ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಗರದಲ್ಲಿ ಅ.18 ಮತ್ತು 19 ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.ಉದ್ಯೋಗ ಮೇಳ ನಡೆಯುವ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಹಾಗೂ ನಿರುದ್ಯೋಗಿಗಳ ಸಂದರ್ಶನ ನಡೆಸಲು ತೆರೆದಿರುವ ಕೌಂಟರ್‌ಗಳನ್ನು ಬುಧವಾರ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷಾಂತರ ಮಂದಿ ಯುವ ಮತದಾರರು ಮತ ನೀಡಿದ್ದಾರೆ. ಮಂಡ್ಯ ಜಿಲ್ಲೆ ಜೊತೆಗೆ ಹೊರ ಜಿಲ್ಲೆಯ ನಿರುದ್ಯೋಗಿಗಳಿಗೂ ಉದ್ಯೋಗ ಕಲ್ಪಿಸಲು ಎರಡು ದಿನಗಳ ಕಾಲ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದರು.ಕುಮಾರಸ್ವಾಮಿ ಅವರು ಚುನಾವಣೆಗೆ ಸ್ಪರ್ಧೆ ಮಾಡಿ ಕ್ಷೇತ್ರ ಪ್ರವಾಸ ಮಾಡುವಾಗ ನಿರುದ್ಯೋಗ ಸಮಸ್ಯೆ ಅವರ ಗಮನಕ್ಕೆ ಬಂದಿತ್ತು. ಅದರಲ್ಲೂ ಕೇಂದ್ರ ಕೈಗಾರಿಕಾ ಮಂತ್ರಿಯಾದ ಮೇಲೂ ಸಹ ಯುವಕರ ನಿರುದ್ಯೋಗ ಸಮಸ್ಯೆ ಬಗ್ಗೆ ತೀವ್ರ ಚರ್ಚೆಯಾಯಿತು. ಇದನ್ನು ಹೋಗಲಾಡಿಸುವ ಸಲುವಾಗಿ ಸ್ವತಃ ಕುಮಾರಸ್ವಾಮಿ ಅವರು ಚಿಂತನೆ ನಡೆಸಿ ಮಂಡ್ಯದಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದಾರೆ ಎಂದರು.
ಮೇಳದಲ್ಲಿ ದೇಶದ ಪ್ರತಿಷ್ಠಿತ ಕಾರ್ಪೋರೇಟ್ ಕಂಪನಿಗಳು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ನೂರಾರು ಕಂಪನಿಗಳು ಭಾಗವಹಿಸಲಿವೆ. ಇದಕ್ಕಾಗಿ 200ಕ್ಕೂ ಹೆಚ್ಚು ಕೌಂಟರ್‌ಗಳಲ್ಲಿ ನಿರುದ್ಯೋಗಿ ಯುವಕರ ಸಂದರ್ಶನ ನಡೆಯಲಿದೆ. ಈಗಾಗಲೇ ಎರಡು ಸಾವಿರಕ್ಕೂ ಅಧಿಕ ಮಂದಿ ನೋಂದಾಯಿತರಾಗಿದ್ದು, ಇನ್ನೂ ಒಂದು ಸಾವಿರ ಮಂದಿ ನೋಂದಾಯಿತರಾಗುವ ನಿರೀಕ್ಷೆ ಇದೆ ಎಂದರು.ಮಂಡ್ಯ ಜಿಲ್ಲೆಯ ಪ್ರತಿ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಬೇಕೆಂಬುದು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಚಿಂತನೆಯಾಗಿದೆ. ಈ ನಿಟ್ಟಿನಲ್ಲಿ ಉದ್ಯೋಗ ಮೇಳ ನಡೆಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ವಿಶೇಷವಾಗಿ ಯುವ ಸಮೂಹದ ಮೇಲೆ ಪ್ರೀತಿ, ಗೌರವ ಇಟ್ಟುಕೊಂಡು ಬಂದಿದ್ದಾರೆ. ಹೀಗಾಗಿ ರಾಷ್ಟ್ರದ ದೊಡ್ಡದೊಡ್ಡ ಕಂಪನಿಗಳೊಂದಿಗೆ ಸಂಪರ್ಕ ಸಾಧಿಸಿದ್ದು ಮೇಳದಲ್ಲಿ 150 ಕಂಪನಿಗಳು ಭಾಗವಹಿಸಲಿವೆ ಎಂದರು.ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಪ್ರಭಾವಿ ಬೃಹತ್ ಕೈಗಾರಿಕಾ ಸಚಿವರಾಗಿರುವ ಎಚ್ಡಿಕೆ ಅವರೇ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಅರ್ಹತೆಗೆ ತಕ್ಕಂತೆ ಉದ್ಯೋಗ ಕಲ್ಪಿಸಲು ಮುಂದಾಗಿದ್ದಾರೆ. ಎಲ್ಲಾ ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ. ಉದ್ಯೋಗಾಕಾಂಕ್ಷಿಗಳಿಂದ ನೋಂದಣಿ ಅಗತ್ಯವಾಗಿದೆ. ಅಗತ್ಯ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ರಾಜ್ಯ ಮಟ್ಟದ ಅಧಿಕಾರಿಗಳ ಜೊತೆಗೂಡಿ ಮಂಡ್ಯ ಜಿಲ್ಲೆ ಮಾತ್ರವಲ್ಲದೇ, ಅಕ್ಕಪಕ್ಕದ ಜಿಲ್ಲೆಯ ಎಸ್ಸೆಸ್ಸೆಲ್ಸಿ, ಐಟಿಎ, ಪದವಿದರರು ಉದ್ಯೋಗ ಮೇಳದಲ್ಲಿ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗಿಯಾಗಬೇಕು ಎಂದು ಕೋರಿದರು.ಮೇಳದಲ್ಲಿ ಭಾಗವಹಿಸಿದ ಬಹುತೇಕರಿಗೆ ಉದ್ಯೋಗ ದೊರೆಯುವ ವಿಶ್ವಾಸವಿದ್ದು, ಹಾಗೊಂದು ವೇಳೆ ಉದ್ಯೋಗ ಸಿಗದವರಿಗೂ ದಾಖಲಾತಿ ಪಡೆದುಕೊಂಡು ನಂತರದ ದಿನಗಳಲ್ಲಿ ಉದ್ಯೋಗ ಕಲ್ಪಿಸಲು ಕಂಪನಿ ಮೂಲಕ ನಾವು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮೇಳದಲ್ಲಿ ಭಾಗವಹಿಸುವ ಎಲ್ಲರಿಗೂ ಊಟ, ನೀರು ಸೇರಿದಂತೆ ಅಗತ್ಯ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಈ ವೇಳೆ ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್‌ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಮುಖಂಡ ಬೇಲೂರು ಸೋಮಶೇಖರ್, ನವೀನ್ ಇತರರಿದ್ದರು.