ಅಜ್ಞಾನಿಗೂ ಸಂಸ್ಕಾರ ನೀಡುವ ವಚನ

| Published : Aug 08 2024, 01:40 AM IST

ಸಾರಾಂಶ

ವಚನಕಾರರು, ದಾರ್ಶನಿಕರು, ಪೂರ್ವಜರು ಎಲ್ಲರನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ವಿಶೇಷ ಜೀವನವನ್ನು ನಮಗೆ ಬಿಟ್ಟು ಹೋಗಿದ್ದಾರೆ. ವ್ಯಕ್ತಿಯ ಜೀವನ ಸಮಾಧಾನ, ಸುಖಿಯಾಗಬೇಕೆಂದರೆ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕಿದೆ.

ಹುಬ್ಬಳ್ಳಿ:

ಅಜ್ಞಾನಿಗೂ ಸಂಸ್ಕಾರ ಕೊಡುವ ಹಾಗೂ ಜೀವನಕ್ಕೆ ಸಾಮರ್ಥ್ಯ ಕೊಡುವ ಶಕ್ತಿ ವಚನಗಳಲ್ಲಿವೆ. ಧರ್ಮದ ಹೆಸರಿನಲ್ಲಿ ಸಮಾಜದೊಳಗೆ ದ್ವಂದ್ವ ಸೃಷ್ಟಿಸುವ ಕಾರ್ಯವಾಗುತ್ತಿದೆ. ಧರ್ಮ ಎಂದರೆ ಜೀವನ ಪದ್ಧತಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಆರ್‌ಎಸ್‌ಎಸ್‌ನ ಕರ್ನಾಟಕದ ಉತ್ತರದ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಹೇಳಿದರು.

ಅವರು ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಅರಿವು ಹಾಗೂ ಸಾಮರಸ್ಯ ವೇದಿಕೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶಯ ನುಡಿಗಳನ್ನಾಡಿದರು.

ವಚನಕಾರರು, ದಾರ್ಶನಿಕರು, ಪೂರ್ವಜರು ಎಲ್ಲರನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ವಿಶೇಷ ಜೀವನವನ್ನು ನಮಗೆ ಬಿಟ್ಟು ಹೋಗಿದ್ದಾರೆ. ವ್ಯಕ್ತಿಯ ಜೀವನ ಸಮಾಧಾನ, ಸುಖಿಯಾಗಬೇಕೆಂದರೆ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕಿದೆ ಎಂದರು.

ಧರ್ಮದ ನೆಲೆಯ ಮೇಲೆ ಸಂಪಾದನೆ ಮಾಡಿ ನಮ್ಮ ಬಯಕೆ ಈಡೇರಿಸಿಕೊಳ್ಳಬೇಕು ಎಂದು ಶರಣರು ತಿಳಿಸಿದ್ದಾರೆ. ಎಲ್ಲರೊಂದಿಗೆ ಸಹಬಾಳ್ವೆ, ಸಹ ಜೀವನ ನಡೆಸಲು ಆಶ್ರಮಗಳ ವ್ಯವಸ್ಥೆ ನೀಡಿದ್ದಾರೆ. ನಮ್ಮೊಂದಿಗೆ ಪ್ರಕೃತಿಯೂ ಇದೆ. ಇದಕ್ಕಾಗಿ ಜೀವನಕ್ರಮ ತಿಳಿಸಿದ್ದಾರೆ. ಅವರು ಹೇಳಿ ಸುಮ್ಮನಿರದೇ ವಿಚಾರಗಳ ಅನುಷ್ಠಾನಕ್ಕಾಗಿ ವ್ಯವಸ್ಥೆ ರೂಪಿಸಿದ್ದಾರೆ. ಅದಕ್ಕೆ ಉದಾಹರಣೆಯೇ ಕುಟುಂಬ ವ್ಯವಸ್ಥೆ ಎಂದು ಹೇಳಿದರು.

ವೇದ, ಉಪನಿಷತ್ತುಗಳನ್ನು ಅರ್ಥೈಸಿಕೊಳ್ಳುವುದು ಕಷ್ಟ ಎನ್ನುವ ಕಾಲದಲ್ಲಿ ಶರಣ ಪರಂಪರೆ ಬಂತು. ಸಾಮಾನ್ಯ ಕೆಲಸ ಮಾಡುತ್ತ ಕಾಯಕವೇ ಕೈಲಾಸ ಎಂದು ಶರಣರು ನಮಗೆ ತಿಳಿಸಿದ್ದಾರೆ. ಲೌಕಿಕ ಸಾಧನೆ ಮಾತ್ರವಲ್ಲದೇ ಪಾರಮಾರ್ಥಿಕ ಸಾಧನೆಯೂ ನಮಗೆ ಬೇಕು ಎಂದು ವಚನಗಳ ಮೂಲಕ ನಮಗೆ ಹೇಳಿದವರು ಶಿವಶರಣರು ಎಂದರು.

ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಉತ್ತಮ ಮಾರ್ಗ, ಕಾಯಕ ಶುದ್ಧವಾಗಿದ್ದರೆ ದೇವರನ್ನು ಮರೆತರೂ ನಡೆಯುತ್ತದೆ ಎಂದು ಶರಣರು ತಿಳಿಸಿದ್ದಾರೆ ಎಂದರು.

ಜನಮೇಜಯ ಉಮರ್ಜಿ ಪ್ರಾಸ್ತಾವಿಕ ಮಾತನಾಡಿದರು. ಶರತ್ ದೇಶಪಾಂಡೆ, ದೇವರಹುಬ್ಬಳ್ಳಿ ಸಿದ್ಧಾರೂಢ ಮಠದ ಸಿದ್ದಶಿವಯೋಗಿ ಸ್ವಾಮೀಜಿ, ಸುನೀಲ ಚಿಲ್ಲಾಳ, ಗುರು ಬನ್ನಿಕೊಪ್ಪ, ಸುಶೀಲೇಂದ್ರ ಕುಂದರಗಿ, ಪೂರ್ಣಾನಂದ ಮಳಲಿ, ಈರಣ್ಣ ಶಿರಸಂಗಿ, ಗಾಯತ್ರಿ ಕ್ಷೀರಸಾಗರ, ರೂಪಾ ಶೆಟ್ಟಿ ಸೇರಿದಂತೆ ಹಲವರಿದ್ದರು.