ವಕ್ಫ್ ವಿವಾದ : ನೊಂದ ರೈತರಿಗೆ ನ್ಯಾಯ ಕೊಡಿಸಲು ಒಗ್ಗಟ್ಟಿನ ಹೋರಾಟ : ಮಾಜಿ ಸಂಸದ ಪ್ರತಾಪ್ ಸಿಂಹ

| Published : Nov 10 2024, 01:48 AM IST / Updated: Nov 10 2024, 12:50 PM IST

ವಕ್ಫ್ ವಿವಾದ : ನೊಂದ ರೈತರಿಗೆ ನ್ಯಾಯ ಕೊಡಿಸಲು ಒಗ್ಗಟ್ಟಿನ ಹೋರಾಟ : ಮಾಜಿ ಸಂಸದ ಪ್ರತಾಪ್ ಸಿಂಹ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ನೆಲದಲ್ಲಿ ಹಿಂದುಗಳಿಗೆ ಎದುರಾಗುತ್ತಿರುವ ವಿಷಮ ಪರಿಸ್ಥಿತಿಯ ಬಗ್ಗೆ ಮಾಜಿ ಸಂಸದ ಪ್ರತಾಪ್‌ಸಿಂಹ ವಿಷಾದ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

  ಪೊನ್ನಂಪೇಟೆ : ಜಾತಿ ವ್ಯವಸ್ಥೆಗಳಿಂದ ಹೊರಬಂದು ಹಿಂದುಗಳು ಎಂಬ ಒಗಟ್ಟಿನ ಐಕ್ಯತೆಯನ್ನು ಸಾರದಿದ್ದರೆ ನಾವು ಭಾರತದ ನೆಲವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹಿಂದೂ ನೆಲದಲ್ಲಿ ಹಿಂದುಗಳಿಗೆ ಎದುರಾಗುತ್ತಿರುವ ವಿಷಮ ಪರಿಸ್ಥಿತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಶನಿವಾರ ಪೊನ್ನಂಪೇಟೆ ಬಸ್ ನಿಲ್ದಾಣ ಆವರಣದಲ್ಲಿ ವಕ್ಫ್ ಬೋರ್ಡ್ ಪಹಣಿ ಬದಲಾಯಿಸಿ ರೈತರ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ನಡೆಯನ್ನು ಪ್ರಶ್ನಿಸಿ, ರಾಜ್ಯ ಸರ್ಕಾರದ ವಿರುದ್ಧ ತಾಲೂಕು ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ನಮ್ಮ ಆಸ್ತಿ ಬೇರೆಯವರ ಹೆಸರಿನಲ್ಲಿ ದಾಖಲಾಗುವಂತಹ ವಿಚಿತ್ರ ವ್ಯವಸ್ಥೆ ಎಲ್ಲರನ್ನು ತಲ್ಲಣಗೊಳಿಸುತ್ತಿದೆ. ಇಂತಹ ಅವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದ್ದು, ನೊಂದ ರೈತರಿಗೆ ನ್ಯಾಯ ಕೊಡಿಸಲು ಒಗ್ಗಟ್ಟಿನ ಹೋರಾಟ ನಡೆಸಬೇಕಾಗಿದೆ ಎಂದು ಕರೆ ನೀಡಿದರು.

ಮುಸ್ಲಿಮರ ಮತಗಳನ್ನು ಸೆಳೆಯುವ ಉದ್ದೇಶಕ್ಕೆ ಹೀಗೊಂದು ವ್ಯವಸ್ಥೆಯನ್ನು ಕಾಯ್ದಿರಿಸಲು ಸರ್ಕಾರ ಮುಂದಾಗಿರುವುದು ಅಕ್ಷಮ್ಯ ಅಪರಾಧವಾಗಿದೆ. ದೇವರಾಜ್ ಅರಸು ಅವರು ಉಳುವವನೇ ಭೂಮಿಯ ಒಡೆಯ ಎದ್ದು ಘೋಷಿಸಿದಾಗ ಆ ಕಾಯ್ದೆ ಮುಸ್ಲಿಮರ ವಕ್ಫ್‌ ಬೋರ್ಡ್ ಆಸ್ತಿಗಳಿಗೆ ಅನ್ವಯವಾಗಲಿಲ್ಲ ಎಂಬ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅರ್ಥವಾಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

ಸಾವಿರಾರು ವರ್ಷಗಳಷ್ಟು ಹಳೆಯ ದಾಖಲೆ ಇರುವ ಮಠ, ದೇವಾಲಯಗಳು, ರೈತರ ಜಮೀನುಗಳು, ಸ್ಮಾರಕಗಳು, ರಾತ್ರೋರಾತ್ರಿ ವಕ್ಫ್ ಆಸ್ತಿಯಾಗಿ ಸರ್ಕಾರದ ಸಹಕಾರವಿಲ್ಲದೆ ಬದಲಾಯಿಸಲು ಹೇಗೆ ಸಾಧ್ಯ. ಮುಖ್ಯಮಂತ್ರಿಗಳು ಮುಡಾ ಹಗರಣದಿಂದ ಎದುರಿಸುತ್ತಿರುವ ಮುಜುಗರವನ್ನು ತಪ್ಪಿಸಿಕೊಳ್ಳಲು ಈ ವ್ಯವಸ್ಥೆಯನ್ನು ಜಾರಿಗೆ ತರುವ ಪಾತ್ರವನ್ನು ನಿಭಾಯಿಸಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿದರು.

ವಕ್ಫ್ ಕಾಯ್ದೆಯಿಂದಾಗಿ ರೈತರಿಗೆ ಬದುಕಿನ ಪ್ರಶ್ನೆ ಎದುರಾಗಿದೆ. ಹಿಂದೂ ರಾಷ್ಟ್ರದಲ್ಲಿ ಹಿಂದುಗಳೇ ಅತಂತ್ರ ಸ್ಥಿತಿಯಲ್ಲಿ ಜೀವಿಸಬೇಕಾದ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ಈ ಬಗ್ಗೆ ರೈತ ಸಂಘಟನೆಗಳು, ಮಠಾಧೀಶರು, ಕನ್ನಡಪರ ಸಂಘಟನೆಗಳು ಧ್ವನಿ ಎತ್ತದೆ ಇರುವುದು ಬೇಸರದ ವಿಚಾರವಾಗಿದೆ ಎಂದು ವಿಷಾದಿಸಿದರು.

ಹಿಂದುಗಳು ಇದ್ದರಷ್ಟೇ ಖಾವಿ, ಮಠಗಳು, ಸ್ವಾಮಿಗಳು ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ ಎಂಬುದನ್ನು ಮರೆಯಬಾರದು. ರಾಮ ಜನ್ಮಭೂಮಿಗಾಗಿ ಪೇಜಾವರ ಸ್ವಾಮಿಗಳು ಬೀದಿಗಿಳಿದು ಹೋರಾಟ ಮಾಡಿದರು. ಅಂತದೇ ಹೋರಾಟವನ್ನು ಇಂದು ಮಠಾಧಿಪತಿಗಳು ಹೋರಾಟ ನಡೆಸಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಕೆ ಜಿ ಬೋಪ್ಪಯ್ಯ ಅವರು ಮಾತನಾಡಿ, ವಕ್ಫ್ ಭೂತ ಆವರಿಸಿಕೊಂಡು ಕರ್ನಾಟಕ ಎಂಬುದು ಪಾಕಿಸ್ತಾನದಲ್ಲಿರುವಂತೆ ಭಾಸವಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರೈತರು ಬೀದಿಗೆ ಬಂದು ಹೋರಾಟ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಈ ಸರ್ಕಾರ ಜನರನ್ನು ತಪ್ಪು ದಾರಿಗೆ ಎಳೆದು ಅಲ್ಪಸಂಖ್ಯಾತರನ್ನು ಎತ್ತಿ ಹಿಡಿದು ವೋಟ್ ಬ್ಯಾಂಕ್ ಮಾಡುವ ಕೆಲಸವನ್ನು ಮಾಡುತ್ತಿದೆ. ಉತ್ತರ ಕರ್ನಾಟಕ ಮತ್ತು ಬಿಜಾಪುರದಲ್ಲಿ ಊರಿಗೆ ಊರೇ ವಕ್ಫ್ ಆಡಳಿತಕ್ಕೆ ಸೇರಿರುವ ಉದಾಹರಣೆ ಇದೆ. ಆದ್ದರಿಂದ ಜನರು ಎಚ್ಚೆತ್ತು ಕೊಳ್ಳಬೇಕೆಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿದರು.

ಜಿಲ್ಲಾ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ನಾವೆಲ್ಲರೂ ಒಟ್ಟಾಗಿ ಒಗ್ಗಟ್ಟಾಗಿ ಶಾಂತಿಯ ರಾಜ್ಯವಾಗಿ ಆಡಳಿತ ನಡೆಸುತ್ತಿದ್ದೆವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉಚಿತ ಭಾಗ್ಯಗಳನ್ನು ನೀಡಿ ಇಂದಿನ ಪರಿಸ್ಥಿತಿಯಲ್ಲಿ ಉಚಿತ ಭಾಗ್ಯಗಳನ್ನು ನೀಡಲು ಹಣವಿಲ್ಲದೆ ಬಡ ಜನರ ಮೇಲೆ ಒತ್ತಡವನ್ನು ಹೇರುತ್ತಿದೆ. ಬಡ ಜನರು ಕೃಷಿ ಮಾಡುತ್ತಿದ್ದ ಭೂಮಿಯನ್ನು ವಕ್ಫ್ ಭೂಮಿಯೆಂದು ಘೋಷಿಸಿ ಜನರಿಂದ ಕಸಿದುಕೊಳ್ಳುತ್ತಿದೆ. ಬಡ ಜನರು ಯಾವುದೇ ಸಂವಿಧಾನದ ಅಡಿಯಲ್ಲಿ ನ್ಯಾಯವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

 ಕೇವಲ ವಕ್ಫ್ ಸಮಿತಿಯ ಮೊರೆ ಹೋಗುವಂತಾಗಿದೆ ಆದರೆ ಅಲ್ಲಿ ಬಡ ಜನರಿಗೆ ನ್ಯಾಯ ದೊರೆಯುವುದಿಲ್ಲ. ಇದು ಕೇವಲ ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಲದೆ ಕೊಡಗಿಗೂ ಆವರಿಸಿದೆ. ಆದ್ದರಿಂದ ಕೊಡಗಿನ ಜನತೆ ತಮ್ಮ ಜಾಗದ ಪಹಣಿ ಪತ್ರವನ್ನು ಪರಿಶೀಲಿಸಬೇಕಾಗಿದೆ. ಕೊಡಗಿನ ಯಾವುದೇ ಜಾಗಕ್ಕೆ ಕೈ ಹಾಕುವ ಸಾಹಸವನ್ನು ಮಾಡಿದರೆ ತೀವ್ರ ರೀತಿಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ, ಪೊನ್ನಂಪೇಟೆ ತಾಲೂಕು ತಹಸೀಲ್ದಾರ್ ಮೋಹನ್ ಕುಮಾರ್, ವಕ್ಫ್ ಬೋರ್ಡ್ ಆಸ್ತಿ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂದು ಹೋರಾಟವನ್ನು ಕೈಗೊಂಡು ಮನವಿಯನ್ನು ಸಲ್ಲಿಸಿದ್ದು, ಮಾನ್ಯ ಜಿಲ್ಲಾಧಿಕಾರಿಯವರ ಮುಖಾಂತರ ಈ ಮನವಿಯನ್ನು ರಾಜ್ಯಪಾಲರಿಗೆ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆಂದು ಭರವಸೆಯನ್ನು ನೀಡಿದರು.

ವಿರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ಸುವಿನ್ ಗಣಪತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್, ಜಿಲ್ಲಾ ಉಪಾಧ್ಯಕ್ಷರು ಗುಮ್ಮಟ್ಟೀರ ಕಿಲನ್ ಗಣಪತಿ, ಕುಂಞಂಗಡ ಅರುಣ್ ಭೀಮಯ್ಯ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮುದ್ದಿಯಡ ಮಂಜು ಗಣಪತಿ, ಕುಟ್ಟಂಡ ಅಜಿತ್ ಕರುಂಬಯ್ಯ, ನಿಕಟ ಪೂರ್ವ ಅಧ್ಯಕ್ಷರು ಪಳೆಯಂಡ ರಾಬಿನ್ ದೇವಯ್ಯ, ಪಕ್ಷದ ಪ್ರಮುಖರಾದ ಮಾಚಿಮಾಡ ರವೀಂದ್ರ, ವಾಟೆರೀರ ಬೋಪಣ್ಣ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಹಾಗೂ ಶಕ್ತಿ ಕೇಂದ್ರ ಪ್ರಮುಖರು, ಸಹ ಪ್ರಮುಖರು, ವಿವಿಧ ಮೋರ್ಚಾ ಹಾಗೂ ಪ್ರಕೋಷ್ಠದ ಅಧ್ಯಕ್ಷರು, ಪದಾಧಿಕಾರಿಗಳು, ಜನ ಪ್ರತಿನಿಧಿಗಳು, ಬೂತ್ ಮಟ್ಟದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರು ಭಾಗಿಯಾಗಿದ್ದರು.