ಸಾರಾಂಶ
ಮಾಜಿ ಸಂಸದ ಸಂಗಣ್ಣ ಕರಡಿ, ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೋ, ಇಲ್ಲವೋ ಎಂದು ಈಗಲೇ ಹೇಳಲು ಆಗದು. ಚುನಾವಣೆ ಘೋಷಣೆ ಆಗಲಿ ಎಂದು ಮುಗುಮ್ಮಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಅಲರ್ಟ್ ಆದ ಇಕ್ಬಾಲ್ ಅನ್ಸಾರಿ, ಕಾರ್ಯಕರ್ತರು, ಅಭಿಮಾನಿಗಳಿಗೆ ವ್ಯಾಟ್ಸ್‌ಆ್ಯಪ್ ಆಡಿಯೋ ಸಂದೇಶ ಕಳಿಸಿ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.
ಗಂಗಾವತಿ:
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಜನಾರ್ದನ ರೆಡ್ಡಿ ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಈ ಶಿಕ್ಷೆಗೆ ತಡೆಯಾಜ್ಞೆ ತರಲು ಒಂದೆಡೆ ರೆಡ್ಡಿ ವಕೀಲರು ಕಸರತ್ತು ನಡೆಸುತ್ತಿದ್ದರೆ, ಇತ್ತ ಗಂಗಾವತಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ.ಶಾಸಕ ಸ್ಥಾನದಿಂದ ಅನರ್ಹರಾಗಿರುವ ರೆಡ್ಡಿ ಅವರು ತಿಂಗಳೊಳಗೆ ತಡೆಯಾಜ್ಞೆ ತಂದರೆ ಅವರ ಶಾಸಕ ಸ್ಥಾನ ಮುಂದುವರಿಯಲಿದೆ. ಇಲ್ಲದಿದ್ದರೆ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಲು ಕನಿಷ್ಠ ನಾಲ್ಕೈದು ತಿಂಗಳಾದರೂ ಬೇಕು. ಇವೆಲ್ಲದರ ನಡುವೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು ಉಪಚುನಾವಣೆ ಸಿದ್ಧತೆಯಲ್ಲಿ ತೊಡಗಿವೆ.
ಕಾಂಗ್ರೆಸ್ಸಿನಲ್ಲಿ ಪೈಪೋಟಿ:ಮಾಜಿ ಸಂಸದ ಸಂಗಣ್ಣ ಕರಡಿ, ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೋ, ಇಲ್ಲವೋ ಎಂದು ಈಗಲೇ ಹೇಳಲು ಆಗದು. ಚುನಾವಣೆ ಘೋಷಣೆ ಆಗಲಿ ಎಂದು ಮುಗುಮ್ಮಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಅಲರ್ಟ್ ಆದ ಇಕ್ಬಾಲ್ ಅನ್ಸಾರಿ, ಕಾರ್ಯಕರ್ತರು, ಅಭಿಮಾನಿಗಳಿಗೆ ವ್ಯಾಟ್ಸ್‌ಆ್ಯಪ್ ಆಡಿಯೋ ಸಂದೇಶ ಕಳಿಸಿ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ನೀವು ಚುನಾವಣೆಗೆ ಸಿದ್ಧರಾಗಿ. ಈಗಿನಿಂದಲೇ ಮನೆ-ಮನೆಗೆ ತೆರಳಿ ಸರ್ಕಾರದ ಸಾಧನೆ ತಿಳಿಸಿ ಎಂದು ಹೇಳಿದ್ದಾರೆ.
ತಮ್ಮ ಕುಟುಂಬಕ್ಕೆ ಟಿಕೆಟ್ ಪಡೆಯಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದ ಹಿಟ್ನಾಳ್ ಕುಟುಂಬಕ್ಕೆ ಅನ್ಸಾರಿ ನಡೆಯಿಂದ ಹಿನ್ನಡೆಯಾಗಿದೆ. ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ರಾಜವಂಶಸ್ಥೆ ಲಲಿತರಾಣಿ ಶ್ರೀರಂಗದೇವರಾಯಲು, ಮಾಜಿ ಸಚಿವ ಮಲ್ಲಿಕಾರ್ಜನ ನಾಗಪ್ಪ ಸೇರಿದಂತೆ ಹಲವರು ಸ್ಪರ್ಧೆಗೆ ಉತ್ಸುಕರಾಗಿದ್ದಾರೆ.ಬಿಜೆಪಿಯಲ್ಲೂ ಸ್ಪರ್ಧೆ:
ಇತ್ತೀಚೆಗೆ ನಡೆದ ಜರ್ನಾದನ ರೆಡ್ಡಿ ಅಭಿಮಾನಿಗಳ ಸಭೆಯಲ್ಲಿ ವೀಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದ್ದ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ, ಯಾವುದೇ ಕಾರಣಕ್ಕೂ ಗಂಗಾವತಿ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವುದಿಲ್ಲ. ರೆಡ್ಡಿ ಅವರೇ ಶಾಸಕರಾಗಿ ಮುಂದುವರಿಯುತ್ತಾರೆಂದು ಹೇಳಿದ್ದರು. ಇದರ ನಡುವೆ ಮಾಜಿ ಶಾಸಕ ಪರಣ್ಣ ಮುನುವಳ್ಳಿ, ನೆಕ್ಕಂಟಿ ಸೂರಿಬಾಬು, ಸ್ಪರ್ಧಿಸಲು ತೆರೆಮರೆ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಪೈಪೋಟಿ ನೀಡಲು ತೆರೆಮರೆಯಲ್ಲಿ ಜೆಡಿಎಸ್ ಸಹ ತಂತ್ರ ರೂಪಿಸುತ್ತಿರುವುದು ಬಹಿರಂಗವಾಗಿ ಉಳಿದಿಲ್ಲ.