ರಾಷ್ಟ್ರಮಟ್ಟದ ಪ್ರದರ್ಶನದಲ್ಲಿ ಹಳ್ಳಿ ಹುಡುಗರ ಬಹು ಉಪಯೋಗಿ ಸಾಧನ

| Published : Feb 06 2025, 12:17 AM IST

ಸಾರಾಂಶ

ಕಟ್ಟಡ ಕಾರ್ಮಿಕರಿಗೆ ಇಟ್ಟಿಗೆಗಳನ್ನು ಸುಲಭ ಮತ್ತು ಆರಾಮದಾಯಕವಾಗಿ ಸಾಗಿಸಲು ಈ ಬಹು ಉಪಯೋಗಿ ಸಾಧನ ತಯಾರಿಸಲಾಗಿದೆ. ಕಟ್ಟಡ ಕಟ್ಟುವಾಗ ಕೂಲಿಕಾರರು ಭಾರವಾದ ಇಟ್ಟಿಗೆ, ಬುಟ್ಟಿ ಹೊತ್ತು ಸಾಗಬೇಕು. ಈ ಸಾಧನ ಬಳಸಿದರೆ ಅವರ ದೈಹಿಕ ಶ್ರಮ ಕಡಿಮೆಯಾಗುವ ಜತೆಗೆ ಕೆಲಸವೂ ವೇಗವಾಗಿ ಸಾಗಲಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಬ್ಬರು ತಯಾರಿಸಿದ "ಬಹು ಉಪಯೋಗಿ ಸಾಧನ " ರಾಜ್ಯಮಟ್ಟದ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಪ್ರದರ್ಶನ ಕಂಡಿದೆ. ಇದು ಉಳಿದ ವಿದ್ಯಾರ್ಥಿಗಳಿಗೂ ಪ್ರೇರಣೆ ಸಿಕ್ಕಂತೆ ಆಗಿದೆ.

ತಾಲೂಕಿನ ಕುರಡಿಕೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಮಂಜುನಾಥ ಹಂಡಿ ಹಾಗೂ ಮಾಸುದ್ದೀನ ಅಣ್ಣಿಗೇರಿ ಅವರು ವಿಜ್ಞಾನ ಶಿಕ್ಷಕಿ ರಾಜಶ್ರೀ ಬೀಡಿ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಈ ಬಹು ಉಪಯೋಗಿ ಸಾಧನವು ರಾಷ್ಟ್ರಮಟ್ಟದ ವಸ್ತು ಪ್ರದರ್ಶನದಲ್ಲಿ ಎಲ್ಲರ ಆಕರ್ಷಣೆಗೆ ಕಾರಣವಾಗಿವೆ.

ಏನಿದು ಸಾಧನ?

ಕಟ್ಟಡ ಕಾರ್ಮಿಕರಿಗೆ ಇಟ್ಟಿಗೆಗಳನ್ನು ಸುಲಭ ಮತ್ತು ಆರಾಮದಾಯಕವಾಗಿ ಸಾಗಿಸಲು ಈ ಬಹು ಉಪಯೋಗಿ ಸಾಧನ ತಯಾರಿಸಲಾಗಿದೆ. ಕಟ್ಟಡ ಕಟ್ಟುವಾಗ ಕೂಲಿಕಾರರು ಭಾರವಾದ ಇಟ್ಟಿಗೆ, ಬುಟ್ಟಿ ಹೊತ್ತು ಸಾಗಬೇಕು. ಈ ಸಾಧನ ಬಳಸಿದರೆ ಅವರ ದೈಹಿಕ ಶ್ರಮ ಕಡಿಮೆಯಾಗುವ ಜತೆಗೆ ಕೆಲಸವೂ ವೇಗವಾಗಿ ಸಾಗಲಿದೆ. ಕುರ್ಚಿಯಂತೆ ಕಾಣುವ ಈ ಸಾಧನ ತೆಲೆಯ ಮೇಲೆ ಹೊತ್ತುಕೊಂಡು ಹೋಗಲು, ಬೆನ್ನ ಹಿಂದೆ ಕಟ್ಟಿಕೊಂಡು ಹೋಗಲು ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ. ಈ ಸಾಧನದ ಮೂಲಕ ಇಟ್ಟಿಗೆ, ಸಿಮೆಂಟ್‌ ಚೀಲ, ಮರಳಿನ ಚೀಲ ಹೊತ್ತುಕೊಂಡು ಹೋಗಬಹುದು. ಜತೆಗೆ ಈ ಸಾಧನದ ಕೆಳಗೆ ವ್ಹೀಲ್‌ (ಗಾಲಿ) ಅಳವಡಿಸಿದ್ದು, ಭಾರವಾದ ವಸ್ತುಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಎಳೆದುಕೊಂಡು ಹೋಗಬಹುದಾಗಿದೆ. ಜತೆಗೆ ಎರಡು ಕಡೆಗಳಲ್ಲಿ ಸೋಲಾರ್‌ ಲೈಟ್‌ನ ಪ್ಯಾನೆಲ್ ಅಳವಡಿಸಿದ್ದು ಹಗಲು ಹೊತ್ತು ಚಾರ್ಜ್‌ ಮಾಡಿ ರಾತ್ರಿಯೂ ಲೈಟ್‌ ಹಚ್ಚಿ ಕೆಲಸ ಮಾಡಬಹುದು. ಬೇಸರವಾದರೆ ಸಂಗೀತ ಆಲಿಸಲು ಬೇಕಾದ ವ್ಯವಸ್ಥೆ ಕೂಡ ಮಾಡಲಾಗಿದೆ. ಕೂಲಿಕಾರರು ಕೆಲಸದ ವೇಳೆ ಊಟಕ್ಕೆಂದು ತೆಗೆದುಕೊಂಡು ಹೋಗುವ ಬುತ್ತಿ ಬೆಚ್ಚಗಿಡಲು ಹಾಟ್‌ಬಾಕ್ಸ್‌ ಸಹ ಅಳವಡಿಸಲಾಗಿದೆ.

ಕಡಿಮೆ ವೆಚ್ಚದಲ್ಲಿ ಕಾರ್ಮಿಕ ಸ್ನೇಹಿ ಸಾಧನ ಅಭಿವೃದ್ಧಿಪಡಿಸುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಹಲವು ಸೌಲಭ್ಯಗಳ ಕೊರತೆಯ ಮಧ್ಯೆಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿನೂತನ ಮಾದರಿ ತಯಾರಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿರುವುದು ಹೆಮ್ಮೆಯ ಸಂಗತಿ. ರಾಷ್ಟ್ರಮಟ್ಟದ ಪ್ರದರ್ಶನದಲ್ಲಿ ಭಾಗಿ

2024-25ನೇ ಸಾಲಿನ "ಜಿಜ್ಞಾಸ " ಕರ್ನಾಟಕ ರಿಜಿನಲ್ ಲೆವೆಲ್ ನಾವೀನ್ಯಯುತ ಮಾದರಿ ತಯಾರಿಕೆ ಹಾಗೂ ವಸ್ತು ಪ್ರದರ್ಶನದಲ್ಲಿ ಕುರಡಿಕೇರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬುಧವಾರದಿಂದ (ಫೆ.5, 6) ಬೆಂಗಳೂರಿನ ಸರ್‌ ಎಂ. ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಆರಂಭವಾಗಿರುವ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ತೋರಿಸಿದ್ದಾರೆ ಎಂದು ವಿಜ್ಞಾನ ಶಿಕ್ಷಕಿ ರಾಜಶ್ರೀ ಬೀಡಿ ಕನ್ನಡಪ್ರಭಕ್ಕೆ ತಿಳಿಸಿದರು.ನಮ್ಮ ಪಾಲಕರು ಮತ್ತು ಕಾರ್ಮಿಕರು ಕೆಲಸದಲ್ಲಿ ಎದುರಿಸುತ್ತಿರುವ ತೊಂದರೆ ಕಣ್ಣಾರೆ ಕಂಡಿದ್ದೇವೆ. ಅಂತಹ ಕೂಲಿಕಾರರಿಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಈ ವಿನೂತನ ಬಹುಬಳಕೆಯ ಸಾಧನ ಕಂಡುಹಿಡಿಯಲಾಗಿದೆ ಎಂದು ವಿದ್ಯಾರ್ಥಿಗಳಾದ ಮಾಸುದ್ದೀನ್ ಅಣ್ಣಿಗೇರಿ, ಮಂಜುನಾಥ ಹಂಡಿ ಹೇಳಿದರು.ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಬ್ಬರು ತಯಾರಿಸಿದ ಸಾಧನ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಪ್ರದರ್ಶನಗೊಳುತ್ತಿರುವುದು ಜಿಲ್ಲೆಯ ಮೆರಗು ಹೆಚ್ಚಿಸಿದೆ. ರಾಷ್ಟ್ರಮಟ್ಟದಲ್ಲೂ ಸ್ಥಾನ ಪಡೆಯುವಂತಾಗಲಿ ಎಂದು ಹುಬ್ಬಳ್ಳಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಹಾರೈಸಿದರು.