ರಸ್ತೆ ಗುಂಡಿಗಳಿಗೆ ದೀಪ ಹಚ್ಚಿ ದೀಪಾವಳಿ ಆಚರಿಸಿ ವಿನೂತನ ಪ್ರತಿಭಟನೆ

| Published : Oct 24 2025, 01:00 AM IST

ರಸ್ತೆ ಗುಂಡಿಗಳಿಗೆ ದೀಪ ಹಚ್ಚಿ ದೀಪಾವಳಿ ಆಚರಿಸಿ ವಿನೂತನ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದಿಂದ ಹಿಡಿದು ಚನ್ನರಾಯಪಟ್ಟಣ ಗಡಿಯವರೆಗಿನ ರಾಜ್ಯ ಹೆದ್ದಾರಿಯ ಗುಂಡಿಗಳನ್ನು ಸ್ವಯಂ ಶ್ರಮದಾನದಿಂದ ಮಾತೃಭೂಮಿ ವೃದ್ಧಾಶ್ರಮದ ಸ್ವಯಂ ಸೇವಕರ ತಂಡ ಮುಚ್ಚುವ ಕೆಲಸ ಮಾಡುತ್ತಿದ್ದರೂ ಸಂಬಂಧಿಸಿದ ಇಲಾಖೆ ಸರ್ಕಾರಿ ಅಧಿಕಾರಿಗಳು ಮಾತ್ರ ರಸ್ತೆ ಗುಂಡಿಗಳನ್ನು ಮುಚ್ಚುವತ್ತ ಯಾವುದೇ ಕ್ರಮ ವಹಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಸ್ತೆ ಗುಂಡಿಗಳಿಗೆ ದೀಪ ಹಚ್ಚಿ ದೀಪಾವಳಿ ಆಚರಿಸುವ ಮೂಲಕ ಸಾಮಾಜಿಕ ಹೋರಾಟಗಾರ ಮಾತೃಭೂಮಿ ವೃದ್ಧಾಶ್ರಮದ ಸಂಸ್ಥಾಪಕ ಜೈಹಿಂದ್ ನಾಗಣ್ಣ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು.ಪಟ್ಟಣದ ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯ ಶ್ರೀರಾಮ ಪೆಟ್ರೋಲ್ ಬಂಕ್ ಬಳಿಯ ಮುಖ್ಯ ರಸ್ತೆ ಸೇರಿದಂತೆ ಹಲವೆಡೆ ರಸ್ತೆಗಳು ಗುಂಡಿಬಿದ್ದು ವರ್ಷಗಳೇ ಕಳೆದಿದ್ದರೂ ಸರ್ಕಾರ, ಪುರಸಭೆಯಾಗಲೀ ಅಥವಾ ಲೋಕೋಪಯೋಗಿ ಇಲಾಖೆಯಾಗಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಗೋಜಿಗೆ ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಆರ್.ಪೇಟೆ ಪಟ್ಟಣದಿಂದ ಹಿಡಿದು ಚನ್ನರಾಯಪಟ್ಟಣ ಗಡಿಯವರೆಗಿನ ರಾಜ್ಯ ಹೆದ್ದಾರಿಯ ಗುಂಡಿಗಳನ್ನು ಸ್ವಯಂ ಶ್ರಮದಾನದಿಂದ ಮಾತೃಭೂಮಿ ವೃದ್ಧಾಶ್ರಮದ ಸ್ವಯಂ ಸೇವಕರ ತಂಡ ಮುಚ್ಚುವ ಕೆಲಸ ಮಾಡುತ್ತಿದ್ದರೂ ಸಂಬಂಧಿಸಿದ ಇಲಾಖೆ ಸರ್ಕಾರಿ ಅಧಿಕಾರಿಗಳು ಮಾತ್ರ ರಸ್ತೆ ಗುಂಡಿಗಳನ್ನು ಮುಚ್ಚುವತ್ತ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಕಿಡಿಕಾರಿದರು.

ಪಟ್ಟಣದ ಶ್ರೀರಾಮ ಪೆಟ್ರೋಲ್ ಬಂಕ್ ಬಳಿ ಒಳಚರಂಡಿ ಮ್ಯಾನ್ ವೋಲ್ ಉಕ್ಕಿ ಹರಿಯುತ್ತಿದ್ದು ಶೌಚದ ನೀರು ರಸ್ತೆ ಗುಂಡಿಯ ಮೂಲಕ ಹರಿದು ಹೋಗುತ್ತಿದೆ. ಇದರಿಂದ ಮುಖ್ಯ ರಸ್ತೆಯಲ್ಲಿ ಸಾಗುವ ಪಾದಚಾರಿಗಳು ಮತ್ತು ವಾಹನ ಚಾಲಕರಿಗೆ ಮಲೀನ ನೀರಿನ ಸಿಂಚನವಾಗುತ್ತಿದೆ ದೂರಿದರು.

ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಒಮ್ಮೆ ಅಧಿಕಾರಿಗಳ ತಂಡವನ್ನೇ ಸ್ಥಳಕ್ಕೆ ಕರೆದು ತಂದು ರಸ್ತೆ ಗುಂಡಿಯ ಸಮಸ್ಯೆ ಮತ್ತು ಮ್ಯಾನ್ ವೋಲ್ ಉಕ್ಕಿ ಹರಿಯುತ್ತಿರುವುದನ್ನು ಸರಿಪಡಿಸುವಂತೆ ಸೂಚಿಸಿದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ರಸ್ತೆಗುಂಡಿಯನ್ನು ವೈಜ್ಞಾನಿಕವಾಗಿ ಮುಚ್ಚದ ಪರಿಣಾಮ ಮತ್ತು ಮ್ಯಾನ್ ವೋಲ್ ಸಮಸ್ಯೆ ಪರಿಹಾರವಾಗದಿರುವ ಕಾರಣ ಎಷ್ಟುಸಲ ಮುಚ್ಚಿದರೂ ರಸ್ತೆ ಗುಂಡಿ ಮತ್ತೆ ಮತ್ತೆ ತೆರೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಗ್ರಾಮಭಾರತಿ ವೃತ್ತದಿಂದ ಹೇಮಗಿರಿ ರಸ್ತೆಯ ಕಿರಣ್ ಪೆಟ್ರೋಲ್ ಬಂಕ್ ವರೆಗೂ ರಸ್ತೆಗಳು ಗುಂಡಿ ಬಿದ್ದು ಸಾಕಷ್ಟು ಅಪಘಾತಗಳು ಆಗುತ್ತಿವೆ. ಹೊಸದಾಗಿ ರಸ್ತೆ ನಿರ್ಮಿಸುವುದಿರಲಿ ಕನಿಷ್ಠ ರಸ್ತೆಗುಂಡಿಗಳನ್ನಾದರೂ ಮುಚ್ಚಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾರದ ಮಟ್ಟಕ್ಕೆ ರಾಜ್ಯ ಸರ್ಕಾರ ಬಂದಿದೆ ಆರೋಪಿಸಿದರು.

ಮೈಸೂರು ಚನ್ನರಾಯಪಟ್ಟಣ ರಸ್ತೆಯ ಅನೇಕ ಗುಂಡಿಗಳು ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿವೆ. ಹಲವು ಬಾರಿ ಸ್ಥಳೀಯರು ಹಾಗೂ ಸಾಮಾಜಿಕ ಸಂಘಟನೆಗಳು ಮನವಿ ಮಾಡಿದರೂ ರಸ್ತೆ ರಿಪೇರಿ ಕಾಮಗಾರಿಯನ್ನು ಸರ್ಕಾರ ಕೈಗೊಂಡಿಲ್ಲ. ಗುಂಡಿ ಮುಚ್ಚುವ ಮೂಲಕ ರಾಜ್ಯ ಸರ್ಕಾರ ಮನೆಗಳ ದೀಪ ಆರದಂತೆ ನೋಡಿಕೊಳ್ಳಬೇಕು ಎನ್ನುವ ಸದಾಶಯದ ಬೇಡಿಕೆಯ ಮೂಲಕ ಗುಂಡಿಬಿದ್ದ ರಸ್ತೆಯಲ್ಲಿ ದೀಪ ಹಚ್ಚಿ ದೀಪಾವಳಿ ಆಚರಿಸಿ ಸರ್ಕಾರ ಎಚ್ಚರಿಸುವ ಕೆಲಸ ಮಾಡಿದ್ದೇವೆ ಎಂದು ಜೈಹಿಂದ್ ನಾಗಣ್ಣ ತಿಳಿಸಿದರು.