ಮಡಿಕೇರಿ ಗಾಂಧಿ ಮೈದಾನದಲ್ಲಿ ಸುಸಜ್ಜಿತ ಶಾಶ್ವತ ವೇದಿಕೆ ನಿರ್ಮಾಣ ಯೋಜನೆ

| Published : Oct 23 2024, 12:30 AM IST

ಮಡಿಕೇರಿ ಗಾಂಧಿ ಮೈದಾನದಲ್ಲಿ ಸುಸಜ್ಜಿತ ಶಾಶ್ವತ ವೇದಿಕೆ ನಿರ್ಮಾಣ ಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ದಸರಾ ವೇಳೆಗೆ ಮಡಿಕೇರಿ ಗಾಂಧಿ ಮೈದಾನದಲ್ಲಿ ಸುಸಜ್ಜಿತ ವೇದಿಕೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ನಗರಸಭೆ ನಿರ್ಧರಿಸಿದೆ. ಮಂಗಳವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ನಗರಸಭೆ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಈ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮುಂದಿನ ದಸರಾ ವೇಳೆಗೆ ಮಡಿಕೇರಿ ಗಾಂಧಿ ಮೈದಾನದಲ್ಲಿ ಸುಸಜ್ಜಿತ ವೇದಿಕೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ನಗರಸಭೆ ನಿರ್ಧರಿಸಿದೆ.

ಮಂಗಳವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ನಗರಸಭೆ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಈ ವರ್ಷದ ಮಡಿಕೇರಿ ದಸರಾ ಜನೋತ್ಸವ ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ. ಈ ಯಶಸ್ಸು ಮುಂದೆಯೂ ಮರುಕಳಿಸಲು ಮುಂದಿನ ದಸರಾಕ್ಕೆ ಈಗಿನಿಂದಲೇ ಸಿದ್ಧತೆ ನಡೆಯಬೇಕು. ಶಾಶ್ವತ ವೇದಿಕೆ ನಿರ್ಮಿಸಬೇಕಿದೆ. ಸುಸುಜ್ಜಿತ ವೇದಿಕೆ ನಿರ್ಮಾಣದ ಜತೆಯಲ್ಲೇ ಗ್ರಿನ್ ರೂಂ, ಪಾವತಿಸಿ ಉಪಯೋಗಿಸುವ ಶೌಚಗೃಹ, ಪಾವತಿ ಉಪಯೋಗಿಸುವ ವಾಹನ ನಿಲುಗಡೆ ವ್ಯವಸ್ಥೆ ಮಾಡಲು 2 ಕೋಟಿ ರು. ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ದಸರಾ ಮಾತ್ರವಲ್ಲದೆ ಉಳಿದ ದಿನಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಕಾರ್ಯಕ್ರಮಗಳಿಗೆ ಇವುಗಳನ್ನು ಬಳಸಿಕೊಳ್ಳಬಹುದು. ಇದಕ್ಕಾಗಿ ಬಾಡಿಗೆ ನಿಗದಿಪಡಿಸುವುದರಿಂದ ಆದಾಯ ಕೇಂದ್ರೀಕೃತ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದರು.

ಜಿಲ್ಲಾಧಿಕಾರಿ ಪ್ರಸ್ತಾವನೆಗೆ ಸರ್ವ ಸದಸ್ಯರೂ ಒಮ್ಮತದ ಒಪ್ಪಿಗೆ ಸೂಚಿಸಿದರು.

ಸದಸ್ಯ ರಾಜೇಶ್ ಯಲ್ಲಪ್ಪ ಮಾತನಾಡಿ ದಸರಾ ಸಂದರ್ಭ ವ್ಯಾಪಕವಾಗಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ ಬಳಕೆ ಆಗಿದ್ದರಿಂದ ಇದರ ತ್ಯಾಜ್ಯವೇ ದೊಡ್ಡ ಪ್ರಮಾಣದಲ್ಲಿ ಸಂಗ್ರಹ ಆಗಿತ್ತು. ಇದರಿಂದ ನಗರದ ಸೌಂದರ್ಯ ಹಾಳಾಗಿದ್ದು ಮಾತ್ರವಲ್ಲದೆ ಪರಿಸರದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಹಾಗಾಗಿ ನಗರದಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲ್‌ ನಿಷೇಧಿಸಬೇಕು ಎಂದು ಸಲಹೆ ಮಾಡಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, 2 ಲೀಟರ್‌ಗಿಂತ ಕಡಿಮೆ ಅಳತೆಯ ನೀರಿನ ಬಾಟಲಿ, ತಂಪು ಪಾನೀಯ ಬಾಟಲಿ ಬಳಕೆ ನಿಷೇಧಿಸಲಾಗುವುದು. ಕಟ್ಟುನಿಟ್ಟಾಗಿ ನಿಯಮ ಜಾರಿಮಾಡಿದರೆ ಕೆಲವೇ ತಿಂಗಳಲ್ಲಿ ಈ ಸಮಸ್ಯೆ ಹತೋಟಿಗೆ ಬರಬಹುದು ಎಂದು ಹೇಳಿದರು.

ಬೀದಿ ನಾಯಿಗಳ ಹಾವಳಿ:

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯ ರಮೇಶ್ ಹೇಳಿದರು. ಮಂಗಗಳ ಕಾಟ ಮಿತಿ ಮೀರಿರುವ ಬಗ್ಗೆ ಮನ್ಸೂರ್ ಅಲಿ ಹೇಳಿದರು.

ಎಸ್‌ಡಿಪಿಐನ ಮೇರಿ ವೇಗಸ್ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಕಾಡು ಹಂದಿಗಳ ಹಾವಳಿ ವಿಪರೀತವಾಗಿದೆ ಎಂದರು.

ನಾಮನಿರ್ದೇಶಿತ ಸದಸ್ಯ ಮುದ್ದುರಾಜ್ ನಗರದಲ್ಲಿನ ಬೀಡಾಡಿ ದನಗಳ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ನಾಯಿಗಳ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆದಿದೆ. ಟೆಂಡರ್ ಕರೆದರೂ ದರ ಕಡಿಮೆ ಎಂದು ಯಾರೂ ಬರುತ್ತಿಲ್ಲ. ಬೇರೆ ಯಾವುದಾದರೂ ಮಾರ್ಗದ ಬಗ್ಗೆ ಪರಿಶೀಲಿಸಲಾಗುವುದು. ಉಳಿದ ಪ್ರಾಣಿಗಳ ಹಾವಳಿ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಮಾತನಾಡಲಾಗುವುದು ಎಂದು ತಿಳಿಸಿದರು.

ಸುದರ್ಶನ ವೃತ್ತದಿಂದ ರಾಜಾಸೀಟ್ ತನಕ ಕಾಬೂಲ್ ಸ್ಟೋನ್ ಬಳಸಿ ಫುಟ್‌ಪಾತ್ ನಿರ್ಮಿಸಲಾಗುವುದು. ಡೆಲ್ಟಾ ಯೋಜನೆ ಅಡಿಯಲ್ಲಿ ಇದಕ್ಕೆ ಅನುದಾನ ಸಿಗಲಿದೆ. ಫುಟ್ ಪಾತ್ ನಿರ್ಮಾಣ ಆದರೆ ಅಗತ್ಯ ಇರುವ ಕಡೆ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಲು ಅನುಕೂಲ ಆಗುತ್ತದೆ. ಇದರಿಂದ ಪಾದಚಾರಿಗಳಿಗೂ ಸಹಕಾರಿ ಎಂದು ಜಿಲ್ಲಾಧಿಕಾರಿ ಹೇಳಿದರು.

ನಗರಸಭೆ ಪೌರಾಯುಕ್ತ ಎಚ್.ಆರ್. ರಮೇಶ್, ಅಧಿಕಾರಿಗಳು, ಸಿಬ್ಬಂದಿ ಇದ್ದರು