ಬದುಕಿನ ಓರೆ ಕೋರೆಗಳನ್ನು ತಿದ್ದಿ ತೀಡುವ ರಂಗ ಶಕ್ತಿಗೆ ಎಂದೂ ಸೋಲಿಲ್ಲ.

ಹಾನಗಲ್ಲ: ಬದುಕನ್ನು ಕಲಿಸುವ ಕನ್ನಡ ರಂಗಭೂಮಿಗೆ ಹೊಸ ಅರಿವಿನ ಹರಿವು ಬೇಕಾಗಿದ್ದು, ವೈಚಾರಿಕತೆ ಮುಕ್ಕಾಗದಂತೆ ನಾಡ ತುಂಬ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ತಾಲೂಕಿನ ರಂಗಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಗಜಾನನ ಯುವಕ ಮಂಡಳ, ರಂಗ ಕಲಾವಿದ ಪ್ರಕಾಶ್ ರಾಜ್ ನೇತೃತ್ವದ ನಿರ್ದಿಗಂತದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ೧೫ ದಿನಗಳ ಕಾಲದ ಹರಿವು ರಂಗ ಶಿಬಿರ -೨೦೨೬ ಉದ್ಘಾಟಿಸಿ ಮಾತನಾಡಿದ ಅವರು, ವೈಚಾರಿಕತೆ ಮುಕ್ಕಾಗಬಾರದು ಎಂಬ ಅರಿವು ಈಗಿನದಾಗಿದೆ. ಇಡೀ ಕನ್ನಡ ರಂಗಭೂಮಿಗೆ ಈಗ ಹೊಸ ಹರಿವು ಯುವ ಪ್ರತಿಭೆಗಳಿಂದ ಹರಿಯಬೇಕಾಗಿದೆ. ಗ್ರಾಮೀಣ ಪ್ರದೇಶದ ರಂಗ ಕಲಾವಿದರಲ್ಲಿರುವ ರಂಗಾಸಕ್ತಿಯನ್ನು ಪೋಷಿಸುವ ತೀರ ಅಗತ್ಯವೂ ಇದೆ. ಹಳ್ಳಿಗಳಲ್ಲಿ ಈಗಲೂ ರಂಗ ಪ್ರೀತಿ ಕಡಿಮೆಯಾಗಿಲ್ಲ. ಆದರೆ ಅದನ್ನು ಬೆಳೆಸುವ ನಿಟ್ಟಿನಲ್ಲಿ ಸಂಘಟಕರು ಕಲಾವಿದರ ಆಸಕ್ತಿಯ ಕೊರತೆ ಕಾಢುತ್ತಿದೆ. ಬದುಕಿನ ಓರೆ ಕೋರೆಗಳನ್ನು ತಿದ್ದಿ ತೀಡುವ ರಂಗ ಶಕ್ತಿಗೆ ಎಂದೂ ಸೋಲಿಲ್ಲ. ಆದರೆ ಇತ್ತೀಚೆಗೆ ರಂಗಭೂಮಿ, ಕಲೆ ಪ್ರಕಾರಗಳಲ್ಲಿ ಕಲುಷಿತ ವಾತಾವರಣವಿರುವುದೇ ವಿಷಾದದ ಸಂಗತಿ. ಎಲ್ಲ ಸವಾಲುಗಳನ್ನು ಎದುರಿಸಿಯೂ ರಂಗಭೂಮಿ ವಿಶಾಲವಾಗಿ ಬೆಳೆದಿದೆ. ಅದನ್ನು ಮತ್ತೆ ಮುನ್ನಲೆಗೆ ತರುವ ಕಾರ್ಯ ನಮ್ಮದಾಗಬೇಕು ಎಂದರು.

ಖ್ಯಾತ ನಿರ್ದೇಶಕ ಪ್ರಕಾಶರಾಜ ನೇತೃತ್ವ ನಿರ್ದಿಗಂತದ ರಂಗ ಕಲಾವಿದ ನಿರ್ದೇಶಕ ಶಕೀಲಅಹಮ್ಮದ್ ಮಾತನಾಡಿ, ಕನ್ನಡ ರಂಗಭೂಮಿಯ ಮೂಲಕ ಜನಮನ ಕಟ್ಟುವ ಕೆಲಸ ಆಗಬೇಕಾಗಿದೆ. ರಂಗ ಎಲ್ಲರನ್ನೂ ಜತೆಯಲ್ಲಿ ಕೊಂಡೊಯ್ಯುವ ಶಕ್ತಿ ಹೊಂದಿದೆ. ರಂಗದ ಮರು ವಿಕಾಸ ಈಗಿನ ಅಗತ್ಯ. ಕಲಾವಿದರ ಕನಸುಗಳೂ ಸಾಕಾರವಾಗಬೇಕಾಗಿದೆ. ಇದಕ್ಕಾಗಿ ನಿರ್ದಿಗಂತ ಹೊಸ ಆಯಾಮದೊಂದಿಗೆ ರಂಗಭೂಮಿ ಕಲಾವಿದರಿಗೆ ಹೊಸ ಚೈತನ್ಯ ನೀಡುವ ಕಾರ್ಯದಲ್ಲಿ ಹೆಜ್ಜೆ ಹಾಕುತ್ತಿದೆ ಎಂದರು.

ನಿರ್ದೇಶಕ ಸಂತೋಷ ಸಂಕೊಳ್ಳಿ ಮಾತನಾಡಿ, ಕಲೆ ಸಾಹಿತ್ಯ ರಾಜಕೀಕರಣಗೊಳ್ಳಬಾರದು. ಹಲವು ಸ್ಥಿತ್ಯಂತರ ಪಲ್ಲಟಗಳ ನಡುವೆಯೂ ಕನ್ನಡ ರಂಗಭೂಮಿ ವಿಕಾಸದ ಹಾದಿಯಲ್ಲೇ ಸಾಗಿದೆ. ಈಗ ಬದಲಾವಣೆಯ ಕಾಲದಲ್ಲಿದ್ದೇವೆ. ಕಾಲ ಕಾಲಕ್ಕೆ ಇಂತಹ ಬದಲಾವಣೆಗಳು ಇದ್ದೇ ಇರುತ್ತವೆ. ಏನೇ ಆದರೂ ರಂಗಭೂಮಿಗೆ ಎಲ್ಲ ಕಾಲದಲ್ಲೂ ಸಕಾಲಿಕವಾದ ಸ್ಪಂದನೆ ದೊರೆತೇ ಇದೆ ಎಂದರು.

ಸ್ಕೌಟ್ ಹಾಗೂ ಗೈಡ್ಸ್‌ ಜಿಲ್ಲಾ ಕಾರ್ಯದರ್ಶಿ ಪರಮೇಶ ಚಿಕ್ಕಳ್ಳಿ ಅಧ್ಯಕ್ಷತೆವಹಿಸಿದ್ದರು. ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಗಜಾನನ ಯುವಕ ಮಂಡಳದ ಅಧ್ಯಕ್ಷ ಪ್ರಭು ಗುರಪ್ಪನವರ, ಕಾರ್ಯದರ್ಶಿ ನಾಗರಾಜ ಧಾರೇಶ್ವರ, ಕಲಾವಿದ ಶಿವಮೂರ್ತಿ ಹುಣಸಿಹಳ್ಳಿ ಉಪಸ್ಥಿತರಿದ್ದರು. ಕಲಾವಿದೆ ಸಹನಾ ರಂಗಗೀತೆ ಹಾಡಿದರು.