ಮಂಡ್ಯ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳಿಗೆ ಜಿಲ್ಲಾ ಪಂಚಾಯ್ತಿಯಲ್ಲಿ ೧೦ ಕ್ಷೇತ್ರಗಳು ಮತ್ತು ತಾಲೂಕು ಪಂಚಾಯ್ತಿಯಲ್ಲಿ ೩೧ ಕ್ಷೇತ್ರಗಳಲ್ಲಿ ಮೀಸಲಾತಿ ನಿಗದಿಯಾಗಿದ್ದು, ಪ್ರಜ್ಞಾವಂತರು, ಕ್ರಿಯಾಶೀಲರು, ಯುವಕರು ಚುನಾವಣಾ ರಾಜಕಾರಣವನ್ನು ಪ್ರವೇಶಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪರಿಶಿಷ್ಟರ ಮಾದರಿಯಲ್ಲೇ ಹಿಂದುಳಿದ ವರ್ಗಗಳು ಮೀಸಲಾತಿಯನ್ನು ಪಡೆದುಕೊಳ್ಳುತ್ತಿದ್ದು, ಮೀಸಲಾತಿಗೆ ಧಕ್ಕೆಯಾದ ಸಂದರ್ಭದಲ್ಲಿ ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಸಂದೇಶ್ ಹೇಳಿದರು.ತಾಲೂಕಿನ ಬೆಳಗೊಳ ಗ್ರಾಮದ ಗಾಣಿಗ ಸಮುದಾಯ ಭವನದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ೧೧೧ನೇ ಜನ್ಮದಿನಾಚರಣೆ ಮತ್ತು ಹಿಂದುಳಿದ ವರ್ಗಗಳ ರಾಜಕೀಯ ನಾಯಕತ್ವ ಅಭಿಯಾನದಲ್ಲಿ ಮಾತನಾಡಿದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳು ಮೀಸಲಾತಿಯನ್ನು ಸಮರ್ಪಕವಾಗಿ ಬಳಸಿಕೊಂಡು ರಾಜಕೀಯವಾಗಿ ನಿರ್ಣಾಯಕವಾದ ಶಕ್ತಿಯಾಗಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಸಂದೇಶ್ ಸಲಹೆ ನೀಡಿದರು.ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳಿಗೆ ಜಿಲ್ಲಾ ಪಂಚಾಯ್ತಿಯಲ್ಲಿ ೧೦ ಕ್ಷೇತ್ರಗಳು ಮತ್ತು ತಾಲೂಕು ಪಂಚಾಯ್ತಿಯಲ್ಲಿ ೩೧ ಕ್ಷೇತ್ರಗಳಲ್ಲಿ ಮೀಸಲಾತಿ ನಿಗದಿಯಾಗಿದ್ದು, ಪ್ರಜ್ಞಾವಂತರು, ಕ್ರಿಯಾಶೀಲರು, ಯುವಕರು ಚುನಾವಣಾ ರಾಜಕಾರಣವನ್ನು ಪ್ರವೇಶಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಬೇಕು ಎಂದು ಆಶಿಸಿದರು.
ಗಾಣಿಗ ಸಮುದಾಯದ ಮುಖಂಡ ಚನ್ನಕೇಶವ ಮಾತನಾಡಿ, ಡಿ.ದೇವರಾಜ ಅರಸು ಅವರು ಉಳುವವನಿಗೆ ಭೂಮಿ ನೀಡುವುದರ ಮೂಲಕ ಅಸಂಖ್ಯಾತ ಸಣ್ಣ ಹಿಡುವಳಿದಾರರ ಬದುಕಿಗೆ ಹಸಿರಾದರು. ಇವತ್ತಿಗೂ ಕೃಷಿಕರಿಗೆ ಇತರೆ ಹಿಂದುಳಿದ ಸಮುದಾಯಗಳು ಬೆಂಬಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಕೃಷಿಕರು ಮತ್ತು ಇತರೆ ಹಿಂದುಳಿದವರ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದರು.ಜಿಲ್ಲಾ ವಿಶ್ವಕರ್ಮ ಮಹಾಸಭಾದ ಗೌರವಾಧ್ಯಕ್ಷ ಕ್ಯಾತನಹಳ್ಳಿ ದೇವರಾಜು ಮಾತನಾಡಿ, ಹಿಂದುಳಿದ ಸಮಾಜಗಳಿಗೆ ಡಿ.ದೇವರಾಜ ಅರಸು ಅವರ ಕೊಡುಗೆ ಅಪಾರವಾದದ್ದು. ಹಿಂದಿನ ಹಿಂದುಳಿದ ಸಮಾಜಗಳು ಹಿಂಜರಿಕೆ ಮನೋಭಾವನೆಯನ್ನು ಬಿಟ್ಟು ಎಲ್ಲ ವರ್ಗದೊಡನೆ ಬೆರೆಯಬೇಕು. ಎದುರಾಗುವ ಸಮಸ್ಯೆಗಳನ್ನು ಒಗ್ಗಟ್ಟಿನಿಂದ ಎದುರಿಸಬೇಕು ಎಂದು ಧೈರ್ಯ ತುಂಬಿದರು.
ವಿವಿಧ ಹಿಂದುಳಿದ ಸಮುದಾಯದ ಮುಖಂಡರಾದ ಮಜ್ಜಿಗೆಪುರ ಶ್ರೀನಿವಾಸ್, ವೆಂಕಟೇಶ್, ಎಲ್.ಮಂಜುನಾಥ್, ಸಣ್ಣಶೆಟ್ಟಿ, ಬೆಳಗೊಳ ಸುರೇಶ್, ಪ್ರಕಾಶ್, ಪಾಲಹಳ್ಳಿ ಬೆಟ್ಟಪ್ಪ, ಹರಳಹಳ್ಳಿ ರಾಮಚಂದ್ರು, ಚಂದ್ರಶೇಖರ ಆರಾಧ್ಯ ಇತರರಿದ್ದರು.