ರಾಣಿಬೆನ್ನೂರು: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರ 2008ರಲ್ಲಿ ಕಾಂಗ್ರೆಸ್ ಕೈತಪ್ಪಿ ಹೋಗಿದ್ದು, ಇದೀಗ ಅದನ್ನು ಮತ್ತೇ ನಮ್ಮ ಪಕ್ಷಕ್ಕೆ ಮರಳಿ ಪಡೆಯುವ ಸದವಕಾಶ ಒದಗಿ ಬಂದಿದೆ. ನಮ್ಮ ಅಭ್ಯರ್ಥಿ ಮೋಹನ ಲಿಂಬಿಕಾಯಿ ಒಬ್ಬ ಅನುಭವಸ್ಥ ವಕೀಲರಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಗೆಲುವು ನನ್ನ ವೈಯಕ್ತಿಕ ಹಿರಿಮೆಯಾಗಲಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪಶ್ಚಿಮ ಪದವಿಧರರ ಕ್ಷೇತ್ರ ನಾಡಿಗೆ ಸಾಕಷ್ಟು ಕೊಡುಗೆ ನೀಡಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಇಲ್ಲಿನ ಪ್ರತಿನಿಧಿಗಳು ಹೋರಾಟ ನಡೆಸಬೇಕು ಎಂಬುದು ಮತದಾರರ ಅಪೇಕ್ಷೆಯಾಗಿದೆ. ಈ ಕ್ಷೇತ್ರದ ಪ್ರತಿನಿಧಿಯಾಗಿ ನಾನು 24 ವರ್ಷ ವಿವಿಧ ಹುದ್ದೆ ಅಲಂಕರಿಸಿದ್ದೆನು. ಆಗ ಕ್ಷೇತ್ರದ ಮತದಾರರಿಂದ ನನಗೆ ಯಾವುದೇ ಒತ್ತಡ ಹಾಕಿರಲಿಲ್ಲ. ಒಬ್ಬ ಪ್ರತಿನಿಧಿಯಾಗಿ ಉತ್ತರ ಕರ್ನಾಟಕದ ದ್ವನಿಯಾಗಬಹುದು. ಅವರಿಗೆ ನಿಮ್ಮ ಮತಹಾಕಿ ಬೆಂಬಲ ನೀಡಿ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಜಿಲ್ಲೆಯ ಎಲ್ಲಾ ಮತದಾರರನ್ನು ಮುಟ್ಟುವ ಪ್ರಯತ್ನ ಮಾಡಿದ್ದಾರೆ. ಮತದಾರರು ಮತಗಟ್ಟೆಗೆ ಬರುವ ಹಾಗೆ ಕಾರ್ಯಕರ್ತರೂ ಕೆಲಸ ಮಾಡಬೇಕು ಎಂದರು.

ಎಂಟು ತಿಂಗಳ ಹಿಂದೆ ಮೋದಿ ಪರವಾಗಿದ್ದ ಯುವ ಜನಾಂಗ ಈಗ ಬದಲಾಗಿದ್ದಾರೆ. ಪ್ರತಿ ವರ್ಷ ಎರಡು ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದರು. ಆದರೆ ಉದ್ಯೋಗ ನೀಡುವ ಬದಲಿಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಇದರಿಂದ ಬಿಜೆಪಿ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಎಸ್‌ಐಆರ್ ಮೂಲಕ ಮತದಾರರ ಹಕ್ಕು ಕಸಿಯಲಾಗುತ್ತಿದೆ. ಹೀಗಾಗಿ ಯುವ ಜನಾಂಗ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದರು.

ಸ್ಟಿಂಗ್ ಆಪರೇಷನ್ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಇಂದಿನ ರಾಜಕರಾಣದಲ್ಲಿ ಅಸಭ್ಯ, ಅನಾರೋಗ್ಯ, ಶಬ್ಧ ಎನ್ನುವ ರೀತಿಯಾಗಿದೆ. ಇಂದಿನ ದಿನಗಳಲ್ಲಿ ಕುಟುಂಬದ ಜೊತೆ ಟಿವಿ ನೋಡುವ ಪರಿಸ್ಥಿತಿಯಿಲ್ಲ. ಯಾರೋಬ್ಬರ ಮೇಲೆ ತೇಜೋವದೆ ಮಾಡಲು ಈ ರೀತಿ ಹೀನ ಕೃತ್ಯ ನಡೆಸುವುದು ಸರಿಯಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಜೀವನದ ಸಂಜೆಯಲ್ಲಿದ್ದು ಅವರ ಮೇಲೆಯೂ ಸ್ಟಿಂಗ್ ಆಪರೇಷನ್ ಮಾಡಿರುವುದು ಖೇದಕರ. ಅದರ ಬದಲಿಗೆ ಅವರ ಆಡಳಿತದ ಅವಧಿಯಲ್ಲಿ ಸಾಮಾಜಿಕ ನ್ಯಾಯ ಪರಿಕಲ್ಪನೆ, ಬಡವರ ಅಭ್ಯುದಯ, ಮೂಢನಂಬಿಕೆ ವಿರೋಧ ಮುಂತಾದ ವಿಷಯದಲ್ಲಿ ಏನಾದರೂ ತಪ್ಪುಗಳಾಗಿದ್ದಲ್ಲಿ ಅದರ ಕುರಿತು ಚರ್ಚೆ ನಡೆಸುವಂತಾಗಬೇಕು. ಸ್ಟಿಂಗ್ ಆಪರೇಷನ್ ರಾಜಕೀಯ ಸಂಸ್ಕೃತಿಗೆ ಕೊಡಲಿ ಪೆಟ್ಟಾಗಿದೆ ಎಂದರು.

ಶಾಸಕ ಪ್ರಕಾಶ ಕೋಳಿವಾಡ, ಚಂದ್ರಣ್ಣ ಬೇಡರ, ಪುಟ್ಟಪ್ಪ ಮರಿಯಮ್ಮನವರ, ಕರೆಗೌಡ ಬಾಗೂರ, ಏಕನಾಥ ಭಾನುವಳ್ಳಿ, ಬಸವರಾಜ ತಳವಾರ, ಇಕ್ಬಾಲಸಾಬ ರಾಣಿಬೆನ್ನೂರು ಸುದ್ದಿಗೋಷ್ಠಿಯಲ್ಲಿದ್ದರು.