸದರಿ ಜಾಗಕ್ಕೆ ಎಸ್.ಶರವಣರನ್ನು ನೇಮಿಸಿ ಆದೇಶ ಹೊರಡಿಸಿತ್ತು. ಅದರಂತೆ ಡಿ.೪ ರಂದು ಎಸ್.ಶರವಣ ಅಧಿಕಾರ ವಹಿಸಿಕೊಂಡರು.
ಇದಾದ ಬಳಿಕ ವರ್ಗಾವಣೆಗೊಂಡ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಕೆಎಟಿ ಮೊರೆ ಹೋದ ಪರಿಣಾಮ ಡಿ.೧೦ ರಂದು ಕೆಎಟಿಯು ಮುಖ್ಯಾಧಿಕಾರಿಯಾಗಿ ವಸಂತಕುಮಾರಿಯವರಿಗೆ ಮುಂದುವರಿಯಲು ಆದೇಶ ನೀಡಿದೆ.ಆದೇಶ ಪ್ರತಿಯೊಂದಿಗೆ ತಡೆಗೊಂಡಿದ್ದ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಡಿ.೧೨ ರಂದು ಸಂಜೆ ಪುರಸಭೆಗೆ ಬಂದಾಗ ಮುಖ್ಯಾಧಿಕಾರಿ ಎಸ್.ಶರವಣ ಇರಲಿಲ್ಲ. ಮುಖ್ಯಾಧಿಕಾರಿ ಕಚೇರಿ ಬೀಗ ಕೂಡ ಹಾಕಿದ್ದ ಕಾರಣ ಕೆ.ಪಿ.ವಸಂತಕುಮಾರಿ ಕಂಪ್ಯೂಟರ್ ಆಪರೇಟರ್ ಕಚೇರಿಯಲ್ಲಿಯೇ ಮತ್ತೆ ವರದಿ ಮಾಡಿಕೊಂಡರು.
ಡೀಸಿ ಆದೇಶ ಬಂದಿಲ್ಲ:ಡಿ.೧೩ರ ಶುಕ್ರವಾರ ವರ್ಗಾವಣೆಗೆ ತಡೆ ತಂದ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಕಚೇರಿಗೆ ಬರುವ ವೇಳೆಗೆ ವರ್ಗಾವಣೆಯಾಗಿ ಅಧಿಕಾರ ಸ್ವೀಕರಿಸಿದ್ದ ಎಸ್.ಶರವಣ ಮುಖ್ಯಾಧಿಕಾರಿ ಕಚೇರಿಯಲ್ಲಿ ಕುರ್ಚಿ ಹಿಡಿದು ಕುಳಿತಿದ್ದರು.
ಕೆಎಟಿಯು ಮುಖ್ಯಾಧಿಕಾರಿಯಾಗಿ ಮುಂದುವರಿಯುವಂತೆ ನನಗೆ ಆದೇಶ ನೀಡಿದೆ ಎಂದು ವಸಂತಕುಮಾರಿಯವರು ಮುಖ್ಯಾಧಿಕಾರಿ ಎಸ್.ಶರವಣರಿಗೆ ಹೇಳಿದಾಗ ನನಗೆ ಜಿಲ್ಲಾಧಿಕಾರಿಗಳಿಂದ ಯಾವುದೇ ಆದೇಶ ಬಂದಿಲ್ಲ. ನಾನು ಕುರ್ಚಿ ಬಿಡಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.ರಾಜಕೀಯ ಒತ್ತಡ:
ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಬೆಂಬಲಿಸಿ ಪುರಸಭೆ ಅಧ್ಯಕ್ಷ ಕಿರಣ್ ಗೌಡ ಸೇರಿದಂತೆ ಕೆಲ ಸದಸ್ಯರು ವರ್ಗಾವಣೆಗೊಂಡಿದ್ದ ಕೆ.ಪಿ.ವಸಂತಕುಮಾರಿ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.ಇದಾದ ಬಳಿಕ ಪುರಸಭೆ ಮುಖ್ಯಾಧಿಕಾರಿಯಾಗಿ ಮುಂದುವರಿಯಲು ಅವಕಾಶ ಕೊಡಬಾರದು ಎಂದು ಕೆಲ ಕಾಂಗ್ರೆಸ್ ಪುರಸಭೆ ಸದಸ್ಯರು ಎಸ್.ಶರವಣರನ್ನು ಬೆಳ್ಳಂ ಬೆಳಗ್ಗೆಯೇ ಕಚೇರಿ ಕರೆಸಿ ಕುರ್ಚಿಯಲ್ಲಿ ಕೂರಿಸುವ ಮೂಲಕ ವರ್ಗಾವಣೆಗೆ ತಡೆ ತಂದ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿಗೆ ವಸಂತಕುಮಾರಿಗೆ ಟಾಂಗ್ ನೀಡುವಲ್ಲಿ ಶುಕ್ರವಾರ ಸಫಲರಾದರು.
ಕನ್ನಡಪ್ರಭಕ್ಕೆ ಸಿಕ್ಕ ಮಾಹಿತಿ ಪ್ರಕಾರ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಕೆಎಟಿ ಮೂಲಕ ತಡೆ ತಂದು ಮುಖ್ಯಾಧಿಕಾರಿಯಾಗಿ ಮುಂದುವರಿಯಲು ಆದೇಶ ತಂದಿದ್ದಾರೆ. ಕೆಎಟಿ ಆದೇಶಕ್ಕೆ ವಿರುದ್ಧವಾಗಿ ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ನಡೆದುಕೊಂಡಿದ್ದಾರೆ. ಇದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಹೆಸರೇಳಲಿಚ್ಛಿಸದ ನಗರಸಭೆ ಆಯುಕ್ತರೊಬ್ಬರು ಖಚಿತಪಡಿಸಿದ್ದಾರೆ.ಪುರಸಭೆ ಮುಖ್ಯಾಧಿಕಾರಿ ಕೂಡ ಗೆಜೆಟೆಡ್ ಅಧಿಕಾರಿ. ಸರ್ಕಾರ ವರ್ಗಾವಣೆ ಮಾಡಿದ ಬಳಿಕ ನೇರವಾಗಿ ಬಂದು ಪುರಸಭೆ ಅಧಿಕಾರ ಪಡೆದುಕೊಳ್ಳಬಹುದಾಗಿದೆ. ವರದಿ ಮಾಡಿಕೊಂಡ ಬಳಿಕ ಜಿಲ್ಲಾಧಿಕಾರಿಗಳ ಭೇಟಿ ಮಾಡಿ ಪರಿಚಯ ಮಾಡಿಕೊಳ್ಳುವುದು ವಾಡಿಕೆ ಎಂದರು.
ಗುಂಡ್ಲುಪೇಟೆ ಪುರಸಭೆ ವಿಚಾರದಲ್ಲಿ ವರ್ಗಾವಣೆಗೊಂಡಿದ್ದ ಪುರಸಭೆ ಮುಖ್ಯಾಧಿಕಾರಿ ಮುಂದುವರಿಯಲು ಆದೇಶವಿರುವ ಕಾರಣ ಜಿಲ್ಲಾಧಿಕಾರಿಗಳ ಬಳಿಗೆ ಹೋಗಿ ಬಂದು ವರದಿ ಮಾಡಿಕೊಳ್ಳಬೇಕು ಎಂಬ ನಿಯಮವಿಲ್ಲ ಎಂದರು.ಕೆಎಟಿಯಿಂದ ತಡೆ ತಂದು ಆದೇಶ ತೋರಿಸಿದ ತಕ್ಷಣ ಮುಖ್ಯಾಧಿಕಾರಿ ಎಸ್.ಶರವಣ ಜಾಗ ಬಿಟ್ಟು ಕೊಡಬೇಕಿತ್ತು. ಒಂದು ವೇಳೆ ಕಚೇರಿ ಸಹಿ ಹಾಕಿದ್ದರೂ ನ್ಯಾಯಾಂಗ ನಿಂದನೆ ಆಗುತ್ತದೆ ಎಂದರು.