ಪ್ರಿಯಕರನಿಗಾಗಿ ಗಂಡನನ್ನು ಬಲಿಕೊಟ್ಟ ಪತ್ನಿ

| Published : Jul 31 2024, 01:00 AM IST

ಸಾರಾಂಶ

ಪ್ರಿಯತಮನಿಗಾಗಿ ಪತ್ನಿಯೇ ತನ್ನ ಪತಿಯನ್ನು ಹತ್ಯೆ ಮಾಡಿರುವ ಘಟನೆ

ಕನ್ನಡಪ್ರಭ ವಾರ್ತೆ ಕೊರಟಗೆರೆ ಪ್ರಿಯತಮನಿಗಾಗಿ ಪತ್ನಿಯೇ ತನ್ನ ಪತಿಯನ್ನು ಹತ್ಯೆ ಮಾಡಿರುವ ಘಟನೆ ಕೊರಟಗೆರೆ ತಾಲೂಕು ಮಲ್ಲೇಕಾವು ಬಳಿ ನಡೆದಿದೆ. ಪ್ರಕಾಶ್ (30) ಎಂಬಾತನೇ ಮೃತ ವ್ಯಕ್ತಿಯಾಗಿದ್ದು 28 ವರ್ಷದ ಹರ್ಷಿತಾ ಗಂಡನನ್ನೇ ಕೊಲೆ ಮಾಡಿಸಿದ ಪತ್ನಿ.

ಪ್ರಕಾಶ್ ಕಲಬುರ್ಗಿ ಜಿಲ್ಲೆಯ ಚಿಂಚಲಿ ಮೂಲದವವರಾಗಿದ್ದು, ಮೂರು ವರ್ಷದ ಹಿಂದೆ ಪ್ರಕಾಶ್ ಮತ್ತು ಹರ್ಷಿತಾಗೆ ಇನ್ಸ್ಟ್ರಾಗ್ರಾಂನಲ್ಲಿ ಪರಿಚಯವಾಗಿತ್ತು. ಬಳಿಕ ಪರಸ್ಪರ ಪ್ರೀತಿಸಿ ಇಬ್ಬರೂ ಮದುವೆಯಾಗಿದ್ದರು. ಮದುವೆಯ ಬಳಿಕ ಪತ್ನಿಯ ಜೊತೆ ಮಲ್ಲೇಕಾವು ಗ್ರಾಮದಲ್ಲಿ ವಾಸವಿದ್ದರು. ಇವರ ದಾಂಪತ್ಯಕ್ಕೆ ಒಂದೂವರೆ ವರ್ಷದ ಮಗುವೂ ಇತ್ತು. ಆದರೆ ಇತ್ತೀಚೆಗೆ ಹರ್ಷಿತಾಳಿಗೆ ಇನ್ಸ್ಟ್ರಾಗ್ರಾಂನಲ್ಲಿ ಮಾಜಿ ಪ್ರಿಯಕರ ಗುಂಡ ಎಂಬಾತನೊಂದಿಗೆ ಮತ್ತೆ ಪ್ರೇಮಾಂಕುರವಾಗಿತ್ತು. ಕಳೆದ 2 ತಿಂಗಳ ಹಿಂದೆ ಹರ್ಷಿತಾ ತನ್ನ ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಇದ್ದಳು. ಈ ಸಂಬಂಧ ಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಹರ್ಷಿತಾ ಮನೆಗೆ ವಾಪಾಸಾಗಿದ್ದರು. ಆದರೆ ಗಂಡನ ಜೊತೆ ಜಗಳವಾಡುತ್ತಿದ್ದ ಹರ್ಷಿತಾ ಕೊಲೆಗಾಗಿ ಸಹೋದರ ಸೋಮಶೇಖರ್ ಹಾಗೂ ಪ್ರಿಯತಮ ಗುಂಡನಿಗೆ ಸುಫಾರಿ ನೀಡಿದ್ದಳು ಎನ್ನಲಾಗಿದೆ. ಹೀಗಾಗಿ ಸೋಮಶೇಖರ್ ಪ್ರಕಾಶನನ್ನು ನಂಬಿಸಿ ಕರೆಸಿಕೊಂಡಿದ್ದರು. ಸೋಮಶೇಖರ್ ಜೊತೆಗೆ ಗುಂಡ ಮತ್ತು ಆತನ ಸ್ನೇಹಿತ ರಂಗಸ್ವಾಮಯ್ಯ ಕಾದು ಕುಳಿತಿದ್ದರು. ಪ್ರಕಾಶ್ ಬರುತ್ತಿದ್ದಂತೆ ಡ್ರ್ಯಾಗರ್ ನಿಂದ ಎದೆಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದಾರೆ. ಬಳಿಕ ಅಪಘಾತದ ರೀತಿಯಲ್ಲಿ ಸಾವನ್ನಪ್ಪಿದ್ದಾನೆಂದು ಬಿಂಬಿಸಲು ಆರೋಪಿಗಳು ಹೊರಟಿದ್ದರು. ಆದರೆ ಎದೆಭಾಗಕ್ಕೆ ಚುಚ್ಚಿದ ಗಾಯ ಪತ್ತೆಯಾದ ಹಿನ್ನೆಲೆ ಕೊಲೆ ಎಂದು ಖಚಿತವಾಗಿದ್ದು, ಕೊರಟಗೆರೆ ಪೊಲೀಸರು ಹರ್ಷಿತಾ , ಸೋಮಶೇಖರ್, ರಂಗಸ್ವಾಮಯ್ಯನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಗುಂಡನಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.