ಅಣ್ಣಪ್ಪಗೆ ಚಾಕು ಇರಿದ ಆರೋಪಿಗಳ ಬಂಧನಕ್ಕೆ ವಾರ ಗಡುವು

| Published : Oct 01 2024, 01:23 AM IST

ಅಣ್ಣಪ್ಪಗೆ ಚಾಕು ಇರಿದ ಆರೋಪಿಗಳ ಬಂಧನಕ್ಕೆ ವಾರ ಗಡುವು
Share this Article
  • FB
  • TW
  • Linkdin
  • Email

ಸಾರಾಂಶ

ಅಡಕೆ ಕೀಳಿಸುವ ಕೆಲಸ ಗುತ್ತಿಗೆ ಹಿಡಿದು ಬದುಕು ಕಟ್ಟಿಕೊಂಡಿದ್ದ ಚನ್ನಗಿರಿ ತಾಲೂಕು ಸಾರಥಿ ಗ್ರಾಮದ ಮಡಿವಾಳರ ಅಣ್ಣಪ್ಪಗೆ ಚಾಕು ಇರಿದ ದುಷ್ಕರ್ಮಿಗಳನ್ನು ಇನ್ನೊಂದು ವಾರದೊಳಗೆ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲದಿದ್ದರೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಮಡಿವಾಳರ ಸಂಘ ಎಚ್ಚರಿಸಿದೆ.

- ಸ್ಪಂದಿಸದಿದ್ದರೆ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ: ಮಡಿವಾಳ ಸಮಾಜ ಎಚ್ಚರಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಅಡಕೆ ಕೀಳಿಸುವ ಕೆಲಸ ಗುತ್ತಿಗೆ ಹಿಡಿದು ಬದುಕು ಕಟ್ಟಿಕೊಂಡಿದ್ದ ಚನ್ನಗಿರಿ ತಾಲೂಕು ಸಾರಥಿ ಗ್ರಾಮದ ಮಡಿವಾಳರ ಅಣ್ಣಪ್ಪಗೆ ಚಾಕು ಇರಿದ ದುಷ್ಕರ್ಮಿಗಳನ್ನು ಇನ್ನೊಂದು ವಾರದೊಳಗೆ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲದಿದ್ದರೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಮಡಿವಾಳರ ಸಂಘ ಎಚ್ಚರಿಸಿದೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಯರಬಳ್ಳಿ ಉಮಾಪತಿ, ಸೆ.12ರಂದು ಮಡಿವಾಳರ ಅಣ್ಣಪ್ಪ ತನ್ನ ಸ್ನೇಹಿತ ಸುನೀಲ್‌ ಜೊತೆಗೆ ಕೆ.ಗಾಣದಕಟ್ಟೆಗೆ ಆಳುಗಳಿಗೆ ಬಟವಾಡಿ ಮಾಡಿ, ವಾಪಸ್‌ ಆಗುತ್ತಿದ್ದರು. ಈ ವೇಳೆ ಹೊಸಹಳ್ಳಿ ಶಕ್ತಿ ಬಾರ್‌ನಿಂದ ಅದೇ ಗ್ರಾಮದ ಮೂವರು ಜಗಳ ಮಾಡಿ, ಅಣ್ಣಪ್ಪಗೆ ಚಾಕು ಇರಿದಿದ್ದಾರೆ ಎಂದರು.

ಹೊಸಹಳ್ಳಿ ಶಕ್ತಿ ಬಾರ್‌ನಿಂದ ರಘು, ರಾಕೇಶ, ಅಶೋಕ ಎಂಬವರು ಕುಡಿದು ಹೊರಬರುತ್ತಿದ್ದರು. ಆಗ ರಘು ಎಂಬಾತ ಸುನೀಲ್‌ಗೆ ₹1 ಸಾವಿರ ನೀಡಿದ್ದಾಗಿ ತಕ್ಷಣ ಹಣ ಕೊಡುವಂತೆ ಒತ್ತಾಯಿಸಿದ್ದಾನೆ. ರಘು ಸಂಗಡಿಗರು ಸಹ ಹಣಕ್ಕಾಗಿ ಒತ್ತಾಯಿಸಿದ್ದಾರೆ. ಆಗ ಅಣ್ಣಪ್ಪ ಕೊಡುತ್ತೇನೆಂದು ಹೇಳಿದರೂ ಆ ಕ್ಷಣದಲ್ಲಿ ಮೂವರೂ ಆಕ್ರೋಶಗೊಂಡಿದ್ದಾರೆ. ಅಣ್ಣಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ. ರಾಕೇಶ ಎಂಬಾತ ಚಾಕುವಿನಿಂದ ಅಣ್ಣಪ್ಪನ ಹೊಟ್ಟೆಗೆ ಇರಿದಿದ್ದಾನೆ. ಅಣ್ಣಪ್ಪ ಕುಸಿದು ಬಿದ್ದಿದ್ದನು. ತಕ್ಷಣವೇ ಆತನನ್ನು ಚನ್ನಗಿರಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು, ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸೆ.13ರಂದು ಪ್ರಕರಣ ದಾಖಲಾಗಿದೆ. ಆದರೆ, ಅಲ್ಲಿನ ಪೊಲೀಸರು ಈವರೆಗೆ ಯಾರೊಬ್ಬರನ್ನೂ ಬಂಧಿಸಿಲ್ಲ. ಜಿಲ್ಲಾ ಪೊಲೀಸ್ ಅಧೀಕ್ಷಕರ ಗಮನಕ್ಕೆ ವಿಷಯ ತಂದರೂ ಪ್ರಯೋಜನವಾಗಿಲ್ಲ. ಮಡಿವಾಳ ಸಮಾಜದವರು ಬಡವರಾಗಿದ್ದಾರೆ. ಸಂಖ್ಯಾಬಲ ಇಲ್ಲವೆಂಬ ಕಾರಣಕ್ಕೆ ಇಂತಹ ಅಸಡ್ಡೆಯೇ? ಕಾನೂನು ಪ್ರಕಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಇಲಾಖೆ ಆರೋಪಿಗಳ ವಿಚಾರದಲ್ಲಿ ಯಾಕೆ ಹಿಂದಡಿ ಇಡುತ್ತಿದೆ ಎಂದು ಪ್ರಶ್ನಿಸಿದರು.

ಕೃತ್ಯದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಅವರನ್ನೂ ಭೇಟಿ ಮಾಡಿ ಮನವಿ ಮಾಡಿದ್ದೆವು. ಆದರೆ, ಶಾಸಕರಿಂದಲೂ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಪೊಲೀಸರಂತೂ ಆರೋಪಿಗಳು ನಿಮ್ಮ ಕೈಗೆ ಸಿಕ್ಕರೆ ಹಿಡಿದು ತನ್ನಿ ಎಂಬಂತೆ ಉಡಾಫೆಯಾಗಿ ಹೇಳಿದ್ದಾರೆ. ಮಡಿವಾಳ ಸಮಾಜ ರಕ್ಷಣೆ ಮಾಡಲು ಪೊಲೀಸ್ ಇಲಾಖೆ ಹಿಂಜರಿಯುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಶೀಘ್ರ ತಪ್ಪಿತಸ್ಥರ ಬಂಧಿಸಲು ಆಗ್ರಹಿಸಿದರು.

ಸಮಾಜದ ಮುಖಂಡರಾದ ಕೆ.ಎಚ್.ಗುಡ್ಡಪ್ಪ, ಲೋಕೇಶಪ್ಪ, ಮಹಾಂತೇಶ, ಹಾಲಸ್ವಾಮಿ, ಮಂಜಪ್ಪ ಸಾರಥಿ, ಮೈಲಾರಪ್ಪ, ನಾಗರಾಜ ಇತರರು ಇದ್ದರು.

- - - -30ಕೆಡಿವಿಜಿ4:

ದಾವಣಗೆರೆಯಲ್ಲಿ ಮಡಿವಾಳ ಸಮಾಜ ಜಿಲ್ಲಾಧ್ಯಕ್ಷ ಯರಬಳ್ಳಿ ಉಮಾಪತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.