ಅಸಹಾಯಕರು, ನೊಂದವರಿಗೆ ಧ್ವನಿಯಾಗುವೆ: ಬದ್ರುದ್ದೀನ್ ಕೆ.ಮಾಣಿ

| Published : Mar 03 2025, 01:46 AM IST

ಅಸಹಾಯಕರು, ನೊಂದವರಿಗೆ ಧ್ವನಿಯಾಗುವೆ: ಬದ್ರುದ್ದೀನ್ ಕೆ.ಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಅನ್ನ ಕೊಟ್ಟವರನ್ನು ಯಾರು ಮರೆಯಬಾರದು. ಕಷ್ಟ ಸುಖಗಳಿಗೆ ಸ್ಪಂದಿಸುವವರನ್ನು ಗೌರವಿಸಬೇಕು. ನಿಮ್ಮ ಹಾರೈಕೆ ಅವರಿಗೆ ಇರಬೇಕು. ಮಂಡ್ಯದ ಜನ ಅನ್ನ ಹಾಕಿದ ಪುಣ್ಯದ ಫಲವಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಬಡವರಿಗೆ ಅನ್ನ ಹಾಕುವ ಶಕ್ತಿಯನ್ನು ದೇವರು ಕೊಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಅಸಹಾಯಕರು ಹಾಗೂ ನೊಂದವರಿಗೆ ಧ್ವನಿಯಾಗಿ ಆಡಳಿತ ನೀಡುತ್ತೇನೆ ಎಂದು ಕರ್ನಾಟಕ ಮಾಹಿತಿ ಆಯೋಗದ ನೂತನ ಆಯುಕ್ತ ಬದ್ರುದ್ದೀನ್ ಕೆ.ಮಾಣಿ ತಿಳಿಸಿದರು.

ಮಿಮ್ಸ್ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮಮತೆಯ ಮಡಿಲು ಅನ್ನದಾಸೋಹ ಕೇಂದ್ರದಲ್ಲಿ ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿಯಿಂದ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಮಂಡ್ಯ ಜಿಲ್ಲೆ ನನಗೆ ಎಲ್ಲವನ್ನೂ ಕಲಿಸಿದೆ. ಅನ್ನದ ಋಣ, ಆರ್ಥಿಕ ಹಾಗೂ ಸಾಮಾಜಿಕವಾಗಿ ಮೇಲೆ ಬರಲು ಕಾರಣವಾಗಿರುವ ಮಂಡ್ಯವನ್ನು ಎಂದಿಗೂ ನಾನು ಮರೆಯುವುದಿಲ್ಲ ಎಂದರು.

ಅನ್ನದ ಕಾಯಕ ಉತ್ತಮ ಹಾಗೂ ಅನುಕರಣೀಯವಾದದ್ದು. ಇದಕ್ಕೆ ಅಗತ್ಯ ಬೆಂಬಲವಿದೆ. ಮಂಡ್ಯದ ಜನರು ಅನ್ನ ಹಾಕುವುದರಲ್ಲಿ ಎತ್ತಿದ ಕೈ. ಅನ್ನವನ್ನು ಯಾರಿಗೂ ಇಲ್ಲ ಎನ್ನುವುದಿಲ್ಲ. ನಾನು ತಬ್ಬಲಿಯಾಗಿ ಎಲ್ಲೋ ಹುಟ್ಟಿ ಬೆಳೆದು ಇಲ್ಲಿಗೆ ಬಂದೆ. ಮಂಡ್ಯದವರು ಅನ್ನ ಹಾಕಿ ಸಾಕಿ ನನ್ನನ್ನು ಬೆಳೆಸಿದ್ದರು. ದೇವರು ಈಗ ಎಲ್ಲೂ ಕರೆದುಕೊಂಡು ಹೋಗಿ ಬಿಟ್ಟಿದ್ದಾನೆ ಎಂದರು.

ಅನ್ನ ಕೊಟ್ಟವರನ್ನು ಯಾರು ಮರೆಯಬಾರದು. ಕಷ್ಟ ಸುಖಗಳಿಗೆ ಸ್ಪಂದಿಸುವವರನ್ನು ಗೌರವಿಸಬೇಕು. ನಿಮ್ಮ ಹಾರೈಕೆ ಅವರಿಗೆ ಇರಬೇಕು. ಮಂಡ್ಯದ ಜನ ಅನ್ನ ಹಾಕಿದ ಪುಣ್ಯದ ಫಲವಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಬಡವರಿಗೆ ಅನ್ನ ಹಾಕುವ ಶಕ್ತಿಯನ್ನು ದೇವರು ಕೊಡಬೇಕು ಎಂದರು.

ಕರ್ನಾಟಕ ಮಾಹಿತಿ ಆಯೋಗದ ವಿಶ್ರಾಂತ ಆಯುಕ್ತ ಕೆ.ಎಂ.ಚಂದ್ರೇಗೌಡ ಅವರು ಬದ್ರುದ್ದೀನ್ ಕೆ.ಮಾಣಿ ಅವರನ್ನು ಅಭಿನಂದಿಸಿ ಮಾತನಾಡಿ, ಬಡವರ ಬಗ್ಗೆ ಬದ್ರುದ್ದೀನ್ ಅವರಿಗೆ ಇರುವ ಕಾಳಜಿ, ಮಾಡಿರುವ ಸೇವೆಗೆ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರ ಒಳ್ಳೆಯ ಹುದ್ದೆ ಸಿಕ್ಕಿದೆ. ಆ ಹುದ್ದೆಯಲ್ಲೂ ಕೂಡ ಅವರು ಬಡವರಿಗೆ ಸಹಾಯ ಮಾಡಬಹುದು ಎಂದರು.

ಬಹಳಷ್ಟು ಜನ ನ್ಯಾಯಕ್ಕಾಗಿ ಅವರ ಕಚೇರಿ, ನ್ಯಾಯಾಲಯಕ್ಕೆ ಬಡವರು ಬರುತ್ತಾರೆ. ಅವರಿಗೆ ನ್ಯಾಯ ದೊರಕಿಸಿ ಕೊಡುವುದು ಅವರ ಕರ್ತವ್ಯವಾಗಿದೆ. ಜಿಲ್ಲಾವಾರು ಪ್ರವಾಸ ಹೋಗುವಾಗ ಎಲ್ಲ ಬಡವರ ಅರ್ಜಿಗಳನ್ನು ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಕೆಲಸ ಮಾಡಲಿ ಎಂದರು.

ಈ ವೇಳೆ ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಪತ್ರಕರ್ತ ಸೋಮಶೇಖರ್ ಕೆರಗೋಡು, ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಕಾರ್ಯದರ್ಶಿ ಕೆ.ಪಿ.ಅರುಣ ಕುಮಾರಿ, ಎಂಜಿನಿಯರ್ ಕೆಂಪರಾಜು, ಚನ್ನನಕೆರೆ ಲಿಂಗಪ್ಪ, ಸುರೇಶ್ ಹಲವರು ಭಾಗವಹಿಸಿದ್ದರು.