ಪುಟ್ಟಣ್ಣಗೆ ವೈಯಕ್ತಿಕ ವರ್ಚಸ್ಸು ತಂದ ಗೆಲವು!

| Published : Feb 21 2024, 02:00 AM IST

ಪುಟ್ಟಣ್ಣಗೆ ವೈಯಕ್ತಿಕ ವರ್ಚಸ್ಸು ತಂದ ಗೆಲವು!
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ವೈಯಕ್ತಿಕ ವರ್ಚಸ್ಸಿನಿಂದ ಮತ್ತೊಮ್ಮೆ ಗೆಲುವಿನ ನಗೆ ಬೀರಿದರೆ, ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ಮುಖಭಂಗ ಅನುಭವಿಸಿದ್ದಾರೆ.

ರಾಮನಗರ: ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ವೈಯಕ್ತಿಕ ವರ್ಚಸ್ಸಿನಿಂದ ಮತ್ತೊಮ್ಮೆ ಗೆಲುವಿನ ನಗೆ ಬೀರಿದರೆ, ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ಮುಖಭಂಗ ಅನುಭವಿಸಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಕಂಡಿದ್ದ ಪುಟ್ಟಣ್ಣ 5ನೇ ನಾಲ್ಕನೇ ಬಾರಿಗೆ ಕೈ ಹಿಡಿದು ಮೇಲ್ಮನೆ ಪ್ರವೇಶಿಸುತ್ತಿದ್ದಾರೆ. ಈ ಮೂಲಕ ವಿರೋಧಿಗಳಿಗೆ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಹಾಗೂ ಶಿಕ್ಷಕ ವರ್ಗದೊಂದಿಗೆ ತಮ್ಮ ಬಾಂಧವ್ಯ ಹೇಗಿದೆ ಎಂಬುದನ್ನು ಸಾಬೀತು ಪಡಿಸಿ ತೋರಿಸಿದ್ದಾರೆ.

ಜೆಡಿಎಸ್ ನಿಂದ ಉಚ್ಚಾಟನೆಗೊಂಡಿದ್ದ ಪುಟ್ಟಣ್ಣ ಅವರನ್ನು 2020ರ ಚುನಾವಣೆಯಲ್ಲಿ ಬಿಜೆಪಿ ತನ್ನತ್ತ ಸೆಳೆದುಕೊಂಡು ಅಭ್ಯರ್ಥಿಯಾಗಿ ಘೋಷಿಸಿತು. ಆ ಚುನಾವಣೆಯಲ್ಲಿ ಪುಟ್ಟಣ್ಣ ಗೆಲುವು ಕೂಡ ಸಾಧಿಸಿದ್ದರು. ಅಂದಿನ ಬಿಜೆಪಿ ಸರ್ಕಾರದ ಶಿಕ್ಷಕ ವಿರೋಧಿ ನೀತಿಗಳಿಂದ ಬೇಸರಗೊಂಡು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಸೇರಿದರು.

ಅಲ್ಲದೆ, ರಾಜಾಜಿನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಹೋದ ಪುಟ್ಟಣ್ಣ ಮತದಾರರಿಂದ ತಿರಸ್ಕೃತಗೊಂಡರು. ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಗೆ ಪ್ರಬಲ ಅಭ್ಯರ್ಥಿ ಸಿಗದ ಕಾರಣ ಕಾಂಗ್ರೆಸ್ ಪಕ್ಷ ಪುಟ್ಟಣ್ಣ ಅವರನ್ನೇ ಮಣೆ ಹಾಕಿತು.

ಜೆಡಿಎಸ್ - ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಅವರನ್ನು ಅಖಾಡಕ್ಕೆ ಇಳಿಸಿತು. ನೇರ ಹಣಾಹಣಿಯಿಂದಾಗಿ ಉಪಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಈವರೆಗಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳೇ ಸಂಪ್ರದಾಯಿಕ ಎದುರಾಳಿಗಳಾಗಿದ್ದವು. ಇದೇ ಪ್ರಥಮ ಬಾರಿಗೆ ಉಪಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಸಾಧಿಸಿ ರಂಗನಾಥ್ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಪುಟ್ಟಣ್ಣ ಸ್ಪರ್ಧಿಸಿದರು.

ಲೋಕಸಭಾ ಚುನಾವಣೆ ದೃಷ್ಟಿಯಿಂದ ಮೂರು ಪಕ್ಷಗಳಿಗೂ ಉಪಚುನಾವಣೆ ಪ್ರತಿಷ್ಠೆಯಾಗಿತ್ತು. ಜೆಡಿಎಸ್ ವರಿಷ್ಠರು ಮೈತ್ರಿಕೂಟದ ಭಾಗವಾಗಿದ್ದ ಬಿಜೆಪಿಯ ನೆರವಿನೊಂದಿಗೆ ಕ್ಷೇತ್ರದಲ್ಲಿ ಪಾರಮ್ಯ ಮುಂದುವರೆಸಲು ಹಾಗೂ ಆಡಳಿತರೂಢ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಂಡುಕೊಳ್ಳುವ ಪ್ರಯತ್ನ ನಡೆಸಿತ್ತು. ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮೂರು ಪಕ್ಷಗಳು ಪ್ರತಿಷ್ಠೆಯನ್ನು ಪಣಕ್ಕಿರಿಸಿ ಪ್ರಬಲ ಪಟ್ಟುಗಳನ್ನು ಹಾಕಿದ್ದರಿಂದ ನೇರಾನೇರ ಸ್ಪರ್ಧೆ ಏರ್ಪಟ್ಟು ಗಮನ ಸೆಳೆದಿತ್ತು.

ಸೋಲಿಲ್ಲದ ಶಿಕ್ಷಕ ಪ್ರೇಮಿ:

2002ರಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಪುಟ್ಟಣ್ಣ ಅವರು, ನಾಲ್ಕು ಬಾರಿ ನಿರಂತರವಾಗಿ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಂಡಿದ್ದರು. ಪಕ್ಷ, ಜಾತಿ, ಧರ್ಮದ ಹಂಗಿಲ್ಲದೆ ಮಾಡಿರುವ ನಿಸ್ವಾರ್ಥ ಸೇವೆ ಜತೆಗೆ ಪಕ್ಷದ ವರ್ಚಸ್ಸು ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಪುಟ್ಟಣ್ಣರವರ ನಂಬಿಕೆ ಹುಸಿಯಾಗಲಿಲ್ಲ. ಆದರೆ, ಈ ಚುನಾವಣೆಯಲ್ಲಿ ಪಕ್ಷಕ್ಕಿಂತ ಪುಟ್ಟಣ್ಣರವರ ವೈಯಕ್ತಿಕ ವರ್ಚಸ್ಸು ಮತಗಳಾಗಿ ಪರಿವರ್ತನೆಯಾದವು ಎನ್ನುತ್ತಾರೆ ಮತದಾರ ಶಿಕ್ಷಕರು.

ಕಳೆದ 22 ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿರುವ ಪುಟ್ಟಣ್ಣ, ಶಿಕ್ಷಕರ ಜತೆ ನೇರವಾಗಿ ಸಂಪರ್ಕ ಸಾಧಿಸಿಕೊಂಡಿದ್ದಾರೆ. ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಅನೇಕ ಸಮಸ್ಯೆಗಳ ಕುರಿತ ಹೋರಾಟದಲ್ಲಿಯೂ ಭಾಗಿಯಾಗಿದ್ದರು. ಹೀಗಾಗಿ ಬಹುತೇಕ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಪುಟ್ಟಣ್ಣರವರ ಬೆನ್ನಿಗೆ ನಿಂತಿದ್ದವು.

ಅಲ್ಲದೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬೆಂಬಲವೂ ದಕ್ಕಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ.ಸುರೇಶ್ ಹಾಗೂ ಸ್ಥಳೀಯ ಶಾಸಕರು ಸೇರಿದಂತೆ ಹಲವು ನಾಯಕರು ನೇರವಾಗಿ ಅಖಾಡಕ್ಕೆ ಇಳಿದಿದ್ದು ಪುಟ್ಟಣ್ಣ ಅವರ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿತು. ಈ ಮೂಲಕ ಕೈ ಪಡೆ ಕ್ಷೇತ್ರದಲ್ಲಿ ಜೆಡಿಎಸ್ - ಬಿಜೆಪಿಯ ಪಾರಮ್ಯಕ್ಕೆ ಇತಿಶ್ರೀ ಹಾಡಿದೆ.

2ನೇ ಬಾರಿಯೂ ಮಂಡಿಯೂರಿದ ರಂಗನಾಥ :

ಕ್ಷೇತ್ರದಲ್ಲಿ ಪುಟ್ಟಣ್ಣ ಜೆಡಿಎಸ್ ಮತ್ತು ಬಿಜೆಪಿಯಿಂದಲೇ ಗೆಲವು ಸಾಧಿಸುತ್ತಾ ಬಂದಿದ್ದವರು. ಹೀಗಾಗಿ ತಮ್ಮ ಗೆಲವು ಸುಲಭವೆಂದು ಜೆಡಿಎಸ್ - ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ರಂಗನಾಥ್ ಭಾವಿಸಿದ್ದರು. ವೈಯಕ್ತಿಕ ಬಲಕ್ಕಿಂತಲೂ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಇತರೆ ನಾಯಕರ ವರ್ಚಸ್ಸನ್ನು ನಂಬಿಕೊಂಡಿದ್ದರು.

ಈ ಹಿಂದೆ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದರೂ ಪುಟ್ಟಣ್ಣ ಜೆಡಿಎಸ್‌ನಿಂದ ಮೂರು ಬಾರಿ, ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದು ಬಾರಿ ಗೆಲುವು ಸಾಧಿಸಿದ್ದರು. ತೆನೆ ಭಾರ ಇಳಿಸಿ, ಹಿಡಿದಿದ್ದ ಕಮಲವನ್ನೂ ಬಿಟ್ಟು ಕೈ ಹಿಡಿದ ಪುಟ್ಟಣ್ಣ ಅವರ ರಾಜಕೀಯ ಅನುಭವದ ಎದುರು ಪಾಠ ಕಲಿಸುವ ಹಂಬಲದಲ್ಲಿದ್ದ ಮೈತ್ರಿ ಹುರಿಯಾಳು ರಂಗನಾಥ್ ಮತ್ತೊಮ್ಮೆ ಸೋತು ಮಂಡಿಯೂರಿದ್ದಾರೆ.

ಸುಶಿಕ್ಷಿತರ 1239 ಮತಗಳು ರಿಜೆಕ್ಟ್:

ಸುಶಿಕ್ಷಿತ ಮತದಾರರು ಎನಿಸಿಕೊಂಡ ಶಿಕ್ಷಕರೇ ಚಲಾಯಿಸಿರುವ 1239 ಮತಗಳು ತಿರಸ್ಕೃತಗೊಂಡಿವೆ. ಉಪಚುನಾವಣೆಯಲ್ಲಿ ಒಟ್ಟು 16541 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ 15302 ಮತಗಳು ಕ್ರಮದಬ್ಧವಾಗಿದ್ದರೆ, 1239 ಮತಗಳು ಕುಲಗೆಟ್ಟಿವೆ.ಬಾಕ್ಸ್‌............

ಯಾವ ಅಭ್ಯರ್ಥಿಗೆ ಎಷ್ಟು ಮತಗಳು ? :

ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ - 8260, ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ - 6753, ಪಕ್ಷೇತರರಾದ ಕೃಷ್ಣವೇಣಿ - 22, ಟಿ.ನರಸಿಂಹಸ್ವಾಮಿ - 04, ಅವತಿ ಮಂಜುನಾಥ್ - 139, ರಂಗನಾಥ್ - 26, ಬಿ.ಕೆ.ರಂಗನಾಥ್ - 07, ವೀಣಾ ಸೆರೆವಾ - 74, ಎಚ್ .ಸುನೀಲ್ ಕುಮಾರ್ - 17 ಮತ ಪಡೆದಿದ್ದಾರೆ.

ಬಾಕ್ಸ್ ........

2024 ರ ಉಪ ಚುನಾವಣೆ ನೋಟ

ಗೆದ್ದವರು: ಪುಟ್ಟಣ್ಣ (ಕಾಂಗ್ರೆಸ್ )

ಪಡೆದ ಮತ - 8260

ಸಮೀಪದ ಪ್ರತಿಸ್ಪರ್ಧಿ

ಎ.ಪಿ.ರಂಗನಾಥ್ (ಜೆಡಿಎಸ್ - ಬಿಜೆಪಿ)

ಪಡೆದ ಮತ: 6753

ಅಂತರ - 1507 ಮತ

ಬಾಕ್ಸ್ ..............

ಪುಟ್ಟಣ್ಣ ಗೆಲವಿಗೆ ಕಾರಣವೇನು ? :

-ಶಿಕ್ಷಕರ ಜತೆ ವೈಯಕ್ತಿಕ ಸಂಪರ್ಕದ ಜತೆಗೆ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗಳ ಬೆಂಬಲ.

-ಆಡಳಿತ ರೂಢ ಕಾಂಗ್ರೆಸ್ ಪಕ್ಷ ಹಾಗೂ ವೈಯಕ್ತಿಕ ವರ್ಚಸ್ಸು ಮತಗಳಾಗಿ ಪರಿವರ್ತನೆ

-ಚುನಾವಣೆ ಘೋಷಣೆಗೂ ಮುನ್ನವೇ ಕ್ಷೇತ್ರದಾದ್ಯಂತ ಬಿಡುವಿಲ್ಲದೆ ಪ್ರಚಾರ

-22 ವರ್ಷಗಳಿಂದ ಕ್ಷೇತ್ರದಲ್ಲಿ ತಮ್ಮದೇ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಂಡಿರುವುದು

- ಕಾಂಗ್ರೆಸ್ ಕಾರ್ಯಕರ್ತರಿಗಿಂತ ಹೆಚ್ಚಾಗಿ ಶಿಕ್ಷಕರೇ ಬಹಿರಂಗವಾಗಿ ಪ್ರಚಾರ ನಡೆಸಿದ್ದು.ಬಾಕ್ಸ್ ..............

ರಂಗನಾಥ್ ಸೋಲಿಗೆ ಕಾರಣವೇನು? :

-ಮೈತ್ರಿ ಅಭ್ಯರ್ಥಿ ಘೋಷಣೆಯ ಗೊಂದಲದಿಂದಾಗಿ ಕ್ಷೇತ್ರದಲ್ಲಿ ತಡವಾಗಿ ಚುನಾವಣಾ ಪೂರ್ವಸಿದ್ಧತೆ ನಡೆಸಿದ್ದು.

-ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ, ಆರ್.ಅಶೋಕ್ ಹೊರತು ಪಡಿಸಿದರೆ ವೈಯಕ್ತಿಕ ವರ್ಚಸ್ಸು ಇಲ್ಲದಿರುವುದು.

-ಸ್ಥಳೀಯ ಶಾಸಕರು ಹಾಗೂ ಮುಖಂಡರಿಂದ ನಿರೀಕ್ಷೆಯಂತೆ ಬೆಂಬಲ ಸಿಗದಿರುವುದು.

-ಶಿಕ್ಷಕರನ್ನು ಸೆಳೆಯುವ ಅನುಭವಿ ರಾಜಕಾರಣಿ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವಲ್ಲಿ ಎಡವಿದ್ದು.

-ಶಿಕ್ಷಕ ಸಮುದಾಯಕ್ಕಿಂತ ಹೆಚ್ಚಾಗಿ ಜೆಡಿಎಸ್ - ಬಿಜೆಪಿ ಕಾರ್ಯಕರ್ತರೇ ಪ್ರಚಾರ ನಡೆಸಿದ್ದು.

20 ಕೆಆರ್ ಎಂಎನ್ 5.ಜೆಪಿಜಿ

ವಿಧಾನ ಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.