ಹೋಳಿ ಬಣ್ಣದಲ್ಲಿ ಮಿಂದೆದ್ದ ಮುಂಡಗೋಡ

| Published : Mar 30 2024, 12:46 AM IST / Updated: Mar 30 2024, 12:47 AM IST

ಸಾರಾಂಶ

ಹೋಳಿ ಪ್ರಯುಕ್ತ ಪಟ್ಟಣದ ಅಂಗಡಿ- ಮುಂಗ್ಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು.

ಮುಂಡಗೋಡ: ಶುಕ್ರವಾರ ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಎತ್ತ ನೋಡಿದರೂ ರಂಗು ರಂಗಿನ ಹೋಳಿಯಾಟದಿಂದ ಕೂಡಿದ್ದ ಪಟ್ಟಣ ಸಂಪೂರ್ಣ ಓಕುಳಿಯಲ್ಲಿ ಮುಳುಗಿತ್ತು. ಮಕ್ಕಳು ಮಹಿಳೆಯರು, ವೃದ್ಧರು ಎಂಬ ಭೇದಭಾವವಿಲ್ಲದೇ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಪಟ್ಟಣದ ಯಾವುದೇ ಮೂಲೆಗೆ ಹೋದರೂ ಹಲಿಗೆ ಸದ್ದು ಕೇಳಿ ಬರುತ್ತಿತ್ತು. ಈ ಬಾರಿ ಹಲಿಗೆ ಬಾರಿಸುವವರ ಸಂಖ್ಯೆ ಕೂಡ ಹೆಚ್ಚಿತ್ತು.

ಹೋಳಿ ಪ್ರಯುಕ್ತ ಪಟ್ಟಣದ ಅಂಗಡಿ- ಮುಂಗ್ಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಅಲ್ಲದೇ ಶುಕ್ರವಾರ ಗುಡ್ ಪ್ರೈಡೇ ಪ್ರಯುಕ್ತ ಸರ್ಕಾರಿ ರಜೆ ಇದ್ದಿದ್ದರಿಂದ ಕಚೇರಿಗಳು, ಬ್ಯಾಂಕ್, ಶಾಲಾ- ಕಾಲೇಜು ಸಂಪೂರ್ಣ ಬಂದ್ ಆಗಿದ್ದರಿಂದ ಶಿಕ್ಷಕರು ಸೇರಿದಂತೆ ನೌಕರರು ಕೂಡ ಬಣ್ಣದ ಆಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮೆರವಣಿಗೆ: ಮಧ್ಯಾಹ್ನದ ನಂತರ ಪಟ್ಟಣದ ಪ್ರತಿಷ್ಠಾಪಿಸಲಾಗಿದ್ದ ರತಿ ಕಾಮನ ಮೂರ್ತಿ ಮೆರವಣಿಗೆ ಹೊರಟು ಪ್ರಮುಖ ಬೀದಿಗಳ ಮೂಲಕ ಬಣ್ಣ ಎರಚುತ್ತ ಸಂಚರಿಸಿತು. ಸಹಸ್ರ ಸಂಖ್ಯೆಯಲ್ಲಿ ಸೇರಿದ ಜನ ಮೈ ನವಿರೇಳುವಂತೆ ಕುಣಿದು ಚೀರಾಡುತ್ತ ಮೋಜು ಮಸ್ತಿ ಮಾಡುತ್ತ ಸಾಗಿದ್ದು, ಹೋಳಿ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿತು.

ಮಡಿಕೆ ಒಡೆಯುವ ಕಾರ್ಯಕ್ರಮ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸುಮಾರ ೩೦ ಅಡಿ ಎತ್ತರದಲ್ಲಿ ಮಣ್ಣಿನ ಮಡಿಕೆ ಕಟ್ಟಿ ತಂಡ ರಚಿಸಿಕೊಂಡು ಒಬ್ಬರ ಮೇಲೊಬ್ಬರು ಹತ್ತಿ ನಾ ಮೇಲೆ ನೀ ಮೇಲೆ ಎಂದು ಮಡಿಕೆಯನ್ನು ಒಡೆಯುವ ಕಾರ್ಯಕ್ರಮ ನಡೆಸಲಾಯಿತು. ಬಳಿಕ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಪೂರೈಸಿ ರತಿ ಕಾಮನ ಮೂರ್ತಿಗಳನ್ನು ದಹಿಸುವ ಮೂಲಕ ಹೋಳಿ ಸಂಪನ್ನಗೊಳಿಸಲಾಯಿತು.

ಗ್ರಾಮೀಣ ಭಾಗದಲ್ಲೂ ಹೋಳಿ: ತಾಲೂಕಿನ ಮಳಗಿ, ಕೋಡಂಬಿ, ಓಣಿಕೇರಿ, ಚಿಗಳ್ಳಿ, ಗಣೇಶಪುರ, ಹಿರೇಹಳ್ಳಿ ಹಾಗೂ ಸಾಲಗಾಂವ ಗ್ರಾಮ ಸೇರಿದಂತೆ ವಿವಿಧ ಕಡೆ ಹೋಳಿ ಹಬ್ಬವನ್ನು ಆಚರಿಸಲಾಯಿತು.

ಬಿಗಿ ಪೊಲೀಸ್‌ ಬಂದೋಬಸ್ತ್: ಅಹಿತಕ ಘಟನೆ ನಡೆಯದಂತೆ ಪೊಲೀಸ್‌ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು. ಕಾಯ್ದಿಟ್ಟ ತುರ್ತು ಪೊಲೀಸ್ ತುಕಡಿಗಳು ಸೇರಿದಂತೆ ನೂರಾರು ಪೊಲೀಸರು ಕಾರ್ಯನಿರ್ವಹಿಸಿದರು.