ಸಾರಾಂಶ
ಗೋಧೂಳಿ ಸಮಯದಲ್ಲಿ ನಡೆಯುವ ರಥೋತ್ಸವದಲ್ಲಿ ಶಿಶುಗಳನ್ನು ಕೆಳಕ್ಕೆ ಬಿಡುವ ಮೂಲಕ ಆಚರಣೆ ನಡೆಯಿತು. ಮಕ್ಕಳಾಗದ ಮಹಿಳೆಯರು ಲಕ್ಷ್ಮೀದೇವಿಗೆ ಹರಿಕೆ ಹೊತ್ತು ಬೇಡಿಕೆ ಈಡೇರಿದ ಬಳಿಕ ಜಾತ್ರಾ ಸಂದರ್ಭದಲ್ಲಿ ಈ ವಿಶಿಷ್ಟ ಹರಿಕೆ ತೀರಿಸುತ್ತಾರೆ.
ಕನಕಗಿರಿ:
ತಾಲೂಕಿನ ಘಡಿವಡಕಿ ಗ್ರಾಮದ ಆರಾಧ್ಯದೇವಿ ಮಹಾಲಕ್ಷ್ಮೀದೇವಿ ಜಾತ್ರೆ ನಿಮಿತ್ತ ಭಾನುವಾರ ಪುರುಷರ ಹಾಗೂ ಮಹಿಳೆಯರ ಪ್ರತ್ಯೇಕ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಈ ವೇಳೆ ರಥದ ಮೇಲಿಂದ ಮಕ್ಕಳ ಎಸೆಯಲಾಯಿತು.ಬೆಳಗ್ಗೆ ದೇವಿಗೆ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಅಲಂಕಾರ, ನೈವೈದ್ಯ ಸೇರಿದಂತೆ ನಾನಾ ಪೂಜಾ ಕೈಂಕರ್ಯ ಜರುಗಿದವು. ಸಂಜೆ ಗೋಧೂಳಿ ಸಮಯದಲ್ಲಿ ನಡೆಯುವ ರಥೋತ್ಸವದಲ್ಲಿ ಶಿಶುಗಳನ್ನು ಕೆಳಕ್ಕೆ ಬಿಡುವ ಮೂಲಕ ಆಚರಣೆ ನಡೆಯಿತು. ಮಕ್ಕಳಾಗದ ಮಹಿಳೆಯರು ಲಕ್ಷ್ಮೀದೇವಿಗೆ ಹರಿಕೆ ಹೊತ್ತು ಬೇಡಿಕೆ ಈಡೇರಿದ ಬಳಿಕ ಜಾತ್ರಾ ಸಂದರ್ಭದಲ್ಲಿ ಈ ವಿಶಿಷ್ಟ ಹರಿಕೆ ತೀರಿಸುತ್ತಾರೆ.
ರಥೋತ್ಸವದ ದಿನದಂದು ದೇವಿಯ ದರ್ಶನ ಮಾಡಿಸಿ ಮಗುವನ್ನು ರಥದ ಮೇಲಿಂದ ತಾಯಂದಿರ ಉಡಿಯಲ್ಲಿ ಎಸೆಯುವ ಪದ್ಧತಿ ಹಿಂದಿನಿಂದಲೂ ನಡೆಯುತ್ತಿದೆ. ಮೊದಲ ಬಾರಿಗೆ ಜಾತ್ರೆಗೆ ಬಂದ ಭಕ್ತರಿಗೆ ಇಲ್ಲಿನ ಸಂಪ್ರದಾಯಗಳು ನಿಬ್ಬೆರಾಗಾಗುವಂತೆ ಮಾಡಿದವು. ಇನ್ನೊಂದೆಡೆ ರಥೋತ್ಸವ ಆರಂಭವಾಗುವ ಮುನ್ನ ರಥಬೀದಿಯಲ್ಲಿ ಚಿಕ್ಕಮಕ್ಕಳಿಂದ ಉರುಳು ಸೇವೆ ನಡೆಯಿತು.ವಿಭಿನ್ನ ಆಚರಣೆಗೆ ಹೆಸರಾಗಿರುವ ಘಡಿವಡಕಿ ಜಾತ್ರೆಗೆ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಭಕ್ತರು ಆಗಮಿಸುತ್ತಾರೆ. ಸುತ್ತಮುತ್ತಲಿನ ನಾನಾ ಗ್ರಾಮಗಳ ಸಾವಿರಾರು ಭಕ್ತರು ತೆರನ್ನೇಳೆದು ಸಂಭ್ರಮಿಸಿದರು. ರಥಬೀದಿಯುದ್ದಕ್ಕೂ ಜಮಾಯಿಸಿದ್ದ ಭಕ್ತರು ಉತ್ತತ್ತಿ, ಹೂಹಣ್ಣು ಅರ್ಪಿಸಿ ಭಕ್ತಿ, ಭಾವ ಮೆರೆವದರು.