ಸಾರಾಂಶ
ಸ್ವಚ್ಛತಾ ಕಾರ್ಯದಲ್ಲಿ ಮಾದರಿಯಾದ ಕಡೇಶ್ವಾಲ್ಯದ ಮಹಿಳೆಯರ ಮತ್ತೊಂದು ದಿಟ್ಟಹೆಜ್ಜೆ
ಮೌನೇಶ ವಿಶ್ವಕರ್ಮ
ಕನ್ನಡಪ್ರಭ ವಾರ್ತೆ ಬಂಟ್ವಾಳ ಸಾಧಿಸುವ ಮನಸ್ಸು ಮಾಡಿದರೆ ಮಹಿಳೆಗೂ ಯಾವುದೂ ಕಷ್ಟವಲ್ಲ ಎನ್ನುವುದನ್ನು ಕಡೇಶ್ವಾಲ್ಯ ಗ್ರಾಮ ಪಂಚಾಯಿತಿಯ ಮಾತೃ ಸಂಜೀವಿನೀ ಒಕ್ಕೂಟ ಮತ್ತೊಮ್ಮೆ ಸಾಬೀತು ಪಡಿಸಿದೆ. ಕಳೆದ ಮೂರು ವರ್ಷಗಳಿಂದ ಕಡೇಶ್ವಾಲ್ಯ ಗ್ರಾಮದ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿ ಘಟಕವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಈ ಸಂಜೀವಿನೀ ಒಕ್ಕೂಟ ನಿರ್ಮಿಸಿರುವ ತರಕಾರಿ ತೋಟ ಇದೀಗ ಎಂಥವರನ್ನೂ ಮೋಡಿ ಮಾಡುವಂತಿದೆ. ಘಟಕದ ಮುಂಭಾಗದ ಪಾಳುಬಿದ್ದಿದ್ದ ಅರ್ಧ ಎಕರೆ ಜಮೀನಿನಲ್ಲಿ ಈ ಒಕ್ಕೂಟದ ಮಹಿಳೆಯರು ಬೆಳೆಸಿರುವ ನೇಂದ್ರ ಜಾತಿಯ ಬಾಳೆಗಿಡಗಳು ಬೆಳೆಯುವ ಹಂತದಲ್ಲಿದ್ದರೆ, ತರಕಾರಿಗಳಾದ ಬದನೆ, ಬೆಂಡೆ, ಬಾಳೆ, ಬಸಳೆ, ಅರಿವೆ ಸೊಪ್ಪು, ಅಲಸಂಡೆ, ಸೌತೆಕಾಯಿ ಮತ್ತು ಸೋರೆಕಾಯಿಗಳು ಫಲ ನೀಡುತ್ತಿವೆ. ೨೦೨೧ರಿಂದ ಕಡೇಶ್ವಾಲ್ಯ ಗ್ರಾ.ಪಂ.ನ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ವಹಣೆ ಮಾಡುತ್ತಿರುವ ಮಾತೃಸಂಜೀವಿನೀ ಒಕ್ಕೂಟ ಗ್ರಾಮದ ೪೦೦ಕ್ಕೂ ಅಧಿಕ ಮನೆಗಳ ಹಸಿಕಸ ಹಾಗೂ ಒಣಕಸಗಳನ್ನು ಸಂಗ್ರಹಿಸುತ್ತಿದೆ. ಗ್ರಾಪಂ ನೀಡಿದ ತ್ಯಾಜ್ಯವಿಲೇವಾರಿ ವಾಹನಕ್ಕೆ ಒಕ್ಕೂಟದ ಮಹಿಳಾ ಸದಸ್ಯೆಯರನ್ನೇ ಚಾಲಕರನ್ನಾಗಿ ನೇಮಿಸಿದ್ದು, ಪಂಚಾಯಿತಿ ನೀಡುವ ನಿರ್ವಹಣೆ ವೆಚ್ಚ ಹಾಗೂ ಮನೆಮನೆಗಳಿಂದ ಸಂಗ್ರಹಿಸುವ ಕಸದ ಶುಲ್ಕದ ನೆರವಿನಿಂದ ರಾಜ್ಯಕ್ಕೆ ಮಾದರಿ ಎಂಬಂತೆ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ವಹಿಸುತ್ತಿದೆ. ಈ ನಡುವೆ ಘಟಕದಲ್ಲಿ ಹಸಿಕಸಗಳ ವಿಲೇವಾರಿಗೆ ಕಾಂಪೋಸ್ಟ್ ಗೊಬ್ಬರದ ಘಟಕವನ್ನು ಮಾಡಲಾಗಿತ್ತು. ಒಕ್ಕೂಟದ ಮನವಿ ಮೇರೆಗೆ ಗ್ರಾಮ ಪಂಚಾಯಿತಿ ಆಡಳಿತ ಘಟಕದ ಮುಂಭಾಗದ ಪಾಳುಬಿದ್ದಿದ್ದ ಸುಮಾರು ಅರ್ಧ ಎಕರೆ ಜಮೀನನ್ನು ಸಮತಟ್ಟುಗೊಳಿಸಿ ಬಾಳೆಗಿಡ ನೆಡಲು ಹೊಂಡಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಟ್ಟಿದೆ. ಆಮೇಲೆ ಇಲ್ಲಿ ನಡೆದದ್ದು ಪವಾಡ: ಬಿಡುವಿನ ವೇಳೆಯಲ್ಲಿ ಇಲ್ಲಿ ಸೇರುವ ಮಹಿಳೆಯರೆಲ್ಲಾ ಒಟ್ಟಾಗಿ ತರಕಾರಿ ತೋಟ ಮಾಡುವ ಯೋಜನೆ ಮಾಡಿಕೊಂಡರು. ಗಿರಿಶಂಕರ ಪುಂಡಿಕಾಯಿ ಭಟ್ ಅವರು ನೇಂದ್ರ ಜಾತಿಯ ೧೫೦ ಬಾಳೆಸಸಿಗಳನ್ನು ಉಚಿತವಾಗಿ ನೀಡಿದರು. ಗ್ರಾ.ಪಂ. ಸದಸ್ಯರಾದ ಸನತ್, ಸ್ಥಳೀಯರಾದ ಸುರೇಂದ್ರ ರಾವ್, ದಿನೇಶ್, ಜಯರಾಮ್ ಶೆಟ್ಟಿ, ಸೀತಾರಾಮ ಪೂಜಾರಿಯವರು ಬಾಳೆಗಿಡಗಳಿಗೆ ನೀರೊದಗಿಸಲು ಹನಿನೀರಾವರಿಯ ಪೈಪ್‌ಲೈನ್ ಅಳವಡಿಸಲು ಸಹಕಾರ ನೀಡಿದರು. ಸ್ಥಳೀಯ ಯಾವ್ಯಾವ ತರಕಾರಿ ಬೆಳೆಯುವುದು ಎನ್ನುವುದರ ಬಗ್ಗೆ ಚಿಂತನೆ ನಡೆಸಿದರು. ಮಮತಾ ಅವರ ನೇತೃತ್ವದಲ್ಲಿ, ಪಶು ಸಖಿ ಸುಧಾ, ಕೃಷಿ ಸಖಿ ಶೋಭಾ ಅವರ ವಿಶೇಷ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿರುವ ಒಕ್ಕೂಟದ ನಿಕಟಪೂರ್ವ ಕಾರ್ಯದರ್ಶಿ ಭಾರತಿ ಎಸ್. ರಾವ್ ಮತ್ತು ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಅವರ ವಿಶೇಷ ಮುತುವರ್ಜಿಯಲ್ಲಿ ಒಂದು ತಿಂಗಳ ಅವಧಿಯಲ್ಲೆ ಸುಂದರವಾದ ತೋಟ ನಿರ್ಮಾಣಗೊಂಡಿದೆ. ೫೦ ಸಾವಿರ ರೂ. ಬಂಡವಾಳ: ಸಂಜೀವಿನೀ ಒಕ್ಕೂಟದ ಸಮುದಾಯ ಬಂಡವಾಳ ನಿಧಿಯಿಂದ ೫೦ ಸಾವಿರ ರು. ಸಾಲ ಪಡೆದುಕೊಂಡಿದ್ದು, ೮ ಸದಸ್ಯರು ತಲಾ ೭೦೦ ರಂತೆ ಮರುಪಾವತಿಸಿ ಸಾಲ ತೀರಿಸುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಮನೆಗಳಿಂದ ಸಂಗ್ರಹಿಸುವ ಕಂಪೋಸ್ಟ್ ಗೊಬ್ಬರ ತೋಟಕ್ಕೆ ಅತ್ಯುತ್ತಮ ರೀತಿಯಲ್ಲಿ ಬಳಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೇಡಿಕೆ ಬಂದಲ್ಲಿ ಗೊಬ್ಬರವನ್ನೂ ಮಾರಾಟ ಮಾಡುವ ಕುರಿತು ಒಕ್ಕೂಟದ ಸದಸ್ಯರು ಯೋಜನೆ ಹಾಕಿಕೊಂಡಿದ್ದಾರೆ. ಕಳೆದ ಹದಿನೈದು ದಿನಗಳಿಂದ ತರಕಾರಿ ಗಿಡಗಳು ಫಲ ನೀಡಲಾರಂಭಿಸಿದ್ದು, ಅವುಗಳನ್ನು ಅಂಗಡಿಗೆ ಮಾರಾಟಕ್ಕೆ ನೀಡುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲಿಯೇ ಸುಮಾರು ಒಂದು ಸಾವಿರದಷ್ಟು ಆದಾಯಗಳಿಸಿರುವ ಒಕ್ಕೂಟದ ಸದಸ್ಯರು, ಮುಂದಿನ ದಿನಗಳಲ್ಲಿ ಉತ್ತಮ ಫಲದ ನಿರೀಕ್ಷೆಯಲ್ಲಿದ್ದಾರೆ. ಸ್ಫೂರ್ತಿ ಸ್ತ್ರೀ ಶಕ್ತಿ ಸಂಘದ ಸದಸ್ಯರಾದ ಬಬಿತಾ, ಕೃಷಿಸಖಿ ಶೋಭಾ, ಪುಷ್ಪಾ, ಶ್ರೀನಿಧಿ ಸ್ತ್ರೀಶಕ್ತಿ ಸಂಘದ ಸದಸ್ಯರಾದ, ಪಶುಸಖಿ ಸುಧಾ, ಮಾಂಗಲ್ಯ ಸ್ತ್ರೀಶಕ್ತಿ ಸಂಘದ ಸದಸ್ಯೆಯಾದ ಎಂಬಿಕೆ ಮಮತಾ, ಭಾಗ್ಯಶ್ರೀ ಸಂಜೀವಿನೀ ಸಂಘದ ಸದಸ್ಯೆಯಾದ ನೀಲಾಕ್ಷಿ, ನಂದಾದೀಪ ಸಂಜೀವಿನೀ ಸದಸ್ಯೆ, ಒಕ್ಕೂಟದ ಅಧ್ಯಕ್ಷೆ ಪ್ರೇಮಾ, ಮಾಜಿ ಕಾರ್ಯದರ್ಶಿ, ಗ್ರಾ.ಪಂ. ಅಧ್ಯಕ್ಷೆ ಭಾರತಿ ಎಸ್. ರಾವ್ ಶ್ರಮ ವಹಿಸುತ್ತಿದ್ದಾರೆ.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬೆಂಬಲ, ಗ್ರಾ.ಪಂ. ಅಧ್ಯಕ್ಷರು, ಒಕ್ಕೂಟದ ಅಧ್ಯಕ್ಷರು ಸೇರಿದಂತೆ ಎಲ್ಲರ ಇಚ್ಛಾಶಕ್ತಿಯ ತೊಡಗಿಸಿಕೊಳ್ಳುವಿಕೆಯಿಂದ ಸುಂದರ ತರಕಾರಿ ತೋಟ ನಿರ್ಮಾಣಗೊಂಡಿದೆ ಎಂದು ಮಮತಾ ಹೇಳುತ್ತಾರೆ.ಗ್ರಾಮದ ಸ್ವಚ್ಛತೆಯ ಕಾರ್ಯವನ್ನು ಮಾತೃ ಸಂಜೀವಿನಿ ಒಕ್ಕೂಟ ಯಶಸ್ವಿಯಾಗಿ ನಡೆಸುತ್ತಿದೆ, ಇದೀಗ ಮಾದರಿ ಎಂಬಂತೆ ಪಾಳುಬಿದ್ದಿದ್ದ ಜಮೀನಿನಲ್ಲಿ ಹನಿನೀರಾವರಿ ವ್ಯವಸ್ಥೆ ಅಳವಡಿಕೆಯೊಂದಿಗೆ ತರಕಾರಿ ತೋಟ ನಿರ್ಮಿಸಿದೆ, ಪಂಚಾಯಿತಿಯಿಂದ ಅಗತ್ಯ ನೆರವು ನೀಡಲಾಗಿದೆ ಎಂದು ಪಿಡಿಒ ಸುನಿಲ್ ಕುಮಾರ್ ಹೇಳುತ್ತಾರೆ.