ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ಕಾಲೇಜು ಪ್ರಾಂಶುಪಾಲರ ಮನವಿಯಂತೆ ಮುಂದಿನ ದಿನಗಳಲ್ಲಿ ೫೦ ಲಕ್ಷ ರು.ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಾಣ ಮಾಡಿಕೊಡುವುದಾಗಿ ಎಂಎಸ್‌ಐಎಲ್ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಭರವಸೆ ನೀಡಿದರು.ನಗರದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿನ ಮುಂಭಾಗದಲ್ಲಿ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರೋಪವನ್ನು ಉದ್ಘಾಟಿಸಿ ಮಾತನಾಡಿದರು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಪ್ರಮುಖವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸರ್ಕಾರಿ ಕಾಲೇಜುಗಳಲ್ಲೂ ನುರಿತ ಉಪನ್ಯಾಸಕರಿದ್ದು ಗುಣಾತ್ಮಕ ಶಿಕ್ಷಣ ದೊರೆಯುತ್ತಿದೆ ಎಂದರು. ಈ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳು ಕಾಲಾಹರಣ ಮಾಡದೇ ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಮಂಜುನಾಥ್ ಪ್ರಸನ್ನ ಮಾತನಾಡಿ, ಸರ್ಕಾರಿ ಕಾಲೇಜುಗಳಲ್ಲೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ವಿದ್ಯಾರ್ಥಿಗಳ ಸದುಪಯೋಗ ಪಡಿಸಿಕೊಳ್ಳಬೇಕು. ನಾವೆಲ್ಲರೂ ಕಾಲೇಜು ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಕಾಲೇಜು ಪ್ರಾಂಶುಪಾಲ ಸೋಮಣ್ಣ ಮಾತನಾಡಿ, ಕಾಲೇಜಿಗೆ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದೀರಿ. ಕಾಲೇಜಿಗೆ ಒಂದು ಸುಸಜ್ಜಿತ ಗ್ರಂಥಾಲಯ ನಿರ್ಮಾಣ ಮಾಡಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಚುಡಾಧ್ಯಕ್ಷ ಮಹಮ್ಮದ್ ಅಸ್ಗರ್, ಶಾಲಾಭಿವೃದ್ದಿ ಉಪಾಧ್ಯಕ್ಷ ಖಲೀಂವುಲ್ಲಾ, ಉಪನ್ಯಾಸಕ ಮಧು, ಸವಿತಾ, ಶೀಲಾ, ರಂಗಸ್ವಾಮಿ, ಮಲ್ಲೇಶ್, ಸುನೀಲ್, ಸತ್ಯದಾಸ್, ಉಮೇಶ್ ಇತರರು ಇದ್ದರು.