ಪ್ರತಿಭಾವಂತ ಹಾಗೂ ಉತ್ತಮ ಕ್ರೀಡಾಪಟುಗಳಿದ್ದರೂ ನಿತ್ಯ ಅಭ್ಯಾಸ ನಡೆಸಲು ಸೂಕ್ತ ಕ್ರೀಡಾಂಗಣದ ಕೊರತೆ. ಹೀಗಾಗಿ ಕ್ರೀಡಾಪಟುಗಳ ಅನುಕೂಲಕ್ಕಾಗಿ ಪಟ್ಟಣದಲ್ಲಿ ಸುಸಜ್ಜಿತ ತಾಲೂಕು ಕ್ರೀಡಾಂಗಣ ನಿರ್ಮಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ವಲಯ-1ರ ಕ್ರೀಡಾಕೂಟದ ಕ್ರೀಡಾಧ್ಯಕ್ಷ ರಮೇಶ್ ಎನ್.ಶಿವಪೂರ ಒತ್ತಾಯಿಸಿದರು.
ಕಂಪ್ಲಿ: ಪಟ್ಟಣದಲ್ಲಿ ಪ್ರತಿಭಾವಂತ ಹಾಗೂ ಉತ್ತಮ ಕ್ರೀಡಾಪಟುಗಳಿದ್ದರೂ ನಿತ್ಯ ಅಭ್ಯಾಸ ನಡೆಸಲು ಸೂಕ್ತ ಕ್ರೀಡಾಂಗಣದ ಕೊರತೆ. ಹೀಗಾಗಿ ಕ್ರೀಡಾಪಟುಗಳ ಅನುಕೂಲಕ್ಕಾಗಿ ಪಟ್ಟಣದಲ್ಲಿ ಸುಸಜ್ಜಿತ ತಾಲೂಕು ಕ್ರೀಡಾಂಗಣ ನಿರ್ಮಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ವಲಯ-1ರ ಕ್ರೀಡಾಕೂಟದ ಕ್ರೀಡಾಧ್ಯಕ್ಷ ರಮೇಶ್ ಎನ್.ಶಿವಪೂರ ಒತ್ತಾಯಿಸಿದರು.
ಪಟ್ಟಣದ ಷಾ. ಮಿಯಾಚಂದ್ ಸರ್ಕಾರಿ ಪ್ರೌಢಶಾಲಾವರಣದಲ್ಲಿ ಸೋಮವಾರ ನಡೆದ ಎಸ್.ಎನ್. ಪೇಟೆ ಹಾಗೂ 8ನೇ ವಾರ್ಡ್ ಕ್ಲಸ್ಟರ್‌ಗಳ ವಲಯ-1ರ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಅನೇಕ ಮಕ್ಕಳು ಮತ್ತು ಯುವ ಕ್ರೀಡಾಪಟುಗಳಿದ್ದಾರೆ. ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡಿದರೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದರೆ ಸೂಕ್ತ ಕ್ರೀಡಾಂಗಣ ಮತ್ತು ತರಬೇತಿ ಸೌಲಭ್ಯಗಳ ಕೊರತೆಯಿಂದಾಗಿ ಕ್ರೀಡಾಪಟುಗಳು ನಿರಂತರ ಅಭ್ಯಾಸ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಕ್ರೀಡಾಂಗಣದಲ್ಲಿ ಅಗತ್ಯ ಮೂಲಸೌಕರ್ಯಗಳಾದ ವಿವಿಧ ಕ್ರೀಡೆಗಳಿದೆ ಪ್ರತ್ಯೇಕ ಮೈದಾನ, ಓಟದ ಪಥ, ಕುಡಿಯುವ ನೀರು, ಶೌಚಾಲಯ ಹಾಗೂ ಕ್ರೀಡಾ ಪರಿಕರ ಕಲ್ಪಿಸಿದರೆ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆದು ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಶಿಕ್ಷಕರಾದ ಎಂ. ರೇವಣ್ಣ, ಹನುಮಂತಪ್ಪ ಹಾಗೂ ಎಂ.ಎ. ನಾಗನಗೌಡ ಅವರು ಜಂಟಿಯಾಗಿ ಕ್ರೀಡಾಜ್ಯೋತಿ ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಕ್ರೀಡಾಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಗೆಲುವು-ಸೋಲಿನ ಫಲಿತಾಂಶದ ಬಗ್ಗೆ ಹೆಚ್ಚು ಚಿಂತಿಸದೆ ತಮ್ಮಲ್ಲಿರುವ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಪ್ರದರ್ಶಿಸುವತ್ತ ಗಮನಹರಿಸಬೇಕು. ಕ್ರೀಡೆಯು ಮಕ್ಕಳಲ್ಲಿ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ, ತಂಡದ ಮನೋಭಾವ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಕಾರ್ಯದರ್ಶಿ ಆರ್. ವೆಂಕಟರಮಣ, ಪ್ರಮುಖರಾದ ನಂದ್ಯಾಲ ಮುತ್ತಣ್ಣ, ಜೋಗಿ ನಾಯ್ಕ ರುದ್ರಪ್ಪ, ಮರಿಸ್ವಾಮಿ, ಸಿಆರ್‌ಪಿ ಗಂಗಾಧರ, ರೇಣುಕಾರಾಧ್ಯ, ಕರುಣಾಕರಚಾರ್, ಪ್ರಭಾಕರ, ಟಿ.ಎಂ.ಬಸವರಾಜ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬೀರಲಿಂಗ ಸೇರಿದಂತೆ ಶಿಕ್ಷಕರು, ಕ್ರೀಡಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.